ಕೈರೊ: ಕೆಂಪು ಸಮುದ್ರ ವಲಯದಲ್ಲಿ ಮಿಲಿಟರಿ ಉದ್ವಿಗ್ನತೆ ಹೆಚ್ಚಾಗಿರುವುದರ ಪರಿಣಾಮಗಳ ಬಗ್ಗೆ ನಿಕಟವಾಗಿ ಮೇಲ್ವಿಚಾರಣೆ ಮಾಡುತ್ತಿರುವುದಾಗಿ ಈಜಿಪ್ಟ್ನ ಸೂಯೆಜ್ ಕಾಲುವೆ ಪ್ರಾಧಿಕಾರ (ಎಸ್ಸಿಎ) ಹೇಳಿದೆ. ಕೆಂಪು ಸಮುದ್ರದಲ್ಲಿ ಉಂಟಾಗಿರುವ ಮಿಲಿಟರಿ ಉದ್ವಿಗ್ನತೆಯಿಂದಾಗಿ ಹಲವಾರು ದೊಡ್ಡ ಕಂಪನಿಯ ಹಡಗುಗಳು ಈ ವಲಯದ ಸೂಯೆಜ್ ಕಾಲುವೆ ಮುಖಾಂತರ ಸಾಗುವ ಬದಲು ಪರ್ಯಾಯ ಮಾರ್ಗಗಳ ಮೂಲಕ ಸಾಗುತ್ತಿವೆ.
ಮೆಡಿಟರೇನಿಯನ್ ಮತ್ತು ಕೆಂಪು ಸಮುದ್ರ ಸಂಪರ್ಕಿಸುವ ಕಾಲುವೆಯಲ್ಲಿ ಕಡಲ ಸಂಚಾರ ಸಾಮಾನ್ಯವಾಗಿದೆ ಎಂದು ಎಸ್ಸಿಎ ಅಧ್ಯಕ್ಷ ಒಸಾಮಾ ರಾಬಿ ಹೇಳಿಕೆಯಲ್ಲಿ ತಿಳಿಸಿದ್ದಾರೆ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ. ಕೆಲವು ಹಡಗುಗಳು ತಮ್ಮ ಮಾರ್ಗಗಳನ್ನು ತಾತ್ಕಾಲಿಕವಾಗಿ ಕೇಪ್ ಆಫ್ ಗುಡ್ ಹೋಪ್ಗೆ ಸ್ಥಳಾಂತರಿಸುವುದರಿಂದಾಗಬಹುದಾದ ಪರಿಣಾಮವನ್ನು ಎಸ್ಸಿಎ ನಿಕಟವಾಗಿ ಮೌಲ್ಯಮಾಪನ ಮಾಡುತ್ತಿದೆ ಎಂದು ಅವರು ಹೇಳಿದರು.
ಅಕ್ಟೋಬರ್ 7 ರಂದು ಇಸ್ರೇಲ್ - ಹಮಾಸ್ ಯುದ್ಧ ಪ್ರಾರಂಭವಾದಾಗಿನಿಂದ ಈ ಪ್ರದೇಶದ ವಾಣಿಜ್ಯ ಹಡಗುಗಳ ಮೇಲೆ ಯೆಮೆನ್ನ ಹೌತಿ ಬಂಡುಕೋರರು ರಾಕೆಟ್ ದಾಳಿ ನಡೆಸುತ್ತಿದ್ದಾರೆ. ಹೀಗಾಗಿ ವಿಶ್ವದ ನಾಲ್ಕು ಅತಿದೊಡ್ಡ ಸರಕು ಸಾಗಾಣಿಕಾ ಕಂಪನಿಗಳು ಈ ಮಾರ್ಗದ ಮೂಲಕ ತಮ್ಮ ಹಡಗು ಸಾಗುವುದನ್ನು ಸ್ಥಗಿತಗೊಳಿಸಿವೆ.
ನವೆಂಬರ್ 19 ರಿಂದ ಸೂಯೆಜ್ ಕಾಲುವೆಯ ಮೂಲಕ 2,128 ಹಡಗುಗಳು ಹಾದು ಹೋಗಿದ್ದರೆ, ಕೇಪ್ ಆಫ್ ಗುಡ್ ಹೋಪ್ ಮಾರ್ಗದ ಮೂಲಕ ಕೇವಲ 55 ಹಡಗುಗಳು ಮಾತ್ರ ಹಾದು ಹೋಗಿವೆ ಎಂದು ರಾಬಿ ಹೇಳಿದರು. ತಾತ್ಕಾಲಿಕ ತಿರುವು ಘೋಷಿಸಿದ ಹಡಗುಗಳು ಸೇರಿದಂತೆ 77 ಹಡಗುಗಳು ಭಾನುವಾರ ಸೂಯೆಜ್ ಕಾಲುವೆಯನ್ನು ದಾಟಿವೆ ಎಂದು ಅವರು ತಿಳಿಸಿದರು.
ಏಷ್ಯಾ ಮತ್ತು ಯುರೋಪ್ ನಡುವೆ ಸಂಚರಿಸುವ ಹಡಗುಗಳಿಗೆ ಸೂಯೆಜ್ ಕಾಲುವೆಯೇ ಅತ್ಯಂತ ವೇಗದ ಮಾರ್ಗವಾಗಿದೆ. ದಾಳಿಯಿಂದ ತಪ್ಪಿಸಿಕೊಳ್ಳುವ ಮುನ್ನೆಚ್ಚರಿಕೆಯಾಗಿ ಜರ್ಮನಿಯ ಲಾಜಿಸ್ಟಿಕ್ಸ್ ಕಂಪನಿ ಮೇರ್ಸ್ಕ್ ಯೆಮೆನ್ ಬಳಿಯ ಬಾಬ್ ಅಲ್-ಮಂದಾಬ್ ಜಲಸಂಧಿಯ ಮೂಲಕ ಸಾಗದಂತೆ ಡಿಸೆಂಬರ್ 15 ರಂದು ತನ್ನ ಎಲ್ಲ ಹಡಗುಗಳಿಗೆ ನಿರ್ದೇಶನ ನೀಡಿದೆ.
ಸ್ವಿಟ್ಜರ್ಲೆಂಡ್ನ ಎಂಎಸ್ಸಿ, ಫ್ರಾನ್ಸ್ನ ಸಿಎಂಎ ಸಿಜಿಎಂ ಮತ್ತು ಜರ್ಮನಿಯ ಹಪಾಗ್ - ಲಾಯ್ಡ್ ಸೇರಿದಂತೆ ಇತರ ಹಡಗು ಕಂಪನಿಗಳು ಕೂಡ ತಮ್ಮ ಹಡಗು ಮಾರ್ಗಗಳನ್ನು ಬದಲಾಯಿಸಿವೆ. ಕೆಂಪು ಸಮುದ್ರದ ಮೂಲಕ ಇಸ್ರೇಲ್ಗೆ ಹೋಗುವ ವಾಣಿಜ್ಯ ಹಡಗುಗಳನ್ನು ಅಪಹರಿಸಿದ್ದಾಗಿ ಮತ್ತು ಅವುಗಳ ಮೇಲೆ ದಾಳಿ ಮಾಡಿರುವುದಾಗಿ ಇರಾನ್ ಬೆಂಬಲಿತ ಹೌತಿ ಉಗ್ರರ ಗುಂಪು ಹೇಳಿಕೊಂಡಿದೆ.
ಇದನ್ನೂ ಓದಿ : ಇಸ್ರೇಲ್-ಹಮಾಸ್ ಕದನವಿರಾಮಕ್ಕೆ ಹೊಸ ಪ್ರಸ್ತಾವನೆ ಮುಂದಿಟ್ಟ ಕತಾರ್