ಬೊಗೋಟಾ, ಕೊಲಂಬಿಯಾ: 190 ಕ್ಕೂ ಹೆಚ್ಚು ಮಕ್ಕಳನ್ನು ಕೊಂದಿದ್ದಾಗಿ ಒಪ್ಪಿಕೊಂಡ ಕೊಲಂಬಿಯಾದ ಸರಣಿ ಕೊಲೆಗಾರ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ. ಈ ಕೊಲಂಬಿಯಾದ ಸರಣಿ ಕೊಲೆಗಾರ 1990 ರ ದಶಕದಲ್ಲಿ 190 ಕ್ಕೂ ಹೆಚ್ಚು ಮಕ್ಕಳನ್ನು ಕೊಲೆ ಮಾಡಿದ್ದನು ಎಂದು ಜೈಲು ಅಧಿಕಾರಿಗಳು ತಿಳಿಸಿದ್ದಾರೆ. ಅವನಿಗೆ 66 ವರ್ಷ ವಯಸ್ಸಾಗಿತ್ತು.
ಮಕ್ಕಳನ್ನು ಕೊಂದಿದ್ದ ಅಪರಾಧಿ ಸಾವು: 1990 ರ ದಶಕದಲ್ಲಿ 190 ಕ್ಕೂ ಹೆಚ್ಚು ಮಕ್ಕಳನ್ನು ಕೊಂದಿರುವುದಾಗಿ ಒಪ್ಪಿಕೊಂಡಿರುವ ಕೊಲಂಬಿಯಾದ ಸರಣಿ ಕೊಲೆಗಾರ ಗುರುವಾರ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ ಎಂದು ಜೈಲು ಅಧಿಕಾರಿಗಳು ಖಚಿತಪಡಿಸಿದ್ದಾರೆ. ದಿ ಬೀಸ್ಟ್ ಎಂಬ ಅಡ್ಡಹೆಸರಿನ ಲೂಯಿಸ್ ಆಲ್ಫ್ರೆಡೊ ಗರವಿಟೊ ಎಂಬ ಅಪರಾಧಿ 8 ರಿಂದ 16 ವರ್ಷದೊಳಗಿನ ಮಕ್ಕಳನ್ನು ಕೊಂದಿರುವುದಾಗಿ ತಪ್ಪೊಪ್ಪಿಕೊಂಡಿದ್ದನು. ಆತ ಹೆಚ್ಚಾಗಿ ಕಡಿಮೆ ಆದಾಯದ ಕುಟುಂಬಗಳಿಂದ ಬಂದ ಮಕ್ಕಳು, ನಿರಾಶ್ರಿತರು, ಬೀದಿ ಬದಿಯ ವ್ಯಾಪಾರಸ್ಥರ ಮಕ್ಕಳನ್ನು ಅಪಹರಿಸಿ, ನಿಂದಿಸಿ ಕೊಲೆ ಮಾಡುತ್ತಿದ್ದನು ಎಂಬುದು ತನಿಖೆ ಮೂಲಕ ತಿಳಿದು ಬಂದಿತ್ತು.
ಪೊಲೀಸರಿಗೆ ಸಿಕ್ಕಿತ್ತು ಆರೋಪಿಯ ಜಾಡು: ನ್ಯಾಷನಲ್ ಪೆನಿಟೆನ್ಷಿಯರಿ ಮತ್ತು ಪ್ರಿಸನ್ ಇನ್ಸ್ಟಿಟ್ಯೂಟ್ ಅವರ ಮಾಹಿತಿ ಪ್ರಕಾರ, ಗರಾವಿಟೊ ಉತ್ತರ ಕೊಲಂಬಿಯಾದ ವಲ್ಲೆಡುಪರ್‌ನಲ್ಲಿರುವ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಆತ ಜೈಲಿನಲ್ಲಿಯೇ ಅಪರಾಧಿಯಾಗಿ ಶಿಕ್ಷೆ ಅನುಭವಿಸುತ್ತಿದ್ದನು ಎಂದು ಹೇಳಿದೆ. ಇನ್ನು ಗರಾವಿಟೊ ಸಾವಿನ ಕಾರಣವನ್ನು ತಕ್ಷಣ ಬಹಿರಂಗಪಡಿಸಲಾಗಿಲ್ಲ. ಗರಾವಿಟೊ 1957 ರಲ್ಲಿ ಕೊಲಂಬಿಯಾದ ಕ್ವಿಂಡೋ ವಿಭಾಗದಲ್ಲಿ ಜನಿಸಿದ್ದನು. ವಯಸ್ಕರಾಗಿದ್ದ ವೇಳೆ ಗರಾವಿಟೊ ದೇಶಾದ್ಯಂತ ಸುಮಾರು 11 ವಿಭಾಗಗಳಿಗೆ ಪ್ರಯಾಣಿಸಿ ಅಲ್ಲಿ ಅಪ್ರಾಪ್ತ ಮಕ್ಕಳನ್ನು ಕೊಲೆ ಮಾಡಿದ್ದನು. ಪೆರೇರಾ, ಅರ್ಮೇನಿಯಾ ಮತ್ತು ತುಂಜಾದಲ್ಲಿ ಅಪ್ರಾಪ್ತ ಮಕ್ಕಳ ನಾಪತ್ತೆ ಪ್ರಕರಣಗಳಲ್ಲಿ ಸಾಮ್ಯತೆಗಳನ್ನು ಗಮನಿಸಿದಾಗ ಅಧಿಕಾರಿಗಳು ಆತನ ಜಾಡನ್ನು ಹಿಡಿಯಲು ಪ್ರಾರಂಭಿಸಿದರು.
ಅತ್ಯಾಚಾರ ಆರೋಪದಲ್ಲಿ ಆರೋಪಿ ಅರೆಸ್ಟ್: ಮೊದಲಿಗೆ ಗರಾವಿಟೊ ಆರೋಪಿಯನ್ನು ಅತ್ಯಾಚಾರದ ಆರೋಪದ ಮೇಲೆ ಏಪ್ರಿಲ್ 1999 ರಲ್ಲಿ ಬಂಧಿಸಲಾಗಿತ್ತು. 1994ರಲ್ಲಿ ಕೊಲಂಬಿಯಾದಲ್ಲಿ ಕೊಲೆಯಾದ 59 ಮಕ್ಕಳು ಸೇರಿ ಒಟ್ಟು 114 ಮಕ್ಕಳ ಕೊಲೆಯನ್ನು ನೀನು ಮಾಡಿದ್ದೀಯಾ ಅಂತಾ ತನಿಖಾ ನ್ಯಾಯಾಧೀಶರು ಕೇಳಿದಾಗ ಗರಾವಿಟೊ ಅಪರಾಧಗಳನ್ನು ಒಪ್ಪಿಕೊಂಡಿದ್ದನು. ಬಳಿಕ ನನ್ನನ್ನು ಕ್ಷಮಿಸುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ನಂತರ ಆತ 190 ಕ್ಕೂ ಹೆಚ್ಚು ಕೊಲೆಗಳನ್ನು ಮಾಡಿರುವುದಾಗಿ ಒಪ್ಪಿಕೊಂಡಿದ್ದನು.
ಬಲಿಪಶುಗಳ ಕುಟುಂಬಗಳಿಗೆ ಕ್ಷಮೆಯಾಚಿಸಿದ ಅಪರಾಧಿ: ನಾನು ಮಾಡಿದ ಎಲ್ಲ ಅಪರಾಧಕ್ಕೂ ಕ್ಷಮೆ ಕೇಳಲು ಬಯಸುತ್ತೇನೆ. ನಾನು ತಪ್ಪೊಪ್ಪಿಕೊಳ್ಳಲಿದ್ದೇನೆ. ಹೌದು, ನಾನು ಆ ಮಕ್ಕಳನ್ನು ಕೊಂದಿದ್ದೇನೆ. ಅವರನ್ನಷ್ಟೇ ಅಲ್ಲ ನಾನು ಇತರರನ್ನು ಸಹ ಕೊಲೆ ಮಾಡಿದ್ದೇನೆ ಎಂದು ನ್ಯಾಯಾಲಯದಲ್ಲಿ ಗರಾವಿಟೊ ತಪ್ಪೊಪ್ಪಿಕೊಂಡಿದ್ದನು. ಇತ್ತೀಚಿನ ವರ್ಷಗಳಲ್ಲಿ ಗರಾವಿಟೊ ಅವರ ಶಿಕ್ಷೆಯ ಐದನೇ ಮೂರು ಭಾಗವನ್ನು ಪೂರೈಸಿದ್ದನು. ನಂತರ ಜೈಲಿನಿಂದ ಬಿಡುಗಡೆಯನ್ನು ಸನ್ನಿಹಿತ ಎಂದು ಪರಿಗಣಿಸಲಾಗಿತ್ತು. 2021 ರಲ್ಲಿ ಆಗಿನ ಅಧ್ಯಕ್ಷ ಇವ್ನ್ ಡ್ಯೂಕ್ (2018-2022) ಅವರು ಗರಾವಿಟೊ ಅವರ ಸ್ವಾತಂತ್ರ್ಯವನ್ನು ಮರಳಿ ಪಡೆಯುವ ಸಾಧ್ಯತೆ ತಿರಸ್ಕರಿಸಿದರು. ನಮ್ಮ ಸರ್ಕಾರದ ಅವಧಿಯಲ್ಲಿ ಆತ ಜೈಲಿನಲ್ಲಿಯೇ ಇರಬೇಕಾಗುತ್ತದೆ ಎಂದು ಹೇಳಿದ್ದರು.
ಓದಿ: ನಿಠಾರಿ ಕೇಸ್: ಸರಣಿ ಹಂತಕ ಸುರೇಂದ್ರ ಕೋಲಿಗೆ 13ನೇ ಬಾರಿಗೆ ಮರಣದಂಡನೆ