ಟೋಕಿಯೋ: ದೇಶದ ಪ್ರಮುಖ ವಲಯಗಳಲ್ಲಿ ಅಮೆರಿಕದ ಹೂಡಿಕೆಯನ್ನು ಉತ್ತೇಜಿಸಲು ಭಾರತ ಮತ್ತು ಅಮೆರಿಕ ಹೂಡಿಕೆ ಪ್ರೋತ್ಸಾಹ ಒಪ್ಪಂದಕ್ಕೆ ಸಹಿ ಹಾಕಿವೆ. ಇಲ್ಲಿ ನಡೆದ ಕ್ವಾಡ್ ಶೃಂಗಸಭೆಯ ಸಂದರ್ಭದಲ್ಲಿ ಭಾರತ - ಅಮೆರಿಕ ಹೂಡಿಕೆ ಪ್ರೋತ್ಸಾಹ ಒಪ್ಪಂದಕ್ಕೆ (IIA) ವಿದೇಶಾಂಗ ಕಾರ್ಯದರ್ಶಿ ವಿನಯ್ ಕ್ವಾತ್ರಾ ಮತ್ತು ಯುಎಸ್ ಇಂಟರ್ನ್ಯಾಷನಲ್ ಡೆವಲಪ್ಮೆಂಟ್ ಫೈನಾನ್ಸ್ ಕಾರ್ಪೊರೇಷನ್ (DFC) ಸಿಇಒ ಸ್ಕಾಟ್ ನಾಥನ್ ಸಹಿ ಹಾಕಿದ್ದಾರೆ.
ವಿದೇಶಿ ಕಾರ್ಯದರ್ಶಿ ವಿನಯ್ ಕ್ವಾತ್ರಾ ಮತ್ತು ಸ್ಕಾಟ್ ನಾಥನ್ ಅವರು ಭಾರತ - ಅಮೆರಿಕ ಹೂಡಿಕೆ ಪ್ರೋತ್ಸಾಹ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. IIA ಗೆ ಸಹಿ ಮಾಡುವುದರಿಂದ ಭಾರತದಲ್ಲಿ ವರ್ಧಿತ ಹೂಡಿಕೆಗಳಿಗೆ ಹೆಚ್ಚಿನ ಬೆಂಬಲ ದೊರೆಯಲಿದೆ. ಇದರಿಂದಾಗಿ ಪ್ರಮುಖ ಕ್ಷೇತ್ರಗಳಲ್ಲಿ ಹೂಡಿಕೆಗಳನ್ನು ಉತ್ತೇಜಿಸಲು ಸಹಕಾರಿ ಆಗುತ್ತದೆ ಎಂದು ಎಂಇಎ ವಕ್ತಾರ ಅರಿಂದಮ್ ಬಾಗ್ಚಿ ಟ್ವೀಟ್ ಮಾಡಿದ್ದಾರೆ.
ಏಪ್ರಿಲ್‌ನಲ್ಲಿ ನಡೆದ ನಾಲ್ಕನೇ ಭಾರತ-ಅಮೆರಿಕ 2+2 ಸಚಿವರ ಸಂವಾದದ ಸಂದರ್ಭದಲ್ಲಿ, ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಜೆ ಬ್ಲಿಂಕೆನ್, ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಜೆ ಆಸ್ಟಿನ್ III, ಭಾರತದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಅವರು ಸತತ ಮಾತುಕತೆ ನಡೆಸಿದ್ದು, ಈ ಒಪ್ಪಂದಗಳ ಮೂಲಕ ಯಶಸ್ವಿಯಾದಂತಾಗಿದೆ.
ಈ ಒಪ್ಪಂದವು ಭಾರತದಲ್ಲಿ ತನ್ನ ಹೂಡಿಕೆಯನ್ನು ವಿಸ್ತರಿಸಲು ಅನುವು ಮಾಡಿಕೊಡಲಿದೆ. ನವೀಕರಿಸಬಹುದಾದ ಇಂಧನ, ಕೃಷಿ, ಆರೋಗ್ಯ ಮತ್ತು ಎಸ್ಎಂಇ ಹಣಕಾಸು ಮುಂತಾದ ನಿರ್ಣಾಯಕ ಕ್ಷೇತ್ರಗಳಲ್ಲಿ ಖಾಸಗಿ ವಲಯದ ನೇತೃತ್ವದ ಹೂಡಿಕೆಗಳಿಗೆ ಒಪ್ಪಂದವು ಪೂರಕವಾಗಲಿದೆ.
ಇದನ್ನೂ ಓದಿ: ಬಂದೂಕು ಹಿಡಿದು ಚುನಾವಣಾ ಪ್ರಚಾರ.. ಜಾರ್ಖಂಡ್ ರಾಜಕೀಯದಲ್ಲಿ ಕೋಲಾಹಲ