ವಾಷಿಂಗ್ಟನ್ (ಅಮೆರಿಕ): ಆರ್ಥಿಕ ಸಮಸ್ಯೆ ಎದುರಿಸುತ್ತಿರುವ ಅನೇಕ ಕಂಪನಿಗಳು ಕೆಲಸಗಾರರನ್ನು ವಜಾಗೊಳಿಸುತ್ತಿವೆ. ಆ ಸಾಲಿಗೆ ಇದೀಗ ಫೇಸ್‌ಬುಕ್ ಕೂಡ ಸೇರಲಿದೆ. ಫೇಸ್‌ಬುಕ್ ಮಾತೃ ಸಂಸ್ಥೆಯಾದ ಮೆಟಾ ಪ್ಲಾಟ್‌ಫಾರ್ಮ್ ಮುಂದಿನ ಕೆಲವು ತಿಂಗಳುಗಳಲ್ಲಿ ಸಾವಿರಾರು ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕಲು ಮುಂದಾಗಿದೆ ಎಂದು ಕೆಲ ಮಾಧ್ಯಮಗಳು ವರದಿ ಮಾಡಿವೆ.
ಕಳೆದ ವರ್ಷ 13 % ರಷ್ಟು ಕೆಲಸಗಾರರನ್ನು ಕಡಿತಗೊಳಿಸಲಾಗಿತ್ತು. ಸರಿಸುಮಾರು 11,000 ಮಂದಿ ಉದ್ಯೋಗ ಕಳೆದುಕೊಂಡಿದ್ದರು. ಈ ಬಾರಿ ಸಹ ಅದೇ ಪ್ರಮಾಣದಲ್ಲಿ ಮುಂಬರುವ ತಿಂಗಳುಗಳಲ್ಲಿ ಹಂತ ಹಂತವಾಗಿ ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸುವುದಾಗಿ ಕ್ರಮ ಕೈಗೊಂಡಿದೆ ಎಂದು ಅಲ್ಲಿನ ಜನ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮೊದಲ ಸುತ್ತಿನ ಉದ್ಯೋಗ ಕಡಿತವನ್ನು ಮುಂದಿನ ವಾರ ಘೋಷಿಸಲಾಗುವುದು. ಅದರಲ್ಲೂ ಇಂಜಿನಿಯರಿಂಗ್ ಹೊರತುಪಡಿಸಿ ಉಳಿದೆಲ್ಲಾ ಕೆಲಸಗಾರರಿಗೆ ತೀವ್ರ ಹೊಡೆತ ಬೀಳುವ ನಿರೀಕ್ಷೆಯಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ: ಟ್ವಿಟರ್ನಲ್ಲಿ ಉದ್ಯೋಗಿಗಳ ಕೊರತೆ: ಸುಳ್ಳು ಸುದ್ದಿ, ಟ್ರೋಲಿಂಗ್ ತಡೆಯುವುದು ಕಷ್ಟಕರ
ರಿಯಾಲಿಟಿ ಲ್ಯಾಬ್ಸ್, ಮೆಟಾದ ಹಾರ್ಡ್‌ವೇರ್ ಮತ್ತು ಮೆಟಾವರ್ಸ್ ವಿಭಾಗದಲ್ಲಿ ಕೆಲಸ ಮಾಡಲು ಬಳಸುತ್ತಿರುವ ಕೆಲವು ಸಾಧನಗಳನ್ನು ಸಹ ಕಡಿತಗೊಳಿಸುವ ಸಾಧ್ಯತೆ ಇದೆ. ಜಾಹೀರಾತು ಆದಾಯದಲ್ಲಿ ಮಂದಗತಿ ಕಂಡಿರುವ ಮೆಟಾ ಸಂಸ್ಥೆಯು, ಮೆಟಾವರ್ಸ್ ಎಂಬ ವರ್ಚುವಲ್ ರಿಯಾಲಿಟಿ ಪ್ಲಾಟ್‌ಫಾರ್ಮ್‌ನತ್ತ ಗಮನ ಹರಿಸುತ್ತಿದೆ. ಹಾಗಾಗಿ, ಕೈ ಬಿಡಬಹುದಾದ ಉದ್ಯೋಗಿಗಳನ್ನು ಪಟ್ಟಿ ಮಾಡುವಂತೆ ನಿರ್ದೇಶಕರು ಹಾಗೂ ಉಪಾಧ್ಯಕ್ಷರಿಗೆ ಮನವಿ ಮಾಡಲಾಗಿದೆ ಎಂದು ಮೂಲಗಳು ತಿಳಿಸಿದೆ.
ಮೆಟಾ ಮುಖ್ಯ ಕಾರ್ಯನಿರ್ವಾಹಕ ಮಾರ್ಕ್ ಜುಕರ್‌ಬರ್ಗ್ ಈ ಹಿಂದೆ 2023 ಮೆಟಾದಲ್ಲಿ "ದಕ್ಷತೆಯ ವರ್ಷ" ಎಂದು ಹೇಳಿದ್ದರು. ಹೀಗಾಗಿ, ದಕ್ಷತೆಯನ್ನು ಹೆಚ್ಚಿಸಲು ಕೆಲಸಗಾರರ ತಂಡಗಳನ್ನು ಪುನರ್ ರಚಿಸಲು ಮುಂದಾಗಿದೆ. ಕಾರ್ಯಕ್ಷಮತೆಯ ವಿಮರ್ಶೆ ಪ್ರಕ್ರಿಯೆಯ ಮೂಲಕ ಕಂಪನಿಯನ್ನು ಮತ್ತಷ್ಟು ಉತ್ತೇಜಿಸಲು ಪ್ರಯತ್ನಿಸಲಾಗುತ್ತಿದೆ. ಪ್ರಸ್ತುತ ವಾಟ್ಸ್ ಆ್ಯಪ್, ಇನ್ಸ್ ಸ್ಟಾಗ್ರಾಮ್ ಮತ್ತು ಫೇಸ್‌ಬುಕ್ ಸೇರಿದಂತೆ ಬೃಹತ್ ಸಾಮಾಜಿಕ ಮಾಧ್ಯಮಗಳ ಪ್ಲಾಟ್‌ಫಾರ್ಮ್‌ಗಳನ್ನು ಹೊಂದಿದೆ.
ಇದನ್ನೂ ಓದಿ: 2 ತಿಂಗಳಲ್ಲಿ 417 ಟೆಕ್ ಕಂಪನಿಗಳ 1.2 ಲಕ್ಷ ಉದ್ಯೋಗಿಗಳು ವಜಾ!
ಇನ್ನು Amazon.com Inc., Microsoft Corp ಮತ್ತು ಇತರರು ಸೇರಿದಂತೆ ತಂತ್ರಜ್ಞಾನ ಕಂಪನಿಗಳು ಈ ವರ್ಷ ಸಾವಿರಾರು ಉದ್ಯೋಗಗಳನ್ನು ಕೆಲಸದಿಂದ ಕಡಿತಗೊಳಿಸಿವೆ. ಜನವರಿಯೊಂದರಲ್ಲೇ ಅಮೆಜಾನ್, ಗೂಗಲ್, ಮೈಕ್ರೋಸಾಫ್ಟ್, ಸೇರಿದಂತೆ ಇತರೆ ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದ 1 ಲಕ್ಷ ಟೆಕ್ ಉದ್ಯೋಗಿಗಳು ಕೆಲಸ ಕಳೆದುಕೊಂಡಿದ್ದಾರೆ. ಒಟ್ಟಾರೆಯಾಗಿ ಸುಮಾರು 3 ಲಕ್ಷ ಟೆಕ್ ಉದ್ಯೋಗಿಗಳು 2022 ರಲ್ಲಿ ಮತ್ತು ಈ ವರ್ಷದ ಫೆಬ್ರವರಿವರೆಗೆ ಉದ್ಯೋಗ ಕಳೆದುಕೊಂಡಿದ್ದಾರೆ. ಕೆಲಸಗಾರರ ವಜಾಕ್ಕೆ ಕಂಪನಿಗಳು ಹಲವಾರು ಕಾರಣಗಳನ್ನು ನೀಡಿವೆ. ಅಗತ್ಯಕ್ಕಿಂತ ಹೆಚ್ಚು ನೇಮಕಾತಿ, ಜಾಗತಿಕ ಆರ್ಥಿಕ ಪರಿಸ್ಥಿತಿಗಳು, ಕೋವಿಡ್ 19 ಸಾಂಕ್ರಾಮಿಕದಿಂದ ಉಂಟಾದ ಪರಿಣಾಮ ಸೇರಿದಂತೆ ಹಲವು ಕಾರಣಗಳನ್ನು ನೀಡಲಾಗಿದೆ.
ಇದನ್ನೂ ಓದಿ: ಉದ್ಯೋಗ ಕಡಿತ ಬದಲು ಪ್ರಮುಖ ನಿರ್ಣಯ.. ಐಟಿ ಕಂಪನಿಗಳಿಗೆ ಮಾದರಿಯಾದ ಇಂಟೆಲ್