ಟೆಲ್ ಅವಿವ್ (ಇಸ್ರೇಲ್): ಇಸ್ರೇಲ್‌ನ ನಡೆಯುತ್ತಿರುವ ವಾಯುದಾಳಿಗಳ ಪರಿಣಾಮ ಗಾಜಾದಲ್ಲಿ ಆರೋಗ್ಯ ಬಿಕ್ಕಟ್ಟು ಉಲ್ಬಣಗೊಂಡಿದೆ. ಇದರಿಂದ ಗಾಜಾಕ್ಕೆ ಅಗತ್ಯ ವೈದ್ಯಕೀಯ ಸೌಲಭ್ಯಗಳನ್ನು ತಲುಪಿಸುವಂತೆ ಹಮಾಸ್, ಅಂತಾರಾಷ್ಟ್ರೀಯ ಪರಿಹಾರ ಸಂಸ್ಥೆಗಳಿಗೆ ತುರ್ತು ಮನವಿ ಮಾಡಿದೆ ಎಂದು ಸಿಎನ್‌ಎನ್ ವರದಿ ಮಾಡಿದೆ. ಹಮಾಸ್‌ನ ಇತ್ತೀಚಿನ ಹಿಂಸಾಚಾರಕ್ಕೆ ಪ್ರತಿಯಾಗಿ ಇಸ್ರೇಲ್ ನಿರ್ಣಾಯಕ ಸರಬರಾಜುಗಳನ್ನು ತಡೆಹಿಡಿದಿರುವುದರಿಂದ ಈ ಪ್ರದೇಶವು ಹಸಿವಿನ ಅಪಾಯ ಮತ್ತು ಇಂಧನ ಸಂಪನ್ಮೂಲಗಳ ಕೊರತೆ ಉಂಟಾಗಿದೆ.
ಪ್ಯಾಲೇಸ್ಟಿನಿಯನ್ ಆರೋಗ್ಯ ಸಚಿವ ಮೈ ಅಲ್ಕೈಲಾ ಅವರು, ವೈದ್ಯಕೀಯ ಉಪಕರಣಗಳು, ಶಸ್ತ್ರಚಿಕಿತ್ಸಾ ಉಪಕರಣಗಳು, ಔಷಧಗಳು ಮತ್ತು ರಕ್ತದ ಪ್ಯಾಕೇಟ್ಗಳ ತೀವ್ರ ಕೊರತೆಯಿಂದಾಗಿ ಗಾಜಾದಲ್ಲಿ ಅಗತ್ಯವಿರುವ ಆರೋಗ್ಯ ವ್ಯವಸ್ಥೆ ಕುಸಿತದ ಬಗ್ಗೆ ಎಚ್ಚರಿಕೆ ನೀಡಿದ್ದಾರೆ.
ಗಾಜಾದ ಜನರಿಗೆ ಮಾನವೀಯ ನೆರವಿಗಾಗಿ ಮನವಿ: ನಾರ್ವೇಜಿಯನ್ ವಿದೇಶಾಂಗ ವ್ಯವಹಾರಗಳ ಸಚಿವ ಅನ್ನಿಕೆನ್ ಹ್ಯೂಟ್‌ಫೆಲ್ಡ್ಟ್ ಅವರು, ಸಂಪೂರ್ಣ ದಿಗ್ಬಂಧನಕ್ಕೆ ತೀವ್ರ ಅಸಮ್ಮತಿಯನ್ನು ವ್ಯಕ್ತಪಡಿಸಿದ್ದಾರೆ. ಇದು ಗಾಜಾದಲ್ಲಿ ನಾಗರಿಕರ ಉಳಿವಿಗೆ ಅಗತ್ಯವಾದ ವಿದ್ಯುತ್, ನೀರು, ಆಹಾರ ಮತ್ತು ಅಗತ್ಯ ವಸ್ತುಗಳ ಪ್ರವೇಶವನ್ನು ನಿರಾಕರಿಸುತ್ತದೆ. ಮಾನವೀಯ ನೆರವು ಕೊಡಲು ಅನುಮತಿಸಲು ಮತ್ತು ನಾಗರಿಕರಿಗೆ ಸಹಾಯವನ್ನು ಖಚಿತಪಡಿಸಿಕೊಳ್ಳುವುದು ಇಸ್ರೇಲ್ ಜವಾಬ್ದಾರಿಯನ್ನು ಹೊಂದಿದೆ ಎಂದು ಅವರು ಒತ್ತಿ ಹೇಳಿದರು. ಸಿಎನ್‌ಎನ್ ಪ್ರಕಾರ, ಗಾಜಾದ ಜನರಿಗೆ ಮಾನವೀಯ ನೆರವು ಒದಗಿಸುವುದು ಪ್ರಮುಖ ಆದ್ಯತೆಯಾಗಿರಬೇಕು ಎಂದು ಅವರು ತಿಳಿಸಿದರು.
ಗಾಜಾದಲ್ಲಿ 1,537 ಜನರು ಸಾವು: ಪ್ಯಾಲೇಸ್ಟಿನಿಯನ್ ಆರೋಗ್ಯ ಸಚಿವಾಲಯದ ಪ್ರಕಾರ, ಮಾರಣಾಂತಿಕ ಹಮಾಸ್ ದಾಳಿಯ ನಂತರ, ಗಾಜಾದಲ್ಲಿ ನಡೆಯುತ್ತಿರುವ ಇಸ್ರೇಲ್‌ನ ವೈಮಾನಿಕ ದಾಳಿಗಳಿಗೆ ಕಳೆದ ಶನಿವಾರ, 500 ಮಕ್ಕಳು ಮತ್ತು 267 ಮಹಿಳೆಯರು ಸೇರಿದಂತೆ ಕನಿಷ್ಠ 1,537 ಜನರು ಸಾವನ್ನಪ್ಪಿದ್ದಾರೆ. ಒಟ್ಟು 6,612 ಜನರು ಗಾಯಗೊಂಡಿದ್ದಾರೆ. ಇಸ್ರೇಲ್ ತಮ್ಮ ಪ್ರದೇಶದ ಮೇಲೆ ಬಾಂಬ್ ದಾಳಿಯನ್ನು ಆರಂಭಿಸಿದಾಗಿನಿಂದ ಗಾಜಾದಲ್ಲಿ 3,30,000ಕ್ಕೂ ಹೆಚ್ಚು ವ್ಯಕ್ತಿಗಳು ಸ್ಥಳಾಂತರಗೊಂಡಿದ್ದಾರೆ ಎಂದು ವಿಶ್ವಸಂಸ್ಥೆಯ ಮಾನವೀಯ ವ್ಯವಹಾರಗಳ ಸಮನ್ವಯ ಕಚೇರಿಯ ಹೇಳಿಕೆಯು ಬಹಿರಂಗಪಡಿಸಿದೆ.
ಹಮಾಸ್‌ನ ದಾಳಿಗೆ ಪ್ರತಿಕ್ರಿಯೆಯಾಗಿ ನಿರ್ಬಂಧಗಳು ಮತ್ತಷ್ಟು ಬಿಗಿ: ಅಮೆರಿಕ ಸಂಯುಕ್ತ ಸಂಸ್ಥಾನ ಮತ್ತು ಯುರೋಪಿಯನ್ ಯೂನಿಯನ್‌ನಿಂದ ಭಯೋತ್ಪಾದಕ ಸಂಘಟನೆ ಎಂದು ಕರೆಯಲುಪಡುವ ಹಮಾಸ್, ಗಾಜಾದ ಮೇಲೆ ನಿಯಂತ್ರಣವನ್ನು ಹೊಂದಿದೆ. ಇಸ್ರೇಲ್ ಜನನಿಬಿಡ ಪ್ರದೇಶದ ಒಳಗೆ ಮತ್ತು ಹೊರಗೆ ನಿವಾಸಿಗಳು ಮತ್ತು ಸರಕುಗಳ ಚಲನೆಯ ಮೇಲೆ ಕಟ್ಟುನಿಟ್ಟಾದ ನಿರ್ಬಂಧಗಳನ್ನು ಜಾರಿಗೊಳಿಸಿದೆ. ಹಮಾಸ್‌ನ ದಾಳಿಗೆ ಪ್ರತಿಕ್ರಿಯೆಯಾಗಿ ಈ ನಿರ್ಬಂಧಗಳನ್ನು ಈಗ ಮತ್ತಷ್ಟು ಬಿಗಿಗೊಳಿಸಲಾಗಿದೆ ಎಂದು ಸಿಎನ್‌ಎನ್ ವರದಿ ತಿಳಿಸಿದೆ.
ಇದನ್ನೂ ಓದಿ: ಆಪರೇಷನ್ ಅಜಯ್: ಇಸ್ರೇಲ್ನಿಂದ ದೆಹಲಿಗೆ ಬಂದಿಳಿದ 212 ಭಾರತೀಯರನ್ನು ಹೊತ್ತ ತಂದ ಮೊದಲ ವಿಮಾನ