ಗಾಜಾ: ಗಾಜಾದ ಎರಡನೇ ಅತಿದೊಡ್ಡ ನಗರ ಖಾನ್ ಯೂನಿಸ್ ರಕ್ತಸಿಕ್ತವಾಗಿದೆ. ಸೋಮವಾರ ರಾತ್ರಿಯಿಂದ ಮಂಗಳವಾರ ಬೆಳಗಿನವರೆಗೆ ಇಸ್ರೇಲ್ ನಡೆಸಿರುವ ಭಾರಿ ಬಾಂಬ್ ದಾಳಿಗೆ ಬೆಚ್ಚಿ ಬಿದ್ದಿದೆ. ಈ ದಾಳಿಯಲ್ಲಿ ಗಾಯಗೊಂಡಿದ್ದ ನೂರಾರು ಜನರನ್ನು ಆಂಬ್ಯುಲೆನ್ಸ್ ಮತ್ತು ಖಾಸಗಿ ಕಾರುಗಳಲ್ಲಿ ಆಸ್ಪತ್ರೆಗಳಿಗೆ ಕರೆದೊಯ್ಯಲಾಗಿದೆ. ಆಂಬ್ಯುಲೆನ್ಸ್‌ಗಳು ಹತ್ತಾರು ಗಾಯಾಳುಗಳನ್ನು ನಾಸರ್ ಆಸ್ಪತ್ರೆಗೆ ಸಾಗಿಸಿದವು. ರೆಡ್ ಕ್ರಾಸ್ ಮತ್ತು ವಿಶ್ವಸಂಸ್ಥೆ ಎರಡಕ್ಕೂ ಏನಾಗಿದೆ ಅಂತಾ ಮಹಿಳೆಯೊಬ್ಬರು ಆಸ್ಪತ್ರೆಯ ತುರ್ತು ವಿಭಾಗದಲ್ಲಿ ಆತಂಕ ವ್ಯಕ್ತಪಡಿಸಿದರು. ಖಾನ್ ಯೂನಿಸ್‌ಗೆ ಪ್ರವೇಶಿಸಿರುವ ಯುದ್ಧ ಟ್ಯಾಂಕರ್ಗಳು ಮತ್ತು ಪಡೆಗಳು ಉಪಗ್ರಹ ಚಿತ್ರಗಳಲ್ಲಿ ಕಂಡು ಬಂದವು. ಇಸ್ರೇಲಿ ಸೇನೆಯು ಪ್ಯಾಲೆಸ್ಟೀನಿಯನ್ನರನ್ನು ಸ್ಥಳಾಂತರಿಸಲು ಆದೇಶಿಸಿದೆ.
ಸುರಂಗಗಳಿಗೆ ನೀರು ತುಂಬಿಸುತ್ತಿರುವ ಇಸ್ರೇಲ್: ಮತ್ತೊಂದೆಡೆ, ಗಾಜಾದಲ್ಲಿ ಇಸ್ರೇಲ್ ಪಡೆಗಳಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿರುವ ಹಮಾಸ್ ಸುರಂಗಗಳಿಗೆ ನೀರು ತುಂಬಿಸುವ ಪ್ರಯತ್ನಗಳು ಪ್ರಾರಂಭವಾಗಿವೆ. ಈ ಯೋಜನೆಯು ಯಶಸ್ವಿಯಾದರೆ ಸುರಂಗಗಳಲ್ಲಿ ಅಡಗಿರುವ ಹಮಾಸ್ ಉಗ್ರಗಾಮಿಗಳು ತಮ್ಮ ಜೀವಗಳನ್ನು ಉಳಿಸಲು ಹೊರಬರಬೇಕಾಗುತ್ತದೆ ಎಂದು ಇಸ್ರೇಲ್ ನಿರೀಕ್ಷಿಸುತ್ತದೆ. ಇತ್ತೀಚಿನ ಕಾರ್ಯತಂತ್ರದ ಭಾಗವಾಗಿ, IDF ಪಡೆಗಳು ಸುರಂಗಗಳಿಗೆ ಭಾರಿ ನೀರಿನ ಪಂಪ್‌ಗಳನ್ನು ಅಳವಡಿಸಿವೆ.
ಇಸ್ರೇಲ್ ವಿರುದ್ಧ ಗಲ್ಫ್ ಗರಂ: ಮತ್ತೊಂದೆಡೆ ಗಾಜಾದಲ್ಲಿ ಇಸ್ರೇಲ್ ಮಾನವ ನಿಂದನೆ ನಡೆಯುತ್ತಿದೆ ಮತ್ತು ಆ ದೇಶದ ನಡವಳಿಕೆಯಿಂದಾಗಿ ಪಶ್ಚಿಮ ಏಷ್ಯಾ ಅಪಾಯದಲ್ಲಿದೆ ಎಂದು ಟರ್ಕಿ ಮತ್ತು ಕತಾರ್ ರಾಷ್ಟ್ರಗಳು ಅಭಿಪ್ರಾಯಪಟ್ಟಿದ್ದು, ಕೂಡಲೇ ಕದನ ವಿರಾಮಕ್ಕೆ ಒತ್ತಾಯಿಸುತ್ತಿವೆ. ಕತಾರ್‌ನ ಆಡಳಿತಗಾರ ಶೇಖ್ ತಮೀಮ್ ಬಿನ್ ಹಮದ್ ಅಲ್ ಥಾನಿ ಅವರು ಮಂಗಳವಾರ ದೋಹಾದಲ್ಲಿ ನಡೆದ ಗಲ್ಫ್ ಸಹಕಾರ ಮಂಡಳಿಯ ಸಮ್ಮೇಳನದಲ್ಲಿ ಮಾತನಾಡಿದರು. ಈ ಸಮ್ಮೇಳನದಲ್ಲಿ ಆರು ಗಲ್ಫ್ ರಾಷ್ಟ್ರಗಳ ಮುಖ್ಯಸ್ಥರು ಭಾಗವಹಿಸಿದ್ದರು.
ಆಕ್ರಮಿತ ಪ್ಯಾಲೆಸ್ತೀನ್‌ನಲ್ಲಿ ಇಸ್ರೇಲ್ ಅಪರಾಧಗಳನ್ನು ಎಸಗುತ್ತಿದೆ, ಎಲ್ಲ ಧಾರ್ಮಿಕ, ನೈತಿಕ ಮತ್ತು ಮಾನವೀಯ ಮೌಲ್ಯಗಳನ್ನು ಉಲ್ಲಂಘಿಸುತ್ತಿದೆ. ಇಸ್ರೇಲಿ ಸೈನಿಕರು ಮಾನವೀಯತೆಯ ಮೇಲೆ ದಾಳಿ ನಡೆಸಿದ್ದಾರೆ. ಆತ್ಮರಕ್ಷಣೆ ಎಂದರೆ ಮಾನವ ಹಿಂಸಾಚಾರ ಮಾಡುವುದಲ್ಲ. ಇಸ್ರೇಲ್‌ನ ಅಪರಾಧಗಳ ಬಗ್ಗೆ ಅಂತಾರಾಷ್ಟ್ರೀಯ ತನಿಖೆ ನಡೆಯಬೇಕು. ಗಾಜಾದಲ್ಲಿ ಮಹಿಳೆಯರು ಮತ್ತು ಮಕ್ಕಳು ಸಾಯುತ್ತಿರುವಾಗ ಅಂತಾರಾಷ್ಟ್ರೀಯ ಸಮುದಾಯವು ಇಸ್ರೇಲ್‌ಗೆ ಹೇಗೆ ಅವಕಾಶ ನೀಡುತ್ತಿದೆ ಎಂದು ಥಾನಿ ಅವರು ಪ್ರಶ್ನಿಸಿದರು.
'ಸಹಾಯ ಮಾಡಲು ಸಾಧ್ಯವಿಲ್ಲ': ಇಸ್ರೇಲ್ ಪ್ರಧಾನಿ ನೆತನ್ಯಾಹು ಗಾಜಾದಲ್ಲಿ ಅಪರಾಧಗಳನ್ನು ಮಾಡುವ ಮೂಲಕ ಪಶ್ಚಿಮ ಏಷ್ಯಾಕ್ಕೆ ಅಪಾಯ ಮಾಡುತ್ತಿದ್ದಾರೆ. ಅವರು ಕಾನೂನು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಗಾಜಾದಲ್ಲಿ ಮಾನವೀಯತೆಯ ಮೇಲಿನ ದಾಳಿಯು ಪ್ರಶ್ನಾತೀತವಾಗಿರಲು ಸಾಧ್ಯವಿಲ್ಲ. ತಮ್ಮ ದೇಶವು ಶಾಶ್ವತ ಕದನ ವಿರಾಮವನ್ನು ಬಯಸುತ್ತದೆ ಎಂದು ಟರ್ಕಿಶ್ ಅಧ್ಯಕ್ಷ ತಯ್ಯಿಪ್ ಎರ್ಡೊಗನ್ ಹೇಳಿದ್ದಾರೆ. ಯುಎಇ, ಬಹ್ರೇನ್, ಸೌದಿ ಅರೇಬಿಯಾ, ಕುವೈತ್, ಓಮನ್ ಮತ್ತು ಟರ್ಕಿಯ ನಾಯಕರು ಈ ಸಮಾವೇಶದಲ್ಲಿ ಭಾಗವಹಿಸಿದ್ದರು.
ಓದಿ: ಸೇನೆಯ ಎಡವಟ್ಟಿನಿಂದ ನಡೆದ ಡ್ರೋನ್ ದಾಳಿ: 90 ಜನರ ಸಾವು, ಅನೇಕರಿಗೆ ಗಾಯ, ಕ್ಷಮೆಯಾಚಿಸಿದ ಸೇನಾ ಮುಖ್ಯಸ್ಥ