ಭಾರತ ವಿರೋಧಿ ಪ್ರಚಾರದೊಂದಿಗೆ ಮೊಹಮ್ಮದ್ ಮುಯಿಜ್ಜು ಮಾಲ್ಡೀವ್ಸ್ ಅಧ್ಯಕ್ಷರಾಗಿ ಆಯ್ಕೆಗಿದ್ದಾರೆ. ಇದು ಕೇವಲ ಅವರಲ್ಲಿದ್ದ ವಾಕ್ಚಾತುರ್ಯದಿಂದ ಮಾತ್ರ ಸಾಧ್ಯವಾಗಿತ್ತು. ಮುಯಿಜ್ಜು ಮಾಲ್ಡೀವಿಯನ್ ಅಧ್ಯಕ್ಷೀಯ ಚುನಾವಣೆಯಲ್ಲಿ 'ಇಂಡಿಯಾ ಔಟ್' ನಂತರ 'ಇಂಡಿಯನ್ ಮಿಲಿಟರಿ ಔಟ್' ಎಂದು ಪ್ರಚಾರ ಮಾಡಿ ಅವರು ಗೆದ್ದಿರಬಹುದು. ಆದರೆ, ವಾಸ್ತವವಾಗಿ ನೋಡುವುದಾದರೆ, ಹಿಂದೂ ಮಹಾಸಾಗರದ ದ್ವೀಪಸಮೂಹ ರಾಷ್ಟ್ರ (ಮಾಲ್ಡೀವ್ಸ್)ದಲ್ಲಿ ಇರುವ ಭಾರತೀಯ ಭದ್ರತಾ ಸಿಬ್ಬಂದಿಗಳ ಸಂಖ್ಯೆ 100 ಕ್ಕಿಂತ ಕಡಿಮೆ! ಇದು ವಾಸ್ತವವಾಗಿ ಸುಮಾರು 70 ಆಗಿದೆ.
'ಇಂಡಿಯಾ ಔಟ್' ಅಭಿಯಾನವು ಕೇವಲ ಮಾತುಗಾರಿಕೆಯಾಗಿದೆ ಎಂದು ಅಧ್ಯಕ್ಷರಾಗಿ ಆಯ್ಕೆಯಾದ ಮುಯಿಜ್ಜು ಅವರ ವಕ್ತಾರ ಮೊಹಮ್ಮದ್ ಫಿರ್ಜುಲ್ ಅಬ್ದುಲ್ಲಾ ಖಲೀಲ್ ಒಪ್ಪಿಕೊಳ್ಳುವುದರ ಜೊತೆಗೆ ಮಾಲ್ಡೀವ್ಸ್‌ನಲ್ಲಿರುವ ಭಾರತೀಯ ಸೇನಾ ಸಿಬ್ಬಂದಿಗಳ ನಿಖರ ಸಂಖ್ಯೆ ತಿಳಿದಿಲ್ಲ ಎಂದು ಹೇಳಿದರು. "ಒಟ್ಟು ಸಂಖ್ಯೆಯ ಬಗ್ಗೆ ನಾವು ಇನ್ನೂ ಸಂಪೂರ್ಣ ಮಾಹಿತಿಯನ್ನು ಸ್ವೀಕರಿಸಿಲ್ಲ" ಎಂದು ಫಿರ್ಜುಲ್ ಈ ವಾರದ ಆರಂಭದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದರು.
ಮಾಲ್ಡೀವ್ಸ್‌ನಲ್ಲಿ ನಡೆದ ಈ ವರ್ಷದ ಅಧ್ಯಕ್ಷೀಯ ಚುನಾವಣೆಯಲ್ಲಿ 'ಇಂಡಿಯಾ ಫಸ್ಟ್' ನೀತಿಗೆ ಹೆಸರುವಾಸಿಯಾದ ಹಾಲಿ ಅಧ್ಯಕ್ಷ ಇಬ್ರಾಹಿಂ ಸೋಲಿಹ್ ಅವರನ್ನು ಚೀನಾ ಪರ ಇರುವ ಮುಯಿಜ್ಜು ಸೋಲಿಸಿದ್ದಾರೆ. ಪ್ರಸ್ತುತ ಮಾಲ್ಡೀವ್ಸ್ನ ರಾಜಧಾನಿ ಮಾಲೆಯ ಮೇಯರ್ ಆಗಿ ಸೇವೆ ಸಲ್ಲಿಸುತ್ತಿರುವ ಮುಯಿಜ್ಜು, ಪೀಪಲ್ಸ್ ನ್ಯಾಷನಲ್ ಕಾಂಗ್ರೆಸ್ (PNC) ಮತ್ತು ಪ್ರೋಗ್ರೆಸ್ಸಿವ್ ಪಾರ್ಟಿ ಆಫ್ ಮಾಲ್ಡೀವ್ಸ್ (PPM) ಜಂಟಿ ಅಭ್ಯರ್ಥಿಯಾಗಿದ್ದರು. ಆರಂಭದಲ್ಲಿ, ಚೀನಾ ಪರ ನಿಲುವಿಗೆ ಹೆಸರುವಾಸಿಯಾದ PPM ನ ಮಾಜಿ ಅಧ್ಯಕ್ಷ ಅಬ್ದುಲ್ಲಾ ಯಮೀನ್ PNC ಮತ್ತು PPM ನ ಜಂಟಿ ಅಭ್ಯರ್ಥಿಯಾಗಿ ನಾಮನಿರ್ದೇಶನಗೊಂಡಿದ್ದರು. ಆದರೆ, ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಯಮೀನ್ 11 ವರ್ಷಗಳ ಜೈಲು ಶಿಕ್ಷೆ ಅನುಭವಿಸುತ್ತಿರುವುದರಿಂದ ಚುನಾವಣೆಗೆ ಸ್ಪರ್ಧಿಸಲು ಅನರ್ಹರಾದರು. ಇದರ ಪರಿಣಾಮವಾಗಿ PNCಯ ಮುಯಿಜ್ಜು ಜಂಟಿ PNC ಮತ್ತು PPM ನ ಅಭ್ಯರ್ಥಿಯಾಗಿ ನಾಮ ನಿರ್ದೇಶನಗೊಂಡರು.
ನವ ದೆಹಲಿಯ ನೆರೆಹೊರೆಯ ಮೊದಲ ನೀತಿಯ ಭಾಗವಾಗಿ, ಮಾಲ್ಡೀವ್ಸ್ ಭಾರತಕ್ಕೆ ಕಾರ್ಯತಂತ್ರವಾಗಿ ಮಹತ್ವದ್ದಾಗಿದೆ. ಈ ಎರಡು ರಾಷ್ಟ್ರಗಳು ಜನಾಂಗೀಯ, ಭಾಷೆ, ಸಾಂಸ್ಕೃತಿಕ, ಧಾರ್ಮಿಕ ಮತ್ತು ವಾಣಿಜ್ಯ ಸಂಪರ್ಕವನ್ನು ಹೊಂದಿದೆ. ಅದಾಗ್ಯೂ, 2008 ರಿಂದ ಮಾಲ್ಡೀವ್ಸ್ನಲ್ಲಿನ ಆಡಳಿತದಿಂದ ಭಾರತ ಮತ್ತು ಮಾಲ್ಡೀವ್ಸ್ ಸಂಬಂಧಕ್ಕೆ, ವಿಶೇಷವಾಗಿ ರಾಜಕೀಯ ಮತ್ತು ಕಾರ್ಯತಂತ್ರದ ಕ್ಷೇತ್ರಗಳಲ್ಲಿ ಗಮನಾರ್ಹ ಸವಾಲುಗಳನ್ನು ಒಡ್ಡಿದೆ.
ಯಮೀನ್ ಅವರು 2013 ಮತ್ತು 2018ರ ನಡುವೆ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದಾಗ ಭಾರತ ಮತ್ತು ಮಾಲ್ಡೀವ್ಸ್ ನಡುವಿನ ಸಂಬಂಧಗಳು ಹದೆಗೆಟ್ಟವು. ಅದಾಗಿ, 2018ರಲ್ಲಿ ಸೋಲಿಹ್ ಅಧಿಕಾರಕ್ಕೆ ಬಂದ ನಂತರವೇ ನವದೆಹಲಿ ಮತ್ತು ಮಾಲೆ ನಡುವಿನ ಸಂಬಂಧಗಳು ಸುಧಾರಿಸಿದ್ದವು.
2022ರಲ್ಲಿ 'ಇಂಡಿಯಾ ಔಟ್' ಅಭಿಯಾನವನ್ನು ನಿಷೇಧಿಸಿದ ನಂತರ, ಮುಯಿಜ್ಜು ಅದನ್ನು 'ಇಂಡಿಯನ್ ಮಿಲಿಟರಿ ಔಟ್' ಅಭಿಯಾನ ಎಂದು ಬದಲಾಯಿಸಿದರು. ತಾವು ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಮಾಲ್ಡೀವ್ಸ್‌ನಲ್ಲಿರುವ ಭಾರತೀಯ ಸೇನಾ ಸಿಬ್ಬಂದಿಯನ್ನು ತೆಗೆದುಹಾಕಲು ತಾನು ನವದೆಹಲಿಯೊಂದಿಗೆ ಮಾತುಕತೆ ನಡೆಸುತ್ತಿದ್ದೇನೆ ಎಂದು ಹೇಳಿದರು. ಇದೀಗ ಭಾರತೀಯ ಸೇನಾ ಸಿಬ್ಬಂದಿಯ ನಿಖರ ಸಂಖ್ಯೆಯನ್ನು ದೃಢೀಕರಿಸಲಾಗಿಲ್ಲ ಎಂದು ಅವರ ವಕ್ತಾರರು ಒಪ್ಪಿಕೊಂಡ ನಂತರ, ಈಟಿವಿ ಭಾರತ್‌ಗೆ ಈ ಸಂಖ್ಯೆ 100 ಕ್ಕಿಂತ ಕಡಿಮೆ ಇದೆ ಎಂದು ತಿಳಿದು ಬಂದಿದೆ.
'ಮಾಲ್ಡೀವ್ಸ್‌ನಲ್ಲಿ ಸುಮಾರು 70 ಭಾರತೀಯ ಸೇನಾ ಸಿಬ್ಬಂದಿ ಇದ್ದಾರೆ' ಎಂದು ದಕ್ಷಿಣ ಏಷ್ಯಾದಲ್ಲಿ ಪರಿಣತಿ ಹೊಂದಿರುವ ಮನೋಹರ್ ಪಾರಿಕತ್ ಇನ್‌ಸ್ಟಿಟ್ಯೂಟ್ ಆಫ್ ಡಿಫೆನ್ಸ್ ಸ್ಟಡೀಸ್ ಅಂಡ್ ಅನಾಲೈಸಸ್ (ಎಂಪಿ-ಐಡಿಎಸ್‌ಎ) ಯಲ್ಲಿ ರಿಸರ್ಚ್ ಫೆಲೋ ಆಗಿರುವ ಸ್ಮೃತಿ ಪಟ್ನಾಯಕ್ ಅವರು ಈಟಿವಿ ಭಾರತ್‌ಗೆ ತಿಳಿಸಿದ್ದಾರೆ.
ಏತನ್ಮಧ್ಯೆ, ನವೆಂಬರ್ 17 ರಂದು ನಡೆಯಲಿರುವ ಅಧ್ಯಕ್ಷೀಯ ಪದಗ್ರಹಣ ಸಮಾರಂಭಕ್ಕೆ ಮಾಲ್ಡೀವ್ಸ್ ನೆರೆಯ ರಾಷ್ಟ್ರಗಳು ಮತ್ತು ಅಂತಾರಾಷ್ಟ್ರೀಯ ಸಂಸ್ಥೆಗಳಿಗೆ ಆಹ್ವಾನವನ್ನು ನೀಡಿದೆ. ಸಮಾರಂಭದಲ್ಲಿ ಪಾಲ್ಗೊಳ್ಳಲು ಯಾರನ್ನು ಕಳುಹಿಸಬೇಕು ಎಂಬುದನ್ನು ನಿರ್ಧರಿಸಲು ಸಂಬಂಧಿಸಿದ ದೇಶಗಳಿಗೆ ಬಿಟ್ಟಿದೆ.
ಇದನ್ನೂ ಓದಿ: ಮಾಲ್ಡೀವ್ಸ್‌ನಲ್ಲಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ: ಭರ್ಜರಿ ಮತ ಪಡೆದು ಮಹಮದ್ ಮುಯಿಝು ಗೆಲುವು.. ಪ್ರಧಾನಿ ಮೋದಿ ಅಭಿನಂದನೆ