ಸ್ಯಾನ್ ಫ್ರಾನ್ಸಿಸ್ಕೋ (ಅಮೆರಿಕ) : ಅಮೆರಿಕದ ಲೇಖಕ ಮತ್ತು ಪತ್ರಕರ್ತ ವಾಲ್ಟರ್ ಐಸಾಕ್ಸನ್ ಅವರು ಬರೆದ ಮಸ್ಕ್ ಅವರ ಜೀವನಾಧಾರಿತವಾದ 'ಎಲೋನ್ ಮಸ್ಕ್' ಶೀರ್ಷಿಕೆಯ ಜೀವನಚರಿತ್ರೆ ಗ್ರಂಥವು ಬಿಡುಗಡೆಯಾದ ಮೊದಲ ವಾರದಲ್ಲಿಯೇ ಅತ್ಯಧಿಕ ಮಾರಾಟ ಕಂಡಿದೆ. ಮೊದಲ ವಾರದಲ್ಲಿಯೇ ಇದರ 92,560 ಪ್ರತಿಗಳು ಮಾರಾಟವಾಗಿವೆ. ಪುಸ್ತಕ ಟ್ರ್ಯಾಕರ್ ಸಿರ್ಕಾನಾ ಬುಕ್ ಸ್ಕ್ಯಾನ್ ಸಂಸ್ಥೆಯು ಸಂಗ್ರಹಿಸಿದ ಮಾಹಿತಿಯ ಪ್ರಕಾರ, ಟೆಸ್ಲಾ ಸಂಸ್ಥಾಪಕ ಮತ್ತು ಎಕ್ಸ್ (ಹಿಂದೆ ಟ್ವಿಟರ್)ನ ಮಾಲೀಕರಾಗಿರುವ ಎಲೋನ್ ಮಸ್ಕ್ ಅವರ ಜೀವನಚರಿತ್ರೆ ಗ್ರಂಥವು ಸೆಪ್ಟೆಂಬರ್ 16 ರವರೆಗೆ ಮುದ್ರಿತ ಪ್ರತಿಗಳನ್ನು ಒಳಗೊಂಡಂತೆ ದಾಖಲೆಯ ಮಾರಾಟಕ್ಕೆ ಸಾಕ್ಷಿಯಾಗಿದೆ.
ತಮ್ಮ ಜೀವನಚರಿತ್ರೆ ಗ್ರಂಥ ಉತ್ತಮ ಮಾರಾಟವಾಗುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿರುವ ಮಸ್ಕ್, "ಕೂಲ್ ಆಗಿದೆ, ಆದರೂ ನನ್ನ ಮುಖದ ಇಷ್ಟೊಂದು ಕ್ಲೋಸ್-ಅಪ್ ಚಿತ್ರಗಳನ್ನು ನೋಡುವುದು ವಿಲಕ್ಷಣವಾಗಿದೆ." ಎಂದು ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ಈ ಹಿಂದೆ ವಾಲ್ಟರ್ ಐಸಾಕ್ಸನ್ ಅವರು ಆಪಲ್ ಸಹ-ಸಂಸ್ಥಾಪಕ ದಿ. ಸ್ಟೀವ್ ಜಾಬ್ಸ್ ಅವರ ಜೀವನಚರಿತ್ರೆ ಗ್ರಂಥವನ್ನು ಬರೆದಿದ್ದರು. 2011ರಲ್ಲಿ ಬಿಡುಗಡೆಯಾದ ಈ ಗ್ರಂಥದ 3,83,000 ಪ್ರತಿಗಳು ಮೊದಲ ವಾರದಲ್ಲಿಯೇ ಮಾರಾಟವಾಗಿದ್ದವು. ಅಕ್ಟೋಬರ್ 5, 2011 ರಂದು ಜಾಬ್ಸ್ ನಿಧನರಾದ ಕೆಲವೇ ವಾರಗಳ ನಂತರ ಈ ಪುಸ್ತಕವನ್ನು ಪ್ರಕಟಿಸಲಾಗಿತ್ತು. ಅದರ ನಂತರ ಬಿಡುಗಡೆಯಾದ ಮೊದಲ ವಾರದಲ್ಲಿಯೇ ಅತ್ಯಧಿಕ ಸಂಖ್ಯೆಯಲ್ಲಿ ಮಾರಾಟವಾದ ಎರಡನೇ ಆತ್ಮಚರಿತ್ರೆ ಗ್ರಂಥ ಮಸ್ಕ್ ಅವರದ್ದಾಗಿದೆ.
ಆತ್ಮಚರಿತ್ರೆಯನ್ನು ಬರೆಯಲು ಪತ್ರಕರ್ತ ವಾಲ್ಟರ್ ಐಸಾಕ್ಸನ್ ಸುಮಾರು ಎರಡು ವರ್ಷಗಳ ಕಾಲ ಮಸ್ಕ್ ಅವರೊಂದಿಗೆ ಸತತವಾಗಿ ಸಂಪರ್ಕದಲ್ಲಿದ್ದರು. ಈ ಎರಡು ವರ್ಷಗಳ ಅವಧಿಯಲ್ಲಿ ಐಸಾಕ್ಸನ್ ಮಸ್ಕ್ ಅವರ ಸಭೆಗಳಿಗೆ ಹಾಜರಾಗುತ್ತಿದ್ದರು, ಅವರ ಕಾರ್ಖಾನೆ ಹಾಗೂ ಆಫೀಸುಗಳಲ್ಲಿ ಸುತ್ತಾಡುತ್ತಿದ್ದರು ಮತ್ತು ಅವರ ಆಪ್ತರು, ಕುಟುಂಬಸ್ಥರು, ಸಹೋದ್ಯೋಗಿಗಳನ್ನು ಮಾತನಾಡಿಸಿ ಮಾಹಿತಿ ಪಡೆಯುತ್ತಿದ್ದರು.
'ಎಲೋನ್ ಮಸ್ಕ್' ಗ್ರಂಥವು ದಿ ನ್ಯೂಯಾರ್ಕ್ ಟೈಮ್ಸ್ನ ಬೆಸ್ಟ್ ಸೆಲ್ಲರ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಇದು ಅಮೆಜಾನ್ನಲ್ಲಿಯೂ ಬೆಸ್ಟ್ ಸೆಲ್ಲರ್ ಆಗಿದ್ದು, $ 20.99 ಗೆ ಮಾರಾಟವಾಗುತ್ತಿದೆ. ಪುಸ್ತಕವು ಮಸ್ಕ್ ಅವರ ಜೀವನದ ಹಲವಾರು ಅಂಶಗಳನ್ನು ಬಹಿರಂಗಪಡಿಸಿದೆ. ಅವರು ಹಲವಾರು ಮಹಿಳೆಯರೊಂದಿಗೆ ಇಟ್ಟುಕೊಂಡಿದ್ದ ಪ್ರಣಯ ಸಂಬಂಧಗಳ ಮಾಹಿತಿ ಇದರಲ್ಲಿವೆ.
ಜೀವನದ ಆರಂಭದಲ್ಲಿ ತನ್ನ ತಂದೆಯಿಂದ ತುಂಬಾ ನೊಂದಿದ್ದ ಮಸ್ಕ್ ಹಲವಾರು ಗರ್ಲ್ ಫ್ರೆಂಡ್ಗಳು, ಮಾಜಿ ಪತ್ನಿಯರು ಮತ್ತು ಮಾಜಿ ಗರ್ಲ್ಫ್ರೆಂಡ್ಗಳೊಂದಿಗೆ ಸಂಬಂಧವಿಟ್ಟುಕೊಂಡಿದ್ದರು. ಅಲ್ಲದೆ ಹಲವಾರು ಮಹಿಳೆಯರೊಂದಿಗೆ ಅವರು ಪಡೆದ ಅನೇಕ ಮಕ್ಕಳ ಮಾಹಿತಿಯೂ ಇದರಲ್ಲಿದೆ.
ಇದನ್ನೂ ಓದಿ : RCS ಮೆಸೇಜಿಂಗ್ ಅಳವಡಿಸಿಕೊಳ್ಳದ ಆ್ಯಪಲ್; ಐಫೋನ್ಗೆ iPager ಎಂದು ಗೇಲಿ ಮಾಡಿದ ಗೂಗಲ್!