ಹೈದರಾಬಾದ್: ಇಸ್ರೇಲ್ ದಶಕಗಳಿಂದಲೂ ಪ್ಯಾಲೆಸ್ಟೈನ್ ಮೇಲೆ ಆಕ್ರಮಣವನ್ನು ಮುಂದುವರಿಸಿದೆ. ಆದರೆ 2023ರಲ್ಲಿ ಈ ಆಕ್ರಮಣದ ಕರಾಳ ಅಧ್ಯಾಯವೊಂದು ಆರಂಭವಾಗಿದೆ. ಇಸ್ರೇಲ್ ದೇಶವು ಯುರೋಪಿನಾದ್ಯಂತದ ತನ್ನ ಪ್ರಭಾವ, ತಂತ್ರಜ್ಞಾನ ಮತ್ತು ಶಕ್ತಿಯನ್ನು ಬಳಸಿಕೊಂಡು ವಿಶ್ವ ಯುದ್ಧದ ನಂತರ ಕೆಲ ಐತಿಹಾಸಿಕ ನರಮೇಧಗಳನ್ನು ಎಸಗಿದೆ.
ಆದರೆ ಈಗ 'ವಿಶ್ವದ ಅತಿದೊಡ್ಡ ಬಯಲು ಜೈಲು' ಎಂದು ಕರೆಯಲ್ಪಡುವ ಗಾಜಾ ಪಟ್ಟಿಯ ಮೇಲೆ ಅದು ಯುದ್ಧ ಆರಂಭಿಸಿದೆ. ಈ ಪ್ರದೇಶವು ಭೂಮಿಯ ಮೇಲಿನ ಅತ್ಯಂತ ಜನನಿಬಿಡ ಸ್ಥಳಗಳಲ್ಲಿ ಒಂದಾಗಿದೆ. ಕೇವಲ 41 ಕಿಲೋಮೀಟರ್ ಉದ್ದ ಮತ್ತು 6 ರಿಂದ 12 ಕಿಲೋಮೀಟರ್ ಅಗಲವಿರುವ ಈ ಪ್ರದೇಶದಲ್ಲಿ ಸುಮಾರು ಎರಡು ಮಿಲಿಯನ್ ಜನರು ವಾಸಿಸುತ್ತಿದ್ದಾರೆ.
ಅಕ್ಟೋಬರ್ 7ರಂದು, ಗಾಜಾ ಪಟ್ಟಿಯಲ್ಲಿ ಆಡಳಿತ ನಡೆಸುತ್ತಿರುವ ಪ್ಯಾಲೆಸ್ಟೈನ್ ಇಸ್ಲಾಮಿಸ್ಟ್ ಆಂದೋಲನದ ಹಮಾಸ್ ಉಗ್ರರು ಇಸ್ರೇಲ್ ಮೇಲೆ ಅನಿರೀಕ್ಷಿತ ದಾಳಿ ನಡೆಸಿದರು. ಹಮಾಸ್ ಉಗ್ರರು ದಕ್ಷಿಣ ಇಸ್ರೇಲ್ಗೆ ನುಸುಳಿ ಹತ್ತಿರದ ವಾಸಸ್ಥಾನಗಳಲ್ಲಿ ವಿನಾಶವನ್ನುಂಟು ಮಾಡಿದರು. ಕೆಲ ಸಶಸ್ತ್ರ ಹಮಾಸ್ ಉಗ್ರರು ಮೋಟಾರ್ ಸೈಕಲ್ಗಳ ಮೂಲಕ ಇಸ್ರೇಲ್ ಪ್ರವೇಶಿಸಿ, ಗಡಿಯಲ್ಲಿರುವ ಸಣ್ಣ ಪಟ್ಟಣಗಳಲ್ಲಿ ನೂರಾರು ಜನರನ್ನು ಕೊಂದರು. ತಾಯಂದಿರು, ಸಣ್ಣ ಮಕ್ಕಳು ಮತ್ತು ವೃದ್ಧರು ಸೇರಿದಂತೆ ಇಸ್ರೇಲಿ ನಾಗರಿಕರನ್ನು ಒತ್ತೆಯಾಳುಗಳಾಗಿ ತೆಗೆದುಕೊಂಡು ಗಾಜಾ ಗಡಿಯುದ್ದಕ್ಕೂ ಸಾಗಿಸುತ್ತಿರುವುದನ್ನು ವೀಡಿಯೊ ತುಣುಕುಗಳು ತೋರಿಸಿವೆ. ಹಮಾಸ್ ಸುಮಾರು 240 ಜನರನ್ನು ಅಪಹರಿಸಿದೆ ಎಂದು ನಂತರ ತಿಳಿದುಬಂದಿತು.
ಇಸ್ರೇಲ್ ವರದಿಗಳ ಪ್ರಕಾರ ಹಮಾಸ್ ದಾಳಿಯಲ್ಲಿ ಸುಮಾರು 1,140 ಇಸ್ರೇಲಿಗರು ಸಾವಿಗೀಡಾಗಿದ್ದಾರೆ. ಮುಖ್ಯವಾಗಿ ಮುಗ್ಧ ನಾಗರಿಕರು ಈ ದಾಳಿಯಲ್ಲಿ ಬಲಿಯಾಗಿದ್ದಾರೆ. ದಾಳಿಯ ನಂತರದ ಮೊದಲ ಕೆಲ ವಾರಗಳವರೆಗೆ ಹಮಾಸ್ 1,400 ಜನರನ್ನು ಕೊಂದಿದೆ ಎಂದು ಇಸ್ರೇಲ್ ಹೇಳಿತ್ತು. ಆದರೆ ನಂತರ ಈ ಸಂಖ್ಯೆಯನ್ನು 1,147 ಕ್ಕೆ ಬದಲಾಯಿಸಿತು.
ಬಾಂಬ್ಗಳ ಸುರಿಮಳೆ: ಹಮಾಸ್ ಉಗ್ರರ ದಾಳಿಯಿಂದ ಕೆರಳಿದ ಇಸ್ರೇಲ್ ಹಮಾಸ್ ವಿರುದ್ಧ ಯುದ್ಧ ಘೋಷಿಸಿತು. ಭ್ರಷ್ಟಾಚಾರದ ಆರೋಪ ಮತ್ತು ಅನಿಶ್ಚಿತ ರಾಜಕೀಯ ಭವಿಷ್ಯ ಎದುರಿಸುತ್ತಿರುವ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹಮಾಸ್ ವಿರುದ್ಧ ಪೂರ್ಣ ಪ್ರಮಾಣದ ಯುದ್ಧ ಘೋಷಿಸಿದರು. ತದನಂತರ ಇಸ್ರೇಲ್ ಗಾಜಾ ಮೇಲೆ ಬಾಂಬ್ ದಾಳಿ ಪ್ರಾರಂಭಿಸಿತು. ಮುಂದಿನ ಹಲವಾರು ವಾರಗಳವರೆಗೆ ನಾಗರಿಕ ಪ್ರದೇಶಗಳ ಮೇಲೆ ದಾಳಿ ನಡೆಸಿತು ಮತ್ತು ಯುದ್ಧಪೀಡಿತ ಪ್ರದೇಶವನ್ನು ಸಂಪೂರ್ಣವಾಗಿ ಮುತ್ತಿಗೆ ಹಾಕಲು ಇಸ್ರೇಲ್ ಆದೇಶಿಸಿತು. ನೀರು, ವಿದ್ಯುತ್ ಮತ್ತು ಆಹಾರ ಸರಬರಾಜನ್ನು ಕಡಿತಗೊಳಿಸಲಾಯಿತು ಮತ್ತು ಗಾಜಾದ ಸಂಪೂರ್ಣ ಜನಸಂಖ್ಯೆ ಈ ಕ್ರೂರ ದಾಳಿಯನ್ನು ಎದುರಿಸಬೇಕಾಯಿತು. ಇಸ್ರೇಲ್ನ ವಾಯುಪಡೆಯ ಕಾರ್ಯಾಚರಣೆ ಅಸಾಮಾನ್ಯವಾಗಿ ತೀವ್ರವಾಗಿತ್ತು. ದಿ ಎಕನಾಮಿಸ್ಟ್ ವರದಿಯ ಪ್ರಕಾರ ಇಸ್ರೇಲ್ ಗಾಜಾ ಮೇಲೆ ವಿಮಾನದ ಮೂಲಕ 29,000 ಬಾಂಬ್ಗಳನ್ನು ಹಾಕಿದೆ. ಇದು ದಿನಕ್ಕೆ ಸುಮಾರು 500 ಬಾಂಬ್ಗಳಿಗೆ ಸಮಾನವಾಗಿದೆ.
ನೆಲದ ದಾಳಿ: ವಾಯು ದಾಳಿಗಳಿಂದ ಗಾಜಾದ ಬಹುತೇಕ ಭಾಗ ವಿನಾಶಗೊಂಡ ನಂತರ ಇಸ್ರೇಲ್ ಅಕ್ಟೋಬರ್ 27 ರಂದು ಗಾಜಾ ಮೇಲೆ ದೊಡ್ಡ ಪ್ರಮಾಣದ ನೆಲದ ಆಕ್ರಮಣ ಪ್ರಾರಂಭಿಸಿತು. ಟ್ಯಾಂಕ್ಗಳು, ಬುಲ್ಡೋಜರ್ಗಳು ಮತ್ತು ಪದಾತಿದಳದೊಂದಿಗೆ ಐಡಿಎಫ್ ಮುಂದುವರಿಯಿತು. ಆ ಹೊತ್ತಿಗೆ ತನ್ನ ವಿಶ್ವಾಸಾರ್ಹ ಮಿತ್ರರಾಷ್ಟ್ರಗಳ ಬೆಂಬಲದಿಂದ ಉತ್ತೇಜಿತರಾಗಿದ್ದ ನೆತನ್ಯಾಹು, ನೆಲದ ಮೇಲಿನ ಆಕ್ರಮಣವು ಹಮಾಸ್ ಅನ್ನು ನಾಶಪಡಿಸುವ ಮತ್ತು ಗಾಜಾ ಪಟ್ಟಿಯ ಮೇಲೆ ಹಮಾಸ್ ಆಡಳಿತವನ್ನು ಕೊನೆಗೊಳಿಸುವ ಗುರಿಯನ್ನು ಹೊಂದಿದೆ ಎಂದು ಹೇಳಿದರು.
ಸಾವು ಮತ್ತು ವಿನಾಶ : ಗಾಜಾ ಆರೋಗ್ಯ ಸಚಿವಾಲಯದ ಪ್ರಕಾರ, ಇಸ್ರೇಲ್ನ ವಾಯು ದಾಳಿ ಮತ್ತು ನೆಲದ ಕಾರ್ಯಾಚರಣೆಗಳಿಂದ ಇಲ್ಲಿಯವರೆಗೆ 19,000 ಕ್ಕೂ ಹೆಚ್ಚು ಜನ ಸಾವಿಗೀಡಾಗಿದ್ದಾರೆ. ಗಾಜಾದಾದ್ಯಂತ ಸಾವಿರಾರು ಜನರು ಅವಶೇಷಗಳ ಅಡಿಯಲ್ಲಿ ಹೂತುಹೋಗಿದ್ದಾರೆ. ಯುದ್ಧದಲ್ಲಿ ಈವರೆಗೆ 50,000 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಗಾಜಾದಲ್ಲಿ ಕೊಲ್ಲಲ್ಪಟ್ಟವರಲ್ಲಿ ಸುಮಾರು 70 ಪ್ರತಿಶತದಷ್ಟು ಮಹಿಳೆಯರು ಮತ್ತು ಮಕ್ಕಳಾಗಿರುವುದು ತೀರಾ ಖೇದಕರ. ವಿಶ್ವಸಂಸ್ಥೆ ನಡೆಸಿದ ಮೌಲ್ಯಮಾಪನದ ಪ್ರಕಾರ, ಅಕ್ಟೋಬರ್ 7 ರಿಂದ ಗಾಜಾ ಪಟ್ಟಿಯಲ್ಲಿ ಸುಮಾರು 40,000 ಕಟ್ಟಡಗಳು ಹಾನಿಗೊಳಗಾಗಿವೆ ಅಥವಾ ನಾಶವಾಗಿವೆ.
ವಿಶ್ವದ ರಾಷ್ಟ್ರಗಳ ಪ್ರತಿಕ್ರಿಯೆ: ಇಸ್ರೇಲ್ನ ಪಾಶ್ಚಿಮಾತ್ಯ ಮಿತ್ರರಾಷ್ಟ್ರಗಳಾದ ಯುನೈಟೆಡ್ ಸ್ಟೇಟ್ಸ್, ಫ್ರಾನ್ಸ್, ಜರ್ಮನಿ, ಯುನೈಟೆಡ್ ಕಿಂಗ್ಡಮ್ ಮತ್ತು ವಿವಿಧ ಯುರೋಪಿಯನ್ ದೇಶಗಳು ಹಮಾಸ್ ದಾಳಿಯನ್ನು ಖಂಡಿಸಿವೆ. ಆದರೆ ಇಸ್ರೇಲ್ ತನ್ನನ್ನು ತಾನು ರಕ್ಷಿಸಿಕೊಳ್ಳುವ ಅಧಿಕಾರ ಹೊಂದಿದೆ ಎಂದು ಹೇಳಿವೆ. ಇದಕ್ಕೆ ತದ್ವಿರುದ್ಧವಾಗಿ ಮುಸ್ಲಿಂ ದೇಶಗಳು ಪ್ಯಾಲೆಸ್ಟೀನಿಯರನ್ನು ಬೆಂಬಲಿಸಿದವು. ಹಿಂಸಾಚಾರದ ಹೆಚ್ಚಳಕ್ಕೆ ಪ್ಯಾಲೆಸ್ಟೈನ್ ಪ್ರದೇಶಗಳನ್ನು ಇಸ್ರೇಲ್ ಆಕ್ರಮಿಸಿಕೊಂಡಿರುವುದು ಕಾರಣವಾಗಿದೆ ಮತ್ತು ಸಂಘರ್ಷಕ್ಕೆ ಇದೇ ಮೂಲ ಕಾರಣವೆಂದು ಪರಿಗಣಿಸಲಾಗಿದೆ.
ಆಸ್ಪತ್ರೆಗಳ ಮೇಲೆ ದಾಳಿ : ಅಂತರರಾಷ್ಟ್ರೀಯ ಮಾನವೀಯ ಕಾನೂನುಗಳ ಬಗ್ಗೆ ಕಿಂಚಿತ್ತೂ ಗೌರವ ನೀಡದ ಇಸ್ರೇಲ್ ಗಾಜಾ ಪಟ್ಟಿಯಲ್ಲಿನ ಆಸ್ಪತ್ರೆಗಳ ಮೇಲೂ ದಾಳಿ ನಡೆಸಿದೆ. ಬಾಂಬ್ ದಾಳಿಯಿಂದ ರಕ್ಷಿಸಿಕೊಳ್ಳಲು ಆಸ್ಪತ್ರೆಗಳಲ್ಲಿ ಆಶ್ರಯ ಪಡೆದವರನ್ನೂ ಇಸ್ರೇಲ್ ಬಿಡಲಿಲ್ಲ. ಆಸ್ಪತ್ರೆಗಳನ್ನು ಹಮಾಸ್ ತನ್ನ ನೆಲೆಗಳಾಗಿ ಬಳಸುತ್ತಿದೆ ಎಂದು ಆರೋಪಿಸಿ ಇಸ್ರೇಲ್ ಆಸ್ಪತ್ರೆಗಳ ಮೇಲೆ ಬಾಂಬ್ ದಾಳಿ ನಡೆಸಿತು. ಈ ಮೂಲಕ ನೂರಾರು ವೈದ್ಯರು, ಸಾವಿರಾರು ರೋಗಿಗಳನ್ನು ಕೊಂದು ಹಾಕಿತು. ವಿಶ್ವ ಆರೋಗ್ಯ ಸಂಸ್ಥೆ ಇಸ್ರೇಲ್ನ ಕ್ರಮಗಳನ್ನು ಅನೇಕ ಬಾರಿ ಖಂಡಿಸಿದೆ.
ವಿಶ್ವಸಂಸ್ಥೆ ಈ ಕುರಿತು ಇತ್ತೀಚೆಗೆ ಅಂದರೆ ಡಿಸೆಂಬರ್ 17 ರಂದು ಹೇಳಿಕೆ ನೀಡಿದೆ. ಆರೋಗ್ಯ ಸಾಮಗ್ರಿಗಳನ್ನು ತಲುಪಿಸಲು ಡಿಸೆಂಬರ್ 16 ರಂದು ಉತ್ತರ ಗಾಜಾದ ಅಲ್-ಶಿಫಾ ಆಸ್ಪತ್ರೆಗೆ ಜಂಟಿ ಯುಎನ್ ಕಾರ್ಯಾಚರಣೆಯಲ್ಲಿ ತನ್ನ ಸಿಬ್ಬಂದಿ ಭಾಗವಹಿಸಿದ್ದರು ಎಂದು ಡಬ್ಲ್ಯುಎಚ್ಒ ಹೇಳಿದೆ. ಆಗ ಅಲ್ಲಿ ಕಂಡು ಬಂದ ಪರಿಸ್ಥಿತಿಯ ಬಗ್ಗೆ ವಿವರಣೆ ನೀಡಿರುವ ವಿಶ್ವಸಂಸ್ಥೆ, ಅಲ್-ಶಿಫಾದಲ್ಲಿನ ತುರ್ತು ಚಿಕಿತ್ಸಾ ವಿಭಾಗವು ರಕ್ತಮಯವಾಗಿದೆ, ನೂರಾರು ರೋಗಿಗಳು ನರಳಾಡುತ್ತಿದ್ದರು ಮತ್ತು ಪ್ರತಿ ನಿಮಿಷಕ್ಕೂ ಗಾಯಾಳುಗಳು ಚಿಕಿತ್ಸೆಗೆ ಬರುತ್ತಿದ್ದರು ಎಂದು ಹೇಳಿದೆ.
"ಗಾಯಗೊಂಡ ರೋಗಿಗಳನ್ನು ನೆಲದ ಮೇಲೆಯೇ ಮಲಗಿಸಲಾಗುತ್ತಿತ್ತು ಮತ್ತು ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಬೇಕಾದ ಯಾವುದೇ ಸೌಕರ್ಯಗಳು ಇರಲಿಲ್ಲ. ತುರ್ತು ಚಿಕಿತ್ಸಾ ವಿಭಾಗವು ತುಂಬಿ ತುಳುಕುತ್ತಿದೆ. ಗಂಭೀರ ಸ್ಥಿತಿಯಲ್ಲಿರುವ ರೋಗಿಗಳನ್ನು ಶಸ್ತ್ರಚಿಕಿತ್ಸೆಗಾಗಿ ಅಲ್-ಅಹ್ಲಿ ಅರಬ್ ಆಸ್ಪತ್ರೆಗೆ ವರ್ಗಾಯಿಸಲಾಗುತ್ತಿದೆ" ಎಂದು ಡಬ್ಲ್ಯುಎಚ್ಒ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಒಂದು ಕಾಲದಲ್ಲಿ ಗಾಜಾದ ಅತ್ಯಂತ ಪ್ರಮುಖ ಮತ್ತು ಅತಿದೊಡ್ಡ ರೆಫರಲ್ ಆಸ್ಪತ್ರೆಯಾಗಿದ್ದ ಅಲ್-ಶಿಫಾ ಈಗ ಕೇವಲ ಬೆರಳೆಣಿಕೆಯಷ್ಟು ವೈದ್ಯರು ಮತ್ತು ಕೆಲವು ದಾದಿಯರು, 70 ಸ್ವಯಂಸೇವಕರೊಂದಿಗೆ ಕೆಲಸ ಮಾಡುತ್ತಿದೆ. ಈ ಆಸ್ಪತ್ರೆಯನ್ನು ಪುರುಜ್ಜೀವನಗೊಳಿಸುವುದು ತುರ್ತು ಅಗತ್ಯವಾಗಿದೆ ಎಂದು ಡಬ್ಲ್ಯುಎಚ್ಒ ಸಿಬ್ಬಂದಿ ಹೇಳಿದ್ದಾರೆ. ಪ್ರಸ್ತುತ, ಅಲ್-ಅಹ್ಲಿ ಅರಬ್ ಆಸ್ಪತ್ರೆ ಉತ್ತರ ಗಾಜಾದಲ್ಲಿ ಭಾಗಶಃ ಕಾರ್ಯನಿರ್ವಹಿಸುತ್ತಿರುವ ಏಕೈಕ ಆಸ್ಪತ್ರೆಯಾಗಿ ಉಳಿದಿದೆ.
ಒಂದು ವಾರದ ಕದನ ವಿರಾಮ ಮತ್ತು ಒತ್ತೆಯಾಳುಗಳ ಬಿಕ್ಕಟ್ಟು: ಮುಖ್ಯವಾಗಿ ಕತಾರ್ನ ಮಧ್ಯಸ್ಥಿಕೆಯ ನಂತರ, ಇಸ್ರೇಲ್ ಮತ್ತು ಹಮಾಸ್ ನವೆಂಬರ್ 24 ರಂದು ಪ್ರಾರಂಭವಾಗಿ ಡಿಸೆಂಬರ್ 1 ರಂದು ಮುಕ್ತಾಯಗೊಂಡ ಒಂದು ವಾರದ ಕದನ ವಿರಾಮಕ್ಕೆ ಒಪ್ಪಿಕೊಂಡವು. ಈ ಸಮಯದಲ್ಲಿ ಹಮಾಸ್ 80 ಇಸ್ರೇಲಿಗಳು ಸೇರಿದಂತೆ 105 ಒತ್ತೆಯಾಳುಗಳನ್ನು ಬಿಡುಗಡೆ ಮಾಡಿತು. ಹಾಗೆಯೇ ಇಸ್ರೇಲ್ 107 ಮಕ್ಕಳು ಸೇರಿದಂತೆ 240 ಪ್ಯಾಲೆಸ್ಟೈನ್ ಕೈದಿಗಳನ್ನು ಬಿಡುಗಡೆ ಮಾಡಿತು. ಬಿಡುಗಡೆಗೊಂಡ ಪ್ಯಾಲೆಸ್ಟೀನಿಯರಲ್ಲಿ ಹೆಚ್ಚಿನವರು ಯಾವುದೇ ಅಪರಾಧಕ್ಕೆ ಶಿಕ್ಷೆಗೊಳಗಾಗಿರಲಿಲ್ಲ.
ಆದರೆ ಕದನ ವಿರಾಮದ ಅವಧಿ ಮುಗಿದ ಕೂಡಲೇ ಇಸ್ರೇಲ್ ಗಾಜಾ ಮೇಲೆ ಬಾಂಬ್ ದಾಳಿಯನ್ನು ಪುನರಾರಂಭಿಸಿತು. ಮೊದಲ 24 ಗಂಟೆಗಳಲ್ಲಿ ಸುಮಾರು 200 ಜನರನ್ನು ಕೊಂದಿತು. ಏತನ್ಮಧ್ಯೆ ಮತ್ತೆ ಕದನವಿರಾಮ ಮೂಡಿಸಲು ಕತಾರ್ ಮತ್ತು ಈಜಿಪ್ಟ್ ಪ್ರಯತ್ನಿಸುತ್ತಿವೆ. ಆದರೆ ಹಮಾಸ್ ಅನ್ನು ನಾಶಪಡಿಸುವವರೆಗೆ ಯುದ್ಧ ನಿಲ್ಲಿಸುವುದಿಲ್ಲ ಎಂಬ ಕಠಿಣ ನಿಲುವಿಗೆ ಇಸ್ರೇಲ್ ಅಂಟಿಕೊಂಟಿದೆ.
ಈ ಮಧ್ಯೆ, ಡಿಸೆಂಬರ್ 8 ರಂದು, ಯುನೈಟೆಡ್ ಸ್ಟೇಟ್ಸ್ ವೀಟೋ ಮಾಡಿದ ಕಾರಣದಿಂದ ಗಾಜಾದಲ್ಲಿ ಕದನ ವಿರಾಮಕ್ಕೆ ಕರೆ ನೀಡುವ ನಿರ್ಣಯವನ್ನು ಅಂಗೀಕರಿಸಲು ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ (ಯುಎನ್ಎಸ್ಸಿ) ಸಾಧ್ಯವಾಗಲಿಲ್ಲ. 13 ಸದಸ್ಯರು ನಿರ್ಣಯದ ಪರವಾಗಿ ಮತ ಚಲಾಯಿಸಿದ್ದರು. ಯುಎಸ್ ವಿರುದ್ಧ ಮತ ಚಲಾಯಿಸಿತು. ಯುಕೆ ಮತದಾನದಿಂದ ದೂರ ಉಳಿಯಿತು. ಆದರೆ ಯುಎಸ್ ವೀಟೋ ಅಧಿಕಾರದಿಂದಾಗಿ ನಿರ್ಣಯವನ್ನು ಅಂಗೀಕರಿಸಲಾಗಲಿಲ್ಲ.
ಕದನ ವಿರಾಮದ ಕರೆಗಳು ವಿಫಲವಾದ ಮಧ್ಯೆ ಐಡಿಎಫ್ ಮೂವರು ಇಸ್ರೇಲಿ ಒತ್ತೆಯಾಳುಗಳನ್ನು ಇಸ್ರೇಲ್ ತಪ್ಪು ಗ್ರಹಿಕೆಯಿಂದ ಕೊಂದು ಹಾಕಿತು. ಇದು ಇಸ್ರೇಲ್ನ ಮಿತ್ರರಾಷ್ಟ್ರಗಳಲ್ಲಿ ಆತಂಕ ಮೂಡಿಸಿದ್ದು ನಿಜ.
ಇದನ್ನೂ ಓದಿ: ಅಫ್ಘಾನಿಸ್ತಾನದಲ್ಲಿನ ಭಯೋತ್ಪಾದನೆ ಮಟ್ಟ ಹಾಕುವುದು ತುರ್ತು ಅಗತ್ಯ; ವಿಶ್ವಸಂಸ್ಥೆಯಲ್ಲಿ ಭಾರತ