ಖಾರ್ಟೂಮ್ (ಸುಡಾನ್) : ಸುಡಾನ್‌ನಲ್ಲಿ ನಡೆದಿರುವ ಸೇನಾಪಡೆಗಳ ಸಂಘರ್ಷದಲ್ಲಿ ಈವರೆಗೆ 400ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಮತ್ತು 3,500 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ (WHO) ತಿಳಿಸಿದೆ. ಈ ಬಗ್ಗೆ ಮಾತನಾಡಿರುವ ವಿಶ್ವ ಆರೋಗ್ಯ ಸಂಸ್ಥೆ ವಕ್ತಾರೆ ಮಾರ್ಗರೆಟ್ ಹ್ಯಾರಿಸ್, 413 ಜನರು ಸಾವನ್ನಪ್ಪಿದ್ದಾರೆ ಮತ್ತು 3,551 ಜನರು ಗಾಯಗೊಂಡಿದ್ದಾರೆ ಎಂಬ ಮಾಹಿತಿ ನಮ್ಮ ಬಳಿ ಇದೆ ಎಂದು ಹೇಳಿದರು. ದೇಶದಲ್ಲಿನ ಸುಮಾರು 20 ಆಸ್ಪತ್ರೆಗಳು ಕಾರ್ಯಾಚರಣೆ ನಿಲ್ಲಿಸಿವೆ ಮತ್ತು ಇನ್ನೂ 12 ಆಸ್ಪತ್ರೆಗಳು ಮುಚ್ಚುವ ಆತಂಕವಿದೆ ಎಂದು ಅವರು ಮಾಹಿತಿ ಒದಗಿಸಿದ್ದಾರೆ.
ಆಸ್ಪತ್ರೆಗಳು ಬಂದ್ ಆಗಿರುವುದರಿಂದ ಭೀಕರ ಹೋರಾಟದಲ್ಲಿ ಗಾಯಗೊಂಡ ಜನರಿಗೆ ಮಾತ್ರವಲ್ಲ, ಪ್ರಥಮ ಚಿಕಿತ್ಸೆಯ ಅಗತ್ಯವಿರುವ ಜನರ ಮೇಲೂ ಪರಿಣಾಮ ಬೀರುತ್ತದೆ ಎಂದು ವಕ್ತಾರರು ಹೇಳಿದರು. ಸತ್ತವರಲ್ಲಿ ಕನಿಷ್ಠ ಒಂಬತ್ತು ಮಕ್ಕಳು ಸೇರಿದ್ದಾರೆ ಎಂದು ವಿಶ್ವಸಂಸ್ಥೆಯ ಮಕ್ಕಳ ಸಂಸ್ಥೆ ಯುನಿಸೆಫ್ ಮಾಹಿತಿ ನೀಡಿದೆ. 50ಕ್ಕೂ ಹೆಚ್ಚು ಮಕ್ಕಳು ಗಾಯಗೊಂಡಿದ್ದಾರೆ ಎಂದು ಸಂಸ್ಥೆ ತಿಳಿಸಿದೆ. ಇದು ದೇಶದ ಮಕ್ಕಳ ಮೇಲೆ ವಿನಾಶಕಾರಿ ಪರಿಣಾಮ ಬೀರುತ್ತಿದೆ. ಎಲ್ಲಿಯವರೆಗೆ ಹೋರಾಟ ಮುಂದುವರಿಯುತ್ತದೆಯೋ ಅಲ್ಲಿಯವರೆಗೆ ಮಕ್ಕಳು ಬೆಲೆ ತೆರುತ್ತಲೇ ಇರುತ್ತಾರೆ. ಹೋರಾಟದಿಂದ ಅನೇಕ ಕುಟುಂಬಗಳು ಬೀದಿಗೆ ಬಿದ್ದಿವೆ. ವಿದ್ಯುತ್ ಸಂಪರ್ಕವಿಲ್ಲದೇ ಆಹಾರ, ನೀರು ಮತ್ತು ಔಷಧಗಳ ಕೊರತೆಯಿಂದ ಭಯಭೀತರಾಗಿದ್ದಾರೆ ಎಂದು ಯುನಿಸೆಫ್ ವಕ್ತಾರ ಜೇಮ್ಸ್ ಎಲ್ಡರ್ ಹೇಳಿದರು.
ಸುಡಾನ್ ಈಗಾಗಲೇ ಅತಿ ಹೆಚ್ಚು ಅಪೌಷ್ಟಿಕ ಮಕ್ಕಳನ್ನು ಹೊಂದಿರುವ ದೇಶಗಳಲ್ಲಿ ಒಂದಾಗಿದೆ ಮತ್ತು ಈಗ ಸಂಘರ್ಷದ ಕಾರಣದಿಂದ ತುರ್ತು ಚಿಕಿತ್ಸೆ ಕೂಡ ಸಿಗದಂತಾಗಿದೆ ಎಂದು ಅವರು ಹೇಳಿದರು. ಹೋರಾಟದಿಂದ 40 ಮಿಲಿಯನ್ ಡಾಲರ್ಗೂ ಅಧಿಕ ಮೌಲ್ಯದ ಲಸಿಕೆಗಳು ಮತ್ತು ಇನ್ಸುಲಿನ್‌ನ ಕೋಲ್ಡ್ ಸ್ಟೋರೇಜ್‌ಗೆ ಅಪಾಯ ಎದುರಾಗಿದೆ ಎಂದು ಅವರು ಎಚ್ಚರಿಸಿದ್ದಾರೆ. ಹೋರಾಟವನ್ನು ತಕ್ಷಣವೇ ನಿಲ್ಲಿಸಲು ನಮಗೆ ಪಡೆಗಳ ಅಗತ್ಯವಿದೆ ಮತ್ತು ಎಲ್ಲ ದೇಶಗಳು ಮಕ್ಕಳನ್ನು ಹಾನಿಯಿಂದ ರಕ್ಷಿಸಲು ತಮ್ಮ ಅಂತರರಾಷ್ಟ್ರೀಯ ಜವಾಬ್ದಾರಿಗಳನ್ನು ನಿಭಾಯಿಸಬೇಕು ಎಂದು ಅವರು ಹೇಳಿದರು.
ಖಾರ್ಟೂಮ್‌ನಲ್ಲಿ ಪೆಟ್ರೋಲ್ ಬಂಕ್ ಬಂದ್: ಖಾರ್ಟೂಮ್ನಲ್ಲಿನ ಪರಿಸ್ಥಿತಿಯ ಬಗ್ಗೆ ಮಾತನಾಡಿದ ನಾರ್ವೇಜಿಯನ್ ನಿರಾಶ್ರಿತರ ಮಂಡಳಿಯ (ಎನ್‌ಆರ್‌ಸಿ) ಹಮ್ಸಾ ಅಲ್ಫಕಿಹ್, ಖಾರ್ಟೂಮ್ ನಿವಾಸಿಗಳು ಎದುರಿಸುತ್ತಿರುವ ಪ್ರಮುಖ ಸಮಸ್ಯೆ ಪೆಟ್ರೋಲಿಯಂ ಕೊರತೆ ಎಂದು ಹೇಳಿದ್ದಾರೆ. ಎಲ್ಲಾ ಗ್ಯಾಸ್ ಸ್ಟೇಷನ್‌ಗಳನ್ನು ಮುಚ್ಚಲಾಗಿದೆ ಮತ್ತು ಕಪ್ಪು ಮಾರುಕಟ್ಟೆಯಲ್ಲಿ ಪೆಟ್ರೋಲಿಯಂ ಅನ್ನು ಅತಿಯಾದ ಬೆಲೆಗೆ ಮಾರಾಟ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಮಾನವೀಯ ಆಪತ್ತು : ಹೋರಾಟದಿಂದಾಗಿ ಹಲವಾರು ಆಸ್ಪತ್ರೆಗಳು ಸೇವೆ ನೀಡುತ್ತಿಲ್ಲ ಎಂದು ಸುಡಾನ್ ವೈದ್ಯರ ಸಿಂಡಿಕೇಟ್‌ನ ಅಲಿ ಬಶೀರ್ ಹೇಳಿದ್ದಾರೆ. ಮಾನವೀಯ ಪರಿಸ್ಥಿತಿ ಆಪತ್ತಿನಲ್ಲಿದೆ. ಆಸ್ಪತ್ರೆಗಳು ಇನ್ನೂ ವಿದ್ಯುತ್ ಕಡಿತ ಮತ್ತು ನೀರಿನ ಕೊರತೆಯಿಂದ ಬಳಲುತ್ತಿವೆ. ಜೀವರಕ್ಷಕ ಔಷಧಿಗಳು, ರಕ್ತದ ಬ್ಯಾಗ್ಗಳು, ಪ್ರತಿಜೀವಕಗಳು ಮತ್ತು IV ದ್ರವಗಳ ತುರ್ತು ಅವಶ್ಯಕತೆಯಿದೆ ಎಂದು ಅವರು ಹೇಳಿದರು.
ಇದನ್ನೂ ಓದಿ : ಭಾರತದ ಟಿವಿ ಚಾನೆಲ್ಗಳಿಗೆ ಪಾಕಿಸ್ತಾನದಲ್ಲಿ ನಿರ್ಬಂಧ: ಕಠಿಣ ಕ್ರಮಕ್ಕೆ ಮುಂದಾದ ಪೆಮ್ರಾ