ಸಿಂಗಾಪುರ: ಇಲ್ಲಿನ ಸೆಂಟ್ರಾ ಬ್ಯುಸಿನೆಸ್ ಡಿಸ್ಟ್ರಿಕ್ಟ್‌ನಲ್ಲಿರುವ ಯೋಗ ಕೇಂದ್ರದಲ್ಲಿ ಶಿಕ್ಷಕನಾಗಿದ್ದ ಭಾರತೀಯ ಮೂಲದ ವ್ಯಕ್ತಿಯೊಬ್ಬ ಮಹಿಳೆಯರಿಗೆ ಲೈಂಕಿಗ ಕಿರುಕುಳ ನೀಡಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ. ಈ ಹಿನ್ನೆಲೆಯಲ್ಲಿ ಆತನನ್ನು ಅಲ್ಲಿನ ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.
24 ವರ್ಷದ ಯುವತಿಯೊಬ್ಬಳು ದೂರು ನೀಡಿದ್ದು, 2020 ರ ಜುಲೈ 11 ರಂದು ರಾಜ್‌ಪಾಲ್ ಸಿಂಗ್ ಎಂಬಾತ ಕಿರುಕುಳ ನೀಡಿದ್ದಾಗಿ ಆರೋಪಿಸಿದ್ದಾಳೆ. ಯೋಗ ತರಗತಿಯ ಸಮಯದಲ್ಲಿ ಅನುಚಿತವಾಗಿ ವರ್ತಿಸಿರುವುದಾಗಿ ಆಕೆ ದೂರಿದ್ದಾಳೆ. ಸಂತ್ರಸ್ತೆಯು ಮೊದಲು ತನ್ನ ತರಗತಿಯಲ್ಲಿ ಏನಾಯಿತು ಎಂಬುದರ ಕುರಿತು ವಾಟ್ಸ್ ಆ್ಯಪ್ ಮೂಲಕ ಸ್ನೇಹಿತನಿಗೆ ತಿಳಿಸಿದ್ದಾಳೆ ಎಂದು ಡೆಪ್ಯುಟಿ ಪಬ್ಲಿಕ್ ಪ್ರಾಸಿಕ್ಯೂಟರ್ ಸೆಲೀನ್ ಯಾಪ್ ಸಿಂಗ್ ಅವರು ವಿಚಾರಣೆ ವೇಳೆ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ಬಳಿಕ ಸಂತ್ರಸ್ತೆಯು ಟ್ರಸ್ಟ್ ಯೋಗ ಕೇಂದ್ರದ ಸಹಾಯಕ ವ್ಯವಸ್ಥಾಪಕರಾಗಿದ್ದ ಅರವಿಂದ್ ಗಣರಾಜ್ ಅವರೊಂದಿಗೆ ಈ ಕುರಿತು ಚರ್ಚಿಸಿದ್ದಾಳೆ. ಜುಲೈ 31, 2020 ರಂದು ತನಗಾದ ಅನುಭವದ ಬಗ್ಗೆ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿ ವಿವರಿಸಿದ್ದಾಳೆ. ಈಕೆಯ ಪೋಸ್ಟ್ ನೋಡಿದ 28 ಮತ್ತು 37 ವರ್ಷ ವಯಸ್ಸಿನ ಇತರೆ ಇಬ್ಬರು ಕೂಡಾ ತಮಗಾದ ಕೆಟ್ಟ ಅನುಭವವನ್ನು ಹಂಚಿಕೊಂಡು ನಂತರ ಆಕೆಯನ್ನು ಭೇಟಿ ಮಾಡಿದ್ದಾರೆ. ಆ ನಂತರ 28 ವರ್ಷದ ಯುವತಿಯೂ ಸಹ ತನ್ನ ಅನುಭವದ ಬಗ್ಗೆ ಫೇಸ್‌ಬುಕ್ ಪೋಸ್ಟ್ ಮಾಡಿದ್ದಾಳೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳವಾರ ಕ್ಯಾಮರಾದಲ್ಲಿದ್ದ ಸಾಕ್ಷ್ಯಗಳನ್ನು ಸಂತ್ರಸ್ತೆಯೋರ್ವರು ನ್ಯಾಯಾಲಯಕ್ಕೆ ನೀಡಿದ್ದಾರೆ. ಆದ್ರೆ, ನ್ಯಾಯಾಲಯ ದಾಖಲೆಗಳ ಪರಿಶೀಲನೆಯ ಕುರಿತಾದ ಹೆಚ್ಚಿನ ವಿವರ ಬಹಿರಂಗಪಡಿಸಿಲ್ಲ. 33 ವರ್ಷದ ಆರೋಪಿ ಸಿಂಗ್, ಏಪ್ರಿಲ್ 1, 2019 ರಂದು ಟೆಲೋಕ್ ಆಯರ್ ಸ್ಟ್ರೀಟ್‌ನಲ್ಲಿರುವ ಟ್ರಸ್ಟ್ ಯೋಗದಲ್ಲಿ ಯೋಗ ಬೋಧಕರಾಗಿ ನೇಮಕಗೊಂಡಿದ್ದರು.
ಇದನ್ನೂ ಓದಿ: ಉಬರ್ ಚಾಲಕನಿಂದ ಮಹಿಳಾ ಪತ್ರಕರ್ತೆಗೆ ಲೈಂಗಿಕ ಕಿರುಕುಳ; ಪೊಲೀಸರಿಗೆ ದೂರು
ಉಬರ್ ಚಾಲಕನಿಂದ ಲೈಂಗಿಕ ಕಿರುಕುಳ: ಕಳೆದ ಮಾರ್ಚ್ 3 ರಂದು ರಾಷ್ಟ್ರ ರಾಜಧಾನಿಯಲ್ಲಿ ಲೈಂಗಿಕ ಕಿರುಕುಳ ಪ್ರಕರಣವೊಂದು ಬೆಳಕಿಗೆ ಬಂದಿತ್ತು. ಉಬರ್ ಆಟೋ ಚಾಲಕನ ವಿರುದ್ಧ ಮಹಿಳಾ ಪತ್ರಕರ್ತೆ ದೂರು ನೀಡಿದ್ದು, ತನ್ನ ನಿವಾಸದಿಂದ ಸ್ನೇಹಿತನನ್ನು ಭೇಟಿ ಮಾಡಲು ಹೋಗುತ್ತಿದ್ದಾಗ ಮಾರ್ಗಮಧ್ಯೆ ಚಾಲಕ ದುಷ್ಕೃತ್ಯ ಎಸಗಿದ್ದಾನೆ ಎಂದು ಆರೋಪಿಸಿದ್ದಾರೆ. ಘಟನೆ ಕುರಿತು ದೆಹಲಿ ಮಹಿಳಾ ಆಯೋಗಕ್ಕೂ ಕೂಡ ದೂರು ಸಲ್ಲಿಸಲಾಗಿದೆ. ದೂರು ಸ್ವೀಕರಿಸಿ ಆಯೋಗವು, ನಗರ ಪೊಲೀಸ್ ಮತ್ತು ಕ್ಯಾಬ್ ಸಂಸ್ಥೆಗೆ ನೋಟಿಸ್ ನೀಡಿದೆ. ಉಬರ್ ಆಟೋದಲ್ಲಿ ಪ್ರಯಾಣಿಸುವ ಸಂದರ್ಭದಲ್ಲಿ ತನಗಾದ ಕಿರುಕುಳವನ್ನು ಸಂತ್ರಸ್ತೆ ಟ್ವೀಟ್‌ನಲ್ಲಿ ಕೂಡ ವಿವರಿಸಿದ್ದಾರೆ.
ಇನ್ನು ಉತ್ತರ ಪ್ರದೇಶದಲ್ಲಿ ಕೋಚಿಂಗ್ ಮುಗಿಸಿ ಮನೆಗೆ ಹಿಂತಿರುಗುತ್ತಿದ್ದ ವಿದ್ಯಾರ್ಥಿನಿಯರನ್ನು ಅಡ್ಡಗಟ್ಟಿ ಫೋನ್ ನಂಬರ್ ಕೇಳಿದ ಹುಡುಗನಿಗೆ ವಿದ್ಯಾರ್ಥಿನಿಯರು ಸೇರಿಕೊಂಡು ಥಳಿಸಿದ ಘಟನೆ ಫರೂಕಾಬಾದ್ನಲ್ಲಿ ನಡೆದಿತ್ತು. ಕೊತ್ವಾಲಿ ಪ್ರದೇಶದ ರೈಲ್ವೆ ರಸ್ತೆಯ ಮೊಹಲ್ಲಾ ಸಿಂಧಿ ಕಾಲೋನಿಯಲ್ಲಿ ಹುಡುಗನೊಬ್ಬ ವಿದ್ಯಾರ್ಥಿನಿಯರನ್ನ ಹಿಂಬಾಲಿಸಿ, ಅಡ್ಡಗಟ್ಟಿ ಮೊಬೈಲ್ ನಂಬರ್ ಕೇಳಿದ್ದಾನೆ. ಇದರಿಂದ ಕೋಪಗೊಂಡ ಇಬ್ಬರು ವಿದ್ಯಾರ್ಥಿನಿಯರು ಆತನನ್ನು ಹಿಡಿದು ಧರ್ಮದೇಟು ನೀಡಿದ್ದಾರೆ. ಘಟನೆಯ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.