ಇಸ್ಲಾಮಾಬಾದ್: ಪಾಕಿಸ್ತಾನದ ಬಲೂಚಿಸ್ತಾನ್ ಪ್ರಾಂತ್ಯದ ಹೈಕೋರ್ಟ್ನ ಮಾಜಿ ಮುಖ್ಯ ನ್ಯಾಯಮೂರ್ತಿ ಶುಕ್ರವಾರ ಮಸೀದಿಯ ಹೊರಗೆ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಖರಾನ್ ಪ್ರದೇಶದ ಮಸೀದಿಯ ಹೊರಗೆ ಮುಹಮ್ಮದ್ ನೂರ್ ಮೆಸ್ಕಂಜೈ ಮೇಲೆ ದಾಳಿಕೋರರು ಗುಂಡು ಹಾರಿಸಿದ್ದಾರೆ. ದಾಳಿಯಲ್ಲಿ ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಖರಾನ್ ಪೊಲೀಸ್ ವರಿಷ್ಠಾಧಿಕಾರಿ ಆಸಿಫ್ ಹಲೀಮ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಗಾಯಗೊಂಡಿದ್ದ ಮಾಜಿ ಮುಖ್ಯ ನ್ಯಾಯಮೂರ್ತಿಗಳನ್ನ ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾದರೂ ಅವರು ಬದುಕುಳಿಯಲಿಲ್ಲ. ನ್ಯಾಯಮೂರ್ತಿಗಳ ಸಾವಿಗೆ ತೀವ್ರ ಸಂತಾಪ ಸೂಚಿಸಿರುವ ಬಲೂಚಿಸ್ತಾನ್ ಮುಖ್ಯಮಂತ್ರಿ ಮೀರ್ ಅಬ್ದುಲ್ ಖುಡೂಸ್ ಬಿಜೆಂಜೊ, ಮಾಜಿ ನ್ಯಾಯಾಧೀಶರು ನಿರ್ಭೀತ ಜಸ್ಟೀಸ್ ಆಗಿದ್ದರು. ಅವರ ಸೇವೆ ಸ್ಮರಣೀಯ ಎಂದಿದ್ದಾರೆ. ರಿಬಾ ಮೂಲದ ಬ್ಯಾಂಕಿಂಗ್ ವ್ಯವಸ್ಥೆಯು ಶರಿಯಾಗೆ ವಿರುದ್ಧವಾಗಿದೆ ಎಂಬ ಮಹತ್ವದ ತೀರ್ಪು ನೀಡಿದ್ದಕ್ಕಾಗಿ ಮೆಸ್ಕಂಜೈ ಹೆಸರುವಾಸಿಯಾಗಿದ್ದರು.
ಪಾಕಿಸ್ತಾನದಲ್ಲಿ ಆಂತರಿಕ ಭದ್ರತಾ ವ್ಯವಸ್ಥೆ ಕುಸಿಯುತ್ತಿರುವ ಆರೋಪಗಳ ಬೆನ್ನಲ್ಲೇ ನ್ಯಾಯಾಧೀಶರ ಕೊಲೆಯಾಗಿದೆ. ಈ ವರ್ಷ ಪಾಕಿಸ್ತಾನದಲ್ಲಿ ಅತಿ ಹೆಚ್ಚು ಭಯೋತ್ಪಾದಕ ಘಟನೆಗಳು ಸೆಪ್ಟೆಂಬರ್‌ನಲ್ಲಿ ದಾಖಲಾಗಿವೆ. ಕಾನೂನುಬಾಹಿರ ತೆಹ್ರಿಕ್-ಇ-ತಾಲಿಬಾನ್ ಪಾಕಿಸ್ತಾನ್ (ಟಿಟಿಪಿ) ದಾಳಿಯನ್ನು ಪುನರಾರಂಭಿಸಿದೆ ಎಂದು ಇಸ್ಲಾಮಾಬಾದ್ ಮೂಲದ ಚಿಂತಕರ ಗುಂಪೊಂದು ಹೇಳಿದೆ.
ಸೆಪ್ಟೆಂಬರ್‌ನಲ್ಲಿ 42 ಉಗ್ರಗಾಮಿ ದಾಳಿಗಳು ನಡೆದಿದ್ದು, ಆಗಸ್ಟ್‌ಗೆ ಹೋಲಿಸಿದರೆ ಶೇ 35ರಷ್ಟು ಹೆಚ್ಚಳವಾಗಿದೆ. ಫಾಟಾ ಮತ್ತು ಖೈಬರ್ ಪಖ್ತುಂಖ್ವಾದಲ್ಲಿ (ಕೆಪಿ) ಹಿಂಸಾಚಾರದಲ್ಲಿ ಶೇಕಡಾ 106 ರಷ್ಟು ಹೆಚ್ಚಳವಾಗಿದೆ. ಈ ವರ್ಷದ ಆಗಸ್ಟ್‌ನಲ್ಲಿ, ಉಗ್ರಗಾಮಿಗಳು ಪಾಕಿಸ್ತಾನದಾದ್ಯಂತ 31 ದಾಳಿ ನಡೆಸಿದ್ದಾರೆ. ಈ ದಾಳಿಗಳಲ್ಲಿ 37 ಜನ ಸಾವನ್ನಪ್ಪಿದ್ದಾರೆ ಮತ್ತು 55 ಜನ ಗಾಯಗೊಂಡಿದ್ದಾರೆ.
ಇದನ್ನೂ ಓದಿ: ಅಲ್ಪಸಂಖ್ಯಾತರ ಮೇಲಿನ ಮತಾಂಧ ವರ್ತನೆಯಿಂದ ದೇಶಕ್ಕೆ ಕೆಟ್ಟ ಹೆಸರು : ಪಾಕ್ ಸುಪ್ರೀಂಕೋರ್ಟ್