ಬೀಜಿಂಗ್ (ಚೀನಾ): ಭಾರತ ಮತ್ತು ಚೀನಾ ಗಡಿಯಲ್ಲಿ ನಿಯೋಜನೆಗೊಂಡ ಸೈನಿಕರೊಂದಿಗೆ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ವಿಡಿಯೋ ಸಂವಾದ ನಡೆಸಿದ್ದಾರೆ. ಈ ವೇಳೆ ಯುದ್ಧ ಸನ್ನದ್ಧತೆಯನ್ನು ಚೀನಾ ಅಧ್ಯಕ್ಷರು ಪರಿಶೀಲಿಸಿದರು ಎಂದು ಚೀನಾದ ಅಧಿಕೃತ ಮಾಧ್ಯಮ ವರದಿ ಮಾಡಿದೆ. ಬೀಜಿಂಗ್ನ ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್‌ಎ) ಪ್ರಧಾನ ಕಚೇರಿಯಿಂದ ಕ್ಸಿ ತಮ್ಮ ಯೋಧರನ್ನು ಉದ್ದೇಶಿಸಿ ಮಾತನಾಡಿದ್ದಾರೆ.
ಚೀನಾದ ಆಡಳಿತಾರೂಢ ಕಮ್ಯುನಿಸ್ಟ್ ಪಕ್ಷದ ಪ್ರಧಾನ ಕಾರ್ಯದರ್ಶಿ ಮತ್ತು ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್‌ಎ)ಯ ಕಮಾಂಡರ್-ಇನ್-ಚೀಫ್ ಆಗಿರುವ ಕ್ಸಿ ಜಿನ್‌ಪಿಂಗ್, ಕ್ಸಿನ್‌ಜಿಯಾಂಗ್ ಮಿಲಿಟರಿ ಕಮಾಂಡ್‌ನ ಅಡಿಯಲ್ಲಿ ಖುಂಜೆರಾಬ್ ಪ್ರದೇಶದಲ್ಲಿನ ಗಡಿ ರಕ್ಷಣಾ ಪರಿಸ್ಥಿತಿಯ ಕುರಿತು ಅವಲೋಕಿಸಿದರು. ಇತ್ತೀಚಿನ ವರ್ಷಗಳಲ್ಲಿ ಈ ಪ್ರದೇಶವು ಯಾವ ರೀತಿ ನಿರಂತರವಾಗಿ ಬದಲಾಗುತ್ತಿದೆ. ಸೇನೆಯ ಮೇಲೆ ಇದು ಹೇಗೆ ಪ್ರಭಾವ ಬೀರಿದೆ ಎಂಬುದನ್ನು ತಮ್ಮ ಹೇಳಿಕೆಯಲ್ಲಿ ಪ್ರಸ್ತಾಪಿಸಿದರು ಎಂದು ವರದಿಯಾಗಿದೆ.
ಇದನ್ನೂ ಓದಿ: ತವಾಂಗ್ ಸಂಘರ್ಷ; ಭಾರತ - ಚೀನಾ ದ್ವಿಪಕ್ಷೀಯ ಸಂಬಂಧ ಬಲವರ್ಧನೆಗೆ ಅಡ್ಡಿ
ಅಧಿಕೃತ ಮಾಧ್ಯಮದಲ್ಲಿ ಬಿಡುಗಡೆ ಮಾಡಿರುವ ವಿಡಿಯೋ ಪ್ರಕಾರ, ಈ ಮಾತುಕತೆಯ ಸಮಯದಲ್ಲಿ ಕ್ಸಿ ಜಿನ್‌ಪಿಂಗ್ ತಮ್ಮ ಯುದ್ಧದ ಸಿದ್ಧತೆಯನ್ನು ಪರಿಶೀಲಿಸಿದರು ಎಂದು ವರದಿ ತಿಳಿಸಿದೆ. ಇದೇ ವೇಳೆ ಈಗ ಗಡಿಯಲ್ಲಿ ಡೈನಾಮಿಕ್ ಆಗಿ ಮತ್ತು 24 ಗಂಟೆಗಳ ಮೇಲ್ವಿಚಾರಣೆ ನಡೆಸುತ್ತಿದ್ದೇವೆ ಎಂದು ಸೈನಿಕರೊಬ್ಬರು ಹೇಳಿದರು. ಈ ಸಂದರ್ಭದಲ್ಲಿ ಚೀನಾ ಅಧ್ಯಕ್ಷರು ಸೈನಿಕರ ಸ್ಥಿತಿಯ ಬಗ್ಗೆ ಕೇಳುತ್ತಾ, ಈ ಭೂಪ್ರದೇಶದಲ್ಲಿ ತಾಜಾ ತರಕಾರಿಗಳನ್ನು ಸ್ವೀಕರಿಸಲು ಸಾಧ್ಯವಾಗುತ್ತಿದೆಯೇ ಎಂದು ಕೇಳಿದರು ಎಂದು ವರದಿಗಳು ಉಲ್ಲೇಖಿಸಿವೆ.
ಜೊತೆಗೆ ಕ್ಸಿ ಜಿನ್‌ಪಿಂಗ್ ತಮ್ಮ ಗಡಿ ಪಡೆಗಳ ಗಸ್ತು ಮತ್ತು ನಿರ್ವಹಣಾ ಕಾರ್ಯದ ಬಗ್ಗೆಯೂ ವಿಚಾರಿಸಿದರು. ಇಷ್ಟೇ ಅಲ್ಲ, ಸೈನಿಕರನ್ನು ಗಡಿ ರಕ್ಷಣೆಯ ಮಾದರಿಗಳ ಬಗ್ಗೆ ಶ್ಲಾಘಿಸಿದರು. ಸೈನಿಕರ ತಮ್ಮ ಪ್ರಯತ್ನಗಳು ಮುಂದುವರೆಸಲು ಮತ್ತು ಹೊಸ ಲಾಭಗಳನ್ನು ನೀಡಲು ಯೋಧರಿಗೆ ಪ್ರೋತ್ಸಾಹಿಸಿದರು ಎಂದೂ ಅಧಿಕೃತ ಮಾಧ್ಯಮವು ವರದಿ ಮಾಡಿದೆ. 2020ರ ಮೇ 5ರಂದು ಪೂರ್ವ ಲಡಾಖ್ ಪ್ರದೇಶವು ಪ್ಯಾಂಗಾಂಗ್ ಸರೋವರ ಪ್ರದೇಶದಲ್ಲಿ ನಡೆದ ಘರ್ಷಣೆಯ ನಂತರ ಭಾರತ ಮತ್ತು ಚೀನಾ ನಡುವೆ ಬಿಕ್ಕಟ್ಟು ಸೃಷ್ಟಿಯಾಗಿದೆ.
ಇದನ್ನೂ ಓದಿ: ಚೀನಾ ಮತ್ತೆ ಗಡಿ ತಂಟೆ: ಸೇನಾಧಿಕಾರಿಗಳ ಉನ್ನತ ಮಟ್ಟದ ಸಭೆ, ಸಂಸತ್ತಿನಲ್ಲಿ ಚರ್ಚೆಗೆ ಕಾಂಗ್ರೆಸ್ ಆಗ್ರಹ
ಪೂರ್ವ ಲಡಾಖ್ ಗಡಿ ಬಿಕ್ಕಟ್ಟಿನ ಕುರಿತು ಉಭಯ ರಾಷ್ಟ್ರಗಳು 17 ಸುತ್ತಿನ ಉನ್ನತ ಮಟ್ಟದ ಮಿಲಿಟರಿ ಮಾತುಕತೆಗಳನ್ನು ನಡೆಸಿವೆ. ಆದರೆ ಉಳಿದ ಸಮಸ್ಯೆಗಳ ಪರಿಹಾರದಲ್ಲಿ ಯಾವುದೇ ಮಹತ್ವದ ಮಾತುಕತೆ ಮುಂದುವರಿಸಲು ಸಾಧ್ಯವಾಗಿಲ್ಲ. ಚೀನಾದೊಂದಿಗಿನ ದ್ವಿಪಕ್ಷೀಯ ಸಂಬಂಧದ ಒಟ್ಟಾರೆ ಅಭಿವೃದ್ಧಿಗೆ ವಾಸ್ತವಿಕ ನಿಯಂತ್ರಣ ರೇಖೆಯಲ್ಲಿ (ಎಲ್‌ಎಸಿ) ಶಾಂತಿ ಮತ್ತು ನೆಮ್ಮದಿ ಅತ್ಯಗತ್ಯವಾಗಿದೆ ಎಂದು ಭಾರತ ಪ್ರತಿಪಾದಿಸುತ್ತಾ ಬಂದಿದೆ.
ಇದನ್ನೂ ಓದಿ: ಗಡಿ ತಂಟೆ: ಚೀನಾ ದೇಶಕ್ಕೆ ನಮ್ಮ ಪ್ರತಿಕ್ರಿಯೆ ಪ್ರಬಲ, ದೃಢವಾಗಿದೆ: ಜೈಶಂಕರ್