ವಾಷಿಂಗ್ಟನ್(ಅಮೆರಿಕ): ಭಾರತೀಯ ಅಮೆರಿಕನ್ ಮಹಿಳೆ ಅರುಣಾ ಮಿಲ್ಲರ್ ಮೇರಿಲ್ಯಾಂಡ್ ನ ಲೆಫ್ಟಿನೆಂಟ್ ಗವರ್ನರ್ ಆಗಿ ಆಯ್ಕೆಯಾಗಿದ್ದಾರೆ. ರಾಜ್ಯದ ಲೆಫ್ಟಿನೆಂಟ್ ಗವರ್ನರ್ ರೇಸ್ ನಲ್ಲಿ ಗೆದ್ದ ಮೊದಲ ಭಾರತೀಯ ಅಮೆರಿಕನ್ ಎಂಬ ಹೆಗ್ಗಳಿಕೆಯಿಂದ ಅವರು ಹೊಸ ಇತಿಹಾಸ ಸೃಷ್ಟಿಸಿದ್ದಾರೆ.
ಲೆಫ್ಟಿನೆಂಟ್ ಗವರ್ನರ್ ರಾಜ್ಯಪಾಲರನ್ನು ಅನುಸರಿಸುವ ರಾಜ್ಯದ ಅತ್ಯುನ್ನತ ಅಧಿಕಾರಿಯಾಗಿದ್ದಾರೆ. ರಾಜ್ಯಪಾಲರು ರಾಜ್ಯದಿಂದ ಹೊರಗಿರುವಾಗ ಅಥವಾ ಅಸಮರ್ಥರಾಗಿರುವಾಗ ಅವರ ಪಾತ್ರವನ್ನು ವಹಿಸುತ್ತಾರೆ. ಗವರ್ನರ್ ಮೃತಪಟ್ಟರೆ, ರಾಜೀನಾಮೆ ನೀಡಿದರೆ ಅಥವಾ ಅಧಿಕಾರದಿಂದ ವಜಾಗೊಂಡರೆ ಲೆಫ್ಟಿನೆಂಟ್ ಗವರ್ನರ್ ಕೂಡ ಗವರ್ನರ್ ಸ್ಥಾನವನ್ನು ಅಲಂಕರಿಸಲಿದ್ದಾರೆ.
ಅರುಣಾ ಮೇರಿಲ್ಯಾಂಡ್ನ ಮಾಜಿ ಪ್ರತಿನಿಧಿ, ಡೆಮಾಕ್ರಟಿಕ್ ಗವರ್ನರ್ ಚುನಾಯಿತರಾದ ವೆಸ್ ಮೂರ್ ಅವರೊಂದಿಗೆ ಲೆಫ್ಟಿನೆಂಟ್ ಗವರ್ನರ್ ಸ್ಪರ್ಧೆಯಲ್ಲಿದ್ದರು. ಅಮೆರಿಕ ಅಧ್ಯಕ್ಷ ಜೋ ಬೈಡನ್ ಮತ್ತು ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರು ಅರುಣಾ ಪರವಾಗಿ ಪ್ರಚಾರ ಮಾಡಿದ್ದರು. ಅರುಣಾ ಹಿಂದೂ ರಾಷ್ಟ್ರೀಯವಾದಿಗಳನ್ನು ಆಕರ್ಷಿಸುತ್ತಿದ್ದಾರೆ ಎಂಬ ಆರೋಪಗಳು ವಿರೋಧಿಗಳಿಂದ ಕೇಳಿಬಂದಿದ್ದವು. ಈ ಆರೋಪಗಳನ್ನು ಅರುಣಾ ತಳ್ಳಿಹಾಕಿದ್ದರು. ಅರುಣಾ ಮಿಲ್ಲರ್ ಮೂಲತಃ ಆಂದ್ರಪ್ರದೇಶದವರಾಗಿದ್ದು, ಹೆತ್ತವರೊಂದಿಗೆ ಅಮೆರಿಕಕ್ಕೆ ವಲಸೆ ಹೋಗಿದ್ದರು.
ಇದನ್ನೂ ಓದಿ:ಫೋರ್ಬ್ಸ್ ಪಟ್ಟಿಯಲ್ಲಿ ಭಾರತೀಯ ಮೂವರು ಮಹಿಳಾ ಉದ್ಯಮಿಗಳಿಗೆ ಸ್ಥಾನ