ದುಬೈ: ಇರಾನ್‌ನ ಶಿಯಾ ಸಮುದಾಯದ ಪವಿತ್ರ ಸ್ಥಳದ ಮೇಲೆ ಬಂದೂಕುಧಾರಿಗಳು ಬುಧವಾರ ದಾಳಿ ನಡೆಸಿದ್ದಾರೆ. ಘಟನೆಯಿಂದ ಕನಿಷ್ಠ 15 ಮಂದಿ ಸಾವನ್ನಪ್ಪಿದ್ದು, 40 ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ.
ಇರಾನ್‌ನಲ್ಲಿ ವಸ್ತ್ರ ಸಂಹಿತೆ ವಿರೋಧಿ ಚಳವಳಿ ವ್ಯಾಪಕಗೊಂಡಿದ್ದು, ಪ್ರತಿಭಟನೆಯ ಕಾವು ತೀವ್ರಗೊಂಡಿದೆ. ಪೊಲೀಸ್ ವಶದಲ್ಲಿದ್ದ 22 ವರ್ಷದ ಮಹ್ಸಾ ಅಮೀನಿ ಎಂಬ ಯುವತಿ ಲಾಕ್ ಅಪ್ ಡೆತ್ ಆಗಿದ್ದ ಹಿನ್ನೆಲೆಯಲ್ಲಿ ಸರ್ಕಾರದ ವಿರುದ್ಧ ಭುಗಿಲೆದ್ದಿರುವ ಪ್ರತಿಭಟನಾಕಾರರು, ಕಳೆದ 40 ದಿನಗಳಿಂದ ಹೋರಾಟ ಮುಂದುವರೆಸಿದ್ದಾರೆ. ಈ ಬೆನ್ನಲ್ಲೇ ಬಂದೂಕುಧಾರಿಗಳಿಂದ ದಾಳಿ ಸಂಭವಿಸಿದ್ದು, ಆತಂಕದ ವಾತಾವರಣ ನಿರ್ಮಾಣವಾಗಿದೆ.
ಹಿಂದಿನಿಂದಲೂ ದೇಶದ ಶಿಯಾ ಬಹುಸಂಖ್ಯಾತರನ್ನು ಗುರಿಯಾಗಿಸಿಕೊಂಡ ಸುನ್ನಿ ಮುಸ್ಲಿಂ ಉಗ್ರಗಾಮಿಗಳು ಇಂತಹ ದುಷ್ಕೃತ್ಯ ಎಸಗುತ್ತಿದ್ದಾರೆ. ಇದು ಅತ್ಯಂತ ಖಂಡನೀಯ ಎಂದು ಅಲ್ಲಿನ ಸುದ್ದಿ ಮಾಧ್ಯಮಗಳು ವರದಿ ಮಾಡಿವೆ.
ಇದನ್ನೂ ಓದಿ: ಕರ್ನಾಟಕದಿಂದ ಇರಾನ್‌ವರೆಗೆ...: ಮುಸ್ಲಿಂ ರಾಷ್ಟ್ರದಲ್ಲಿ ಹಿಜಾಬ್ ವಿರೋಧಿಸಿ ಮಹಿಳೆಯರ ಒಕ್ಕೊರಲ ಧ್ವನಿ!
ಇರಾನ್‌ನ ಎರಡನೇ ಪವಿತ್ರ ಸ್ಥಳವಾದ ಶಾ ಚೆರಾಗ್ ಮಸೀದಿಯ ಮೇಲಿನ ದಾಳಿಯ ನಂತರ ಇಬ್ಬರು ಬಂದೂಕುಧಾರಿಗಳನ್ನು ಬಂಧಿಸಲಾಗಿದೆ, ಮತ್ತೋರ್ವ ಆರೋಪಿ ಪರಾರಿಯಾಗಿದ್ದಾನೆ, ತನಿಖೆ ಮುಂದುವರೆದಿದೆ ಎಂದು ನ್ಯಾಯಾಂಗದ ಅಧಿಕೃತ ವೆಬ್‌ಸೈಟ್ ತಿಳಿಸಿದೆ. ಸರ್ಕಾರಿ ಸ್ವಾಮ್ಯದ IRNA ಸುದ್ದಿ ಸಂಸ್ಥೆಯು ಘಟನೆಯಿಂದ 40 ಜನರು ಗಾಯಗೊಂಡಿದ್ದಾರೆ ಎಂದು ತಿಳಿಸಿದೆ.
ಇದನ್ನೂ ಓದಿ: ಹಿಜಾಬ್ ವಿರೋಧಿಸಿದ ಯುವತಿ ಹದಿಸ್ ನಜಾಫಿಗೆ ಗುಂಡಿಕ್ಕಿ ಕೊಲೆ
ಇನ್ನು ಇರಾನ್‌ನಲ್ಲಿ ಇಂತಹ ದಾಳಿಗಳು ಸಾಮಾನ್ಯ. ಕಳೆದ ಏಪ್ರಿಲ್‌ನಲ್ಲಿ ಈಶಾನ್ಯ ನಗರವಾದ ಮಶಾದ್‌ನಲ್ಲಿರುವ ದೇಶದ ಅತ್ಯಂತ ಪೂಜ್ಯ ಶಿಯಾ ಸ್ಥಳವಾದ ಇಮಾಮ್ ರೆಜಾ ದೇಗುಲದಲ್ಲಿ ದುಷ್ಕರ್ಮಿಗಳು ಇಬ್ಬರು ಧರ್ಮಗುರುಗಳನ್ನು ಚಾಕುವಿನಿಂದ ಇರಿದು ಕೊಂದಿದ್ದರು.