ಸ್ಯಾನ್ ಫ್ರಾನ್ಸಿಸ್ಕೋ : ಟೆಸ್ಲಾ ಮತ್ತು ಸ್ಪೇಸ್ ಎಕ್ಸ್ ಸಿಇಒ ಎಲೋನ್ ಮಸ್ಕ್ ಸತತ ಎರಡನೇ ವರ್ಷವೂ ಫೋರ್ಬ್ಸ್ ನ 2023 ರ ಅಮೆರಿಕದ 400 ಶ್ರೀಮಂತರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಮಸ್ಕ್ ಅಂದಾಜು 251 ಬಿಲಿಯನ್ ಡಾಲರ್ ಸಂಪತ್ತು ಹೊಂದಿದ್ದಾರೆ. ಮತ್ತೋರ್ವ ಟೆಕ್ ದಿಗ್ಗಜ ಅಮೆಜಾನ್ ಸಂಸ್ಥಾಪಕ ಜೆಫ್ ಬೆಜೋಸ್ ಮತ್ತು ಒರಾಕಲ್ ನ ಸಹ ಸಂಸ್ಥಾಪಕ ಮತ್ತು ಸಿಟಿಒ ಲ್ಯಾರಿ ಎಲಿಸನ್ ಮಸ್ಕ್ ಅವರ ನಂತರದ ಸ್ಥಾನಗಳಲ್ಲಿದ್ದಾರೆ.
ಫೋರ್ಬ್ಸ್ ಪ್ರಕಾರ, ಮಸ್ಕ್ ಅವರ ಸಂಪತ್ತಿನ ಮೌಲ್ಯ ಕಳೆದ ವರ್ಷದಷ್ಟೇ ಇದೆ ಮತ್ತು ಎರಡನೇ ಸ್ಥಾನದಲ್ಲಿರುವ ಬೆಜೋಸ್ಗಿಂತ ಅವರ ಸಂಪತ್ತು 90 ಬಿಲಿಯನ್ ಡಾಲರ್ ಹೆಚ್ಚಾಗಿದೆ. ಬೆಜೋಸ್ ಅವರ ಸಂಪತ್ತಿನ ಮೌಲ್ಯ ಅಂದಾಜು 161 ಬಿಲಿಯನ್ ಡಾಲರ್ ಆಗಿದೆ. ಕಳೆದ ವರ್ಷ ಟ್ವಿಟರ್ (ಈಗ ಎಕ್ಸ್) ಕಂಪನಿಯನ್ನು ಖರೀದಿಸಲು ಮಸ್ಕ್ 44 ಬಿಲಿಯನ್ ಡಾಲರ್ ಪಾವತಿಸಿದ್ದರು.
ಆದಾಗ್ಯೂ ಅವರು ತಮ್ಮ ಸಂಪತ್ತನ್ನು ಒಂದೇ ಪ್ರಮಾಣದಲ್ಲಿ ಉಳಿಸಿಕೊಂಡಿದ್ದಾರೆ. ಮಸ್ಕ್ ಅವರ ರಾಕೆಟ್ ಕಂಪನಿ ಸ್ಪೇಸ್ಎಕ್ಸ್ ಮೌಲ್ಯದಲ್ಲಿ ಐದು ಪಟ್ಟು ಹೆಚ್ಚಳವಾಗಿದ್ದು ಇದಕ್ಕೆ ಸಹಾಯ ಮಾಡಿದೆ. ನಾಲ್ಕು ವರ್ಷಗಳ ನಂತರ ಈಗ ಸ್ಪೇಸ್ ಎಕ್ಸ್ 150 ಬಿಲಿಯನ್ ಡಾಲರ್ ಮೌಲ್ಯದ ಕಂಪನಿಯಾಗಿದೆ. ಫೋರ್ಬ್ಸ್ ಪಟ್ಟಿಯ ಅಗ್ರ 20 ಕಂಪನಿಗಳಲ್ಲಿ ಒಂಬತ್ತು 100 ಬಿಲಿಯನ್ ಡಾಲರ್ ಅಥವಾ ಅದಕ್ಕಿಂತ ಹೆಚ್ಚಿನ ಮೌಲ್ಯವನ್ನು ಹೊಂದಿವೆ. ಈ ಪ್ರಮಾಣ ಹಿಂದೆಂದಿಗಿಂತಲೂ ಹೆಚ್ಚು. ಕಳೆದ ವರ್ಷ ಕೇವಲ ನಾಲ್ಕು 100 ಬಿಲಿಯನ್ ಡಾಲರ್ ಕಂಪನಿಗಳು ಪಟ್ಟಿಯಲ್ಲಿದ್ದವು.
ಒರಾಕಲ್ನ ಎಲಿಸನ್ 158 ಬಿಲಿಯನ್ ಡಾಲರ್ ಸಂಪತ್ತಿನೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ. ಈ ವರ್ಷ ಅಮೆರಿಕದಲ್ಲಿ ಅತ್ಯಂತ ಹೆಚ್ಚು ಸಿರಿವಂತಿಕೆ ಗಳಿಸಿದ ವ್ಯಕ್ತಿ ಅಲಿಸನ್ ಎಂದು ಪೋರ್ಬ್ಸ್ ಹೇಳಿದೆ. ಎಐ ಅಥವಾ ಕೃತಕ ಬುದ್ಧಿಮತ್ತೆ ತಂತ್ರಜ್ಞಾನದಲ್ಲಿ ಆವಿಷ್ಕಾರದ ಕಾರಣದಿಂದ ಕಂಪನಿಯ ಷೇರುಗಳ ಮೌಲ್ಯ ಗಮನಾರ್ಹವಾಗಿ ಏರಿಕೆಯಾಗಿದ್ದರಿಂದ ಎಲಿಸನ್ ಈ ವರ್ಷ 57 ಬಿಲಿಯನ್ ಡಾಲರ್ ಸಂಪತ್ತು ಗಳಿಸಿದ್ದಾರೆ.
ಐದನೇ ಸ್ಥಾನದಲ್ಲಿದ್ದ ಗೂಗಲ್ನ ಸಹ-ಸಂಸ್ಥಾಪಕ ಲ್ಯಾರಿ ಪೇಜ್ ಈ ವರ್ಷ 21 ಬಿಲಿಯನ್ ಡಾಲರ್ ಶ್ರೀಮಂತರಾಗಿದ್ದಾರೆ. ಗೂಗಲ್ ಮಾತೃ ಕಂಪನಿ ಆಲ್ಫಾಬೆಟ್ನ ಷೇರುಗಳಲ್ಲಿ ಶೇಕಡಾ 26 ರಷ್ಟು ಏರಿಕೆಯಾಗಿರುವುದರಿಂದ ಲ್ಯಾರಿ ಪೇಜ್ ಸಂಪತ್ತು ವೃದ್ಧಿಯಾಗಿದೆ. ಅವರ ಸಂಪತ್ತು ಈಗ 114 ಬಿಲಿಯನ್ ಡಾಲರ್ ಎಂದು ಅಂದಾಜಿಸಲಾಗಿದೆ.
ಒಂದು ಕಾಲದಲ್ಲಿ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿದ್ದ ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್ ಈಗ ಅಂದಾಜು 111 ಬಿಲಿಯನ್ ಡಾಲರ್ ಸಂಪತ್ತಿನೊಂದಿಗೆ ಅಮೆರಿಕದ ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದ್ದರೆ, ಗೂಗಲ್ ನ ಮತ್ತೋರ್ವ ಸಹ-ಸಂಸ್ಥಾಪಕ ಸೆರ್ಗೆ ಬ್ರಿನ್ 110 ಬಿಲಿಯನ್ ಡಾಲರ್ ಸಂಪತ್ತಿನೊಂದಿಗೆ ಏಳನೇ ಸ್ಥಾನದಲ್ಲಿದ್ದಾರೆ.
ಇದನ್ನೂ ಓದಿ : ಆಸ್ಟ್ರೇಲಿಯಾದಲ್ಲಿ ಕುಶಲ ಕಾರ್ಮಿಕರ ತೀವ್ರ ಕೊರತೆ; 60 ವರ್ಷಗಳಲ್ಲೇ ಕೆಟ್ಟ ಪರಿಸ್ಥಿತಿ!