ಡೆರ್ನಾ (ಲಿಬಿಯಾ) : ಲಿಬಿಯಾದಲ್ಲಿ ಭೀಕರ ಬಿರುಗಾಳಿ ಮತ್ತು ಪ್ರವಾಹಕ್ಕೆ ಅಲ್ಲಿನ ಜನರು ತತ್ತರಿಸಿದ್ದಾರೆ. ಪೂರ್ವ ಲಿಬಿಯಾದ ನಗರವಾದ ಡರ್ನಾದಲ್ಲಿ ಪ್ರವಾಹದಿಂದ ಸತ್ತವರ ಸಂಖ್ಯೆ 11,300ಕ್ಕೆ ಏರಿಕೆಯಾಗಿದೆ. ಕರಾವಳಿ ನಗರದಲ್ಲಿ ಇನ್ನೂ 10,100 ಮಂದಿ ನಾಪತ್ತೆಯಾಗಿದ್ದು, ಶೋಧ ಕಾರ್ಯಾಚರಣೆ ನಡೆಸಲಾಗುತ್ತದೆ ಎಂದು ಸ್ಥಳೀಯ ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.
ಡರ್ನಾದಲ್ಲಿ ಸಾವಿರಾರು ಜನರನ್ನು ಸಾಮೂಹಿಕವಾಗಿ ಸಮಾಧಿ ಮಾಡಲಾಗಿದೆ. ರಕ್ಷಣಾ ಪಡೆ ಸಿಬ್ಬಂದಿ ಕಾರ್ಯಾಚರಣೆ ಮುಂದುವರೆಸಿದ್ದು, ನಗರದಲ್ಲಿ ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಂಭವವಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆರೋಗ್ಯ ಅಧಿಕಾರಿಗಳು 5,500 ಸಾವು ಸಂಭವಿಸಿರುವುದನ್ನು ದೃಢಪಡಿಸಿದ್ದಾರೆ ಹಾಗೂ 9,000 ಜನರು ಇನ್ನೂ ನಾಪತ್ತೆಯಾಗಿದ್ದಾರೆ ಎಂದು ಹೇಳಿದ್ದಾರೆ.
ಡೇನಿಯಲ್ ಹೆಸರಿನ ಚಂಡಮಾರುತದಿಂದ ಉಂಟಾದ ಈ ಪ್ರವಾಹದಲ್ಲಿ ಅಣೆಕಟ್ಟು ಒಡೆದು ಹೋಗಿದ್ದು, ಪರಿಣಾಮವಾಗಿ ನೀರು ಅನೇಕ ನಗರಗಳು ಮತ್ತು ಹಳ್ಳಿಗಳಿಗೆ ನುಗ್ಗಿದೆ. ಹೀಗಾಗಿ, ಸಾವಿರಾರು ಮಂದಿ ಸಾವನ್ನಪ್ಪಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಅನೇಕ ಕಡೆ ಮನೆಗಳು ನೆಲಕ್ಕುರುಳಿವೆ. ಸಮುದ್ರದ ನೀರು ಪ್ರವಾಹದ ರೂಪದಲ್ಲಿ ನಗರವನ್ನು ಪ್ರವೇಶಿಸಿದ್ದು, ಅಣೆಕಟ್ಟು ಮತ್ತು ಸೇತುವೆಗಳು ನೆಲಸಮವಾಗಿವೆ.
ಇದನ್ನೂ ಓದಿ : ಭೀಕರ ಪ್ರವಾಹಕ್ಕೆ ಪೂರ್ವ ಲಿಬಿಯಾ ತತ್ತರ : 5 ಸಾವಿರಕ್ಕೂ ಹೆಚ್ಚು ಜನ ಸಾವು, 10 ಸಾವಿರ ಮಂದಿ ನಾಪತ್ತೆ
"ಭಾನುವಾರ ರಾತ್ರಿ ಚಂಡಮಾರುತವು ಕರಾವಳಿಯನ್ನು ಅಪ್ಪಳಿಸುತ್ತಿದ್ದಂತೆ ನಗರದ ಹೊರಗಿನ ಎರಡು ಅಣೆಕಟ್ಟುಗಳು ಒಡೆದಿದ್ದು, ದೊಡ್ಡ ಸ್ಫೋಟದ ಶಬ್ದ ಕೇಳಿಬಂದಿತ್ತು. ಪ್ರಬಲವಾದ ಡೇನಿಯಲ್ ಚಂಡಮಾರುತವು ಪೂರ್ವ ಲಿಬಿಯಾದಾದ್ಯಂತ ಪಟ್ಟಣಗಳಲ್ಲಿ ಮಾರಣಾಂತಿಕ ಪ್ರವಾಹವನ್ನು ಉಂಟು ಮಾಡಿದ್ದು, ಡರ್ನಾ ಹೆಚ್ಚು ಹಾನಿಗೊಳಗಾಗಿದೆ" ಎಂದು ನಿವಾಸಿಗಳು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ : ಹಿಮಾಚಲಪ್ರದೇಶದಲ್ಲಿ ಮೇಘಸ್ಫೋಟ, ಒಂದೇ ಕುಟುಂಬದ ಐವರು ನಾಪತ್ತೆ, ಮತ್ತೆ ಪ್ರವಾಹ ಪರಿಸ್ಥಿತಿ : ವಿಡಿಯೋ
"ಲಿಬಿಯಾ ಸರ್ಕಾರವು ಪರಿಹಾರ ಕಾರ್ಯ ಕೈಗೊಂಡಿದೆ. ಟ್ರಿಪೋಲಿ ಮೂಲದ ಪಶ್ಚಿಮ ಸರ್ಕಾರವು ಡರ್ನಾ ಮತ್ತು ಇತರೆ ಪೂರ್ವ ಪಟ್ಟಣಗಳ ಪುನರ್ ನಿರ್ಮಾಣಕ್ಕಾಗಿ $412 ಮಿಲಿಯನ್ ಹಣವನ್ನು ಮಂಜೂರು ಮಾಡಿದೆ ಮತ್ತು ಟ್ರಿಪೋಲಿಯಲ್ಲಿ ಸಶಸ್ತ್ರ ಗುಂಪು ಮಾನವೀಯ ನೆರವಿನೊಂದಿಗೆ ಬೆಂಗಾವಲು ಪಡೆಯನ್ನು ಕಳುಹಿಸಿದೆ. ಗುರುವಾರ ಬೆಳಗಿನ ವೇಳೆಗೆ 3,000ಕ್ಕೂ ಹೆಚ್ಚು ಶವಗಳನ್ನು ಸಮಾಧಿ ಮಾಡಲಾಗಿದೆ. ಸತ್ತವರಲ್ಲಿ ಹೆಚ್ಚಿನವರನ್ನು ಡರ್ನಾ ಹೊರ ಭಾಗದಲ್ಲಿ ಸಾಮೂಹಿಕವಾಗಿ ಸಮಾಧಿ ಮಾಡಲಾಯಿತು, ಇತರರನ್ನು ಹತ್ತಿರದ ಪಟ್ಟಣಗಳು ಮತ್ತು ನಗರಗಳಿಗೆ ವರ್ಗಾಯಿಸಲಾಯಿತು" ಎಂದು ಪೂರ್ವ ಲಿಬಿಯಾದ ಆರೋಗ್ಯ ಸಚಿವ ಓಥ್ಮನ್ ಅಬ್ದುಲ್ಜಲೀಲ್ ಹೇಳಿದ್ದಾರೆ.
ಇದನ್ನೂ ಓದಿ : 2019ರ ಪ್ರವಾಹ : 4 ವರ್ಷ ಕಳೆದರೂ ಮಲೆಮನೆ, ಮದುಗುಂಡಿ ನಿರಾಶ್ರಿತರಿಗೆ ಸಿಕ್ಕಿಲ್ಲ ಸೂರು
ಕುಸಿದ ಎರಡು ಅಣೆಕಟ್ಟುಗಳನ್ನು 1970ರ ದಶಕದಲ್ಲಿ ನಿರ್ಮಿಸಲಾಗಿದೆ. ಹಾಗೆಯೇ, ಕಳೆದ ಗುರುವಾರ ನಡೆದ ಕ್ಯಾಬಿನೆಟ್ ಸಭೆಯಲ್ಲಿ ಅಣೆಕಟ್ಟುಗಳ ಕುಸಿತದ ಬಗ್ಗೆ ತುರ್ತು ತನಿಖೆಯನ್ನು ನಡೆಸಲು ಪಬ್ಲಿಕ್ ಪ್ರಾಸಿಕ್ಯೂಟರ್‌ಗೆ ತಿಳಿಸಲಾಗಿದೆ.