ಕೊಲಂಬೊ (ಶ್ರೀಲಂಕಾ): ತೀವ್ರ ಆರ್ಥಿಕ ಬಿಕ್ಕಟ್ಟಿನಿಂದ ಕಂಗೆಟ್ಟಿರುವ ಶ್ರೀಲಂಕಾದಲ್ಲಿ ಈಗ ಮತ್ತೊಂದು ಗಂಭೀರ ಸಮಸ್ಯೆ ಎದುರಾಗಿದೆ. ಜವಳಿ ಉದ್ಯಮದಲ್ಲಿ ಕೆಲಸ ಮಾಡುತ್ತಿದ್ದ ಬಹುತೇಕ ಮಹಿಳೆಯರು ಕೆಲಸ ಕಳೆದುಕೊಂಡಿದ್ದಾರೆ. ಈ ಮಧ್ಯೆ ಹೊಟ್ಟೆಪಾಡಿಗಾಗಿ ಬಹಳಷ್ಟು ಮಹಿಳೆಯರು ವೇಶ್ಯಾವಾಟಿಕೆಗೆ ಇಳಿಯುತ್ತಿರುವುದು ದೇಶದ ಅಧೋಗತಿಗೆ ಸಾಕ್ಷಿಯಾಗಿದೆ.
ಶ್ರೀಲಂಕಾದಲ್ಲಿ ಈ ಹಿಂದೆಂದೂ ಕಾಣದ ಆರ್ಥಿಕ ಬಿಕ್ಕಟ್ಟು ಎದುರಾಗಿದ್ದು, 22 ಮಿಲಿಯನ್ ನಾಗರಿಕರು ಇನ್ನಿಲ್ಲದ ಸಂಕಷ್ಟ ಎದುರಿಸುತ್ತಿದ್ದಾರೆ. ಹಲವಾರು ಕುಟುಂಬಗಳು ಅಕ್ಷರಶಃ ಬೀದಿಗೆ ಬಿದ್ದಿವೆ. ಎರಡು ಹೊತ್ತಿನ ಆಹಾರವೂ ಸಿಗದ ಕುಟುಂಬಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.
ಇಂಥ ಸಮಯದಲ್ಲಿ ದೇಶದ ಅಲ್ಲಲ್ಲಿ ತಾತ್ಕಾಲಿಕ ವೇಶ್ಯಾವಾಟಿಕೆಗಳು ತಲೆ ಎತ್ತುತ್ತಿವೆ. ತುತ್ತು ಕೂಳಿಗಾಗಿ ವೇಶ್ಯಾವಾಟಿಕೆಯನ್ನು ಆಶ್ರಯಿಸುತ್ತಿರುವ ಮಹಿಳೆಯರ ಸಂಖ್ಯೆ ಹೆಚ್ಚಾಗುತ್ತಿದ್ದು, ಕಳೆದ ಕೆಲ ತಿಂಗಳಲ್ಲಿ ವೇಶ್ಯಾವಾಟಿಕೆಯಲ್ಲಿ ಶೇ 30ರಷ್ಟು ಏರಿಕೆಯಾಗಿದೆ ಎಂದು ಸ್ಟ್ಯಾಂಡ್ ಅಪ್ ಮೂವ್ಮೆಂಟ್ ಲಂಕಾ (ಎಸ್ಯುಎಂಎಲ್) ಸಂಘಟನೆ ತಿಳಿಸಿದೆ. ಎಸ್ಯುಎಂಎಲ್ ಲೈಂಗಿಕ ಕಾರ್ಯಕರ್ತೆಯರ ಹಿತಾಸಕ್ತಿಗಾಗಿ ಶ್ರಮಿಸುತ್ತಿರುವ ಸಂಘಟನೆಯಾಗಿದೆ.
ಸ್ಪಾ ಮತ್ತು ಆರೋಗ್ಯ ಕೇಂದ್ರಗಳೆಂದು ಬೋರ್ಡ್ ಹಾಕಿಕೊಂಡು ಅನೇಕ ಕಡೆಗಳಲ್ಲಿ ಒಳಗಡೆ ವೇಶ್ಯಾವಾಟಿಕೆ ನಡೆಯುತ್ತಿದೆ. ತಮ್ಮ ಕುಟುಂಬಕ್ಕೆ ಮೂರು ಹೊತ್ತಿನ ಊಟ ಗಳಿಸಲು ಅವರಿಗೆ ಉಳಿದಿರುವುದು ಇದೊಂದೇ ದಾರಿ ಎನ್ನುತ್ತಾರೆ ಕೆಲವರು. ಕೆಲಸ ಕಳೆದುಕೊಂಡು ಈಗ ಲೈಂಗಿಕ ಕಾರ್ಯಕರ್ತೆಯಾಗಿರುವ 21 ವರ್ಷದ ರೆಹಾನಾ (ಹೆಸರು ಬದಲಿಸಲಾಗಿದೆ) ಎಂಬುವರು ತಮ್ಮ ಸ್ಥಿತಿಯನ್ನು ಮಾಧ್ಯಮದ ಮುಂದೆ ಬಿಚ್ಚಿಟ್ಟರು.
"ನಾನು ಕೆಲಸ ಮಾಡುತ್ತಿದ್ದ ಟೆಕ್ಸ್ಟೈಲ್ ಕಾರ್ಖಾನೆಯಿಂದ ನನ್ನನ್ನು ಕಳೆದ ಡಿಸೆಂಬರ್ನಲ್ಲಿ ಹೊರಹಾಕಲಾಯಿತು. ನಂತರ ದಿನಗೂಲಿ ಆಧಾರದಲ್ಲಿ ಮತ್ತೊಂದು ಕೆಲಸ ಸಿಕ್ಕಿತು. ಅಲ್ಲಿ ಕೆಲಸದವರು ಕಡಿಮೆ ಇದ್ದಾಗ ಮಾತ್ರ ನನಗೆ ಕೆಲಸ ಕೊಡುತ್ತಿದ್ದರು. ಅದೂ ನಿಯಮಿತವಾಗಿ ಸಂಬಳ ಸಿಗುತ್ತಿರಲಿಲ್ಲ. ನನ್ನ ಕುಟುಂಬದ ನಿರ್ವಹಣೆಗೆ ಇದು ಎಲ್ಲಿಯೂ ಸಾಕಾಗುತ್ತಿರಲಿಲ್ಲ. ನಂತರ ಓರ್ವ ಸ್ಪಾ ಮಾಲೀಕರು ನನ್ನನ್ನು ಮಾತನಾಡಿಸಿದಾಗ, ಲೈಂಗಿಕ ಕಾರ್ಯಕರ್ತೆಯಾಗಿ ಕೆಲಸ ಮಾಡಲು ನಿರ್ಧರಿಸಿದೆ." ಎಂದು ರೆಹಾನಾ ಹೇಳಿದರು.
ನಲವತ್ತೆರಡು ವರ್ಷದ ರೋಜಿ (ಹೆಸರು ಬದಲಾಯಿಸಲಾಗಿದೆ) ಹೀಗೆ ಲೈಂಗಿಕ ಕಾರ್ಯಕರ್ತೆಯಾದ ಮತ್ತೊಬ್ಬ ಮಹಿಳೆಯಾಗಿದ್ದಾಳೆ. ಏಳು ವರ್ಷದ ಮಗುವಿನ ತಾಯಿಯಾಗಿರುವ ಈಕೆ, ಗಂಡನಿಂದ ವಿಚ್ಛೇದನ ಪಡೆದಿದ್ದಾಳೆ. "ಆರ್ಥಿಕ ಬಿಕ್ಕಟ್ಟು ಇರುವುದರಿಂದ ಆದಾಯವು ಸಾಕಾಗುತ್ತಿಲ್ಲ. ನನ್ನ ಕುಟುಂಬದ ಅಗತ್ಯಗಳಿಗೆ ಹಣ ಸಾಕಾಗುವುದಿಲ್ಲ. ಅದಕ್ಕಾಗಿಯೇ ನಾನು ಈ ವೃತ್ತಿಗೆ ಇಳಿದೆ." ಎಂದು ರೋಜಿ ತಿಳಿಸಿದರು.
ಸದ್ಯ ಶ್ರೀಲಂಕಾ ಇಂಧನ, ಆಹಾರ ಮತ್ತು ವಿದೇಶಿ ವಿನಿಮಯದ ತೀವ್ರ ಕೊರತೆಯನ್ನು ಎದುರಿಸುತ್ತಿದೆ ಮತ್ತು ಅತಿ ಕೆಟ್ಟ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ. ದೇಶಕ್ಕೆ ಐಎಂಎಫ್ ಸಹಾಯದ ಪ್ಯಾಕೇಜ್ ನೀಡಲಿದೆ ಎಂದು ಈ ದ್ವೀಪ ರಾಷ್ಟ್ರದ ಜನರು ನಿರೀಕ್ಷಿಸುತ್ತಿದ್ದಾರೆ.