ಬೀಜಿಂಗ್ (ಚೀನಾ) : ಚೀನಾದಲ್ಲಿರುವ ಹೆಚ್ಚಿನ ನಿರುದ್ಯೋಗ ಮತ್ತು ವಯಸ್ಸಾದ ಉದ್ಯೋಗಿಗಳನ್ನು ಹೊಂದಿರುವ ಸಮಸ್ಯೆಯಿಂದ ಚೀನಾ ದೇಶ ಜಾಗತಿಕ ಆರ್ಥಿಕತೆಯ ಹೃದಯಭಾಗದಲ್ಲಿರುವ "ಟಿಕ್ ಟಿಕ್ ಟೈಮ್ ಬಾಂಬ್" ಆಗಿದೆ. ಜೊತೆಗೆ ಈ ಟೈಮ್ ಬಾಂಬ್ ಇತರ ದೇಶಗಳಿಗೆ ಸಂಭಾವ್ಯ ಅಪಾಯವನ್ನು ಉಂಟು ಮಾಡುತ್ತದೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಎಚ್ಚರಿಸಿದ್ದಾರೆ.
ಬೀಜಿಂಗ್ ಅನ್ನು ಅಮೆರಿಕ ಆಡಳಿತ ವಾಷಿಂಗ್ಟನ್ನ ಉನ್ನತ ಪ್ರತಿಸ್ಪರ್ಧಿ ಎಂದು ಕರೆಯುವುದರ ಮೂಲಕ ಸಂಬಂಧವನ್ನು ಬಲಪಡಿಸಲು ಪ್ರಯತ್ನಿಸುತ್ತಿದ್ದರೂ ಅಧ್ಯಕ್ಷ ಜೋ ಬೈಡನ್ ಚೀನಾದ ಆರ್ಥಿಕತೆ ವಿರುದ್ಧ ಕಮೆಂಟ್ ಮಾಡಿದ್ದಾರೆ.
ಗುರುವಾರ ಉತಾಹ್ನ ಪಾರ್ಕ್ ಸಿಟಿಯಲ್ಲಿ ನಿಧಿ ಸಂಗ್ರಹಣೆ ಕಾರ್ಯಕ್ರಮವೊಂದರಲ್ಲಿ ಚೀನಾದ ಆರ್ಥಿಕ ಪರಿಸ್ಥಿತಿಯನ್ನು ಟೀಕಿಸಿರುವ ಅಧ್ಯಕ್ಷ ಜೋ ಬೈಡನ್ ಮುಂದುವರಿಸಿ, "ಯುನೈಟೆಡ್ ಸ್ಟೇಟ್ಸ್ ನಂತರ ವಿಶ್ವದ ಎರಡನೇ ಅತಿದೊಡ್ಡ ಆರ್ಥಿಕತೆಯಾಗಿರುವ ಚೀನಾ ದೇಶ, ಹೆಚ್ಚುತ್ತಿರುವ ನಿರುದ್ಯೋಗ ಸಮಸ್ಯೆಯಿಂದ, ಬೆಳವಣಿಗೆ ನಿಧಾನಗತಿಗೆ ಸಾಗಿದ್ದು, ಇದೀಗ ತೊಂದರೆಯಲ್ಲಿದೆ. ಅದು ಒಳ್ಳೆಯದಲ್ಲ, ಯಾಕೆಂದರೆ ಕೆಟ್ಟ ಜನರಿಗೆ ಸಮಸ್ಯೆಗಳು ಬಂದಾಗ ಅವರು ಕೆಟ್ಟ ದಾರಿಯಲ್ಲೇ ಆ ಸಮಸ್ಯೆಗಳನ್ನು ಬಗೆಹರಿಸಲು ನೋಡುತ್ತಾರೆ." ಎಂದು ಹೇಳಿದರು.
ಬೈಡನ್ ಅವರ ಗುರುವಾರದ ಹೇಳಿಕೆಗಳು ಜೂನ್ನಲ್ಲಿ ನಡೆದಿದ್ದ ಮತ್ತೊಂದು ನಿಧಿ ಸಂಗ್ರಹಣೆಯಲ್ಲಿ ಅವರು ಆಡಿದ್ದ ಮಾತುಗಳನ್ನು ಪ್ರತಿಧ್ವನಿಸಿವೆ. ಆ ವೇಳೆ ಜೋ ಬೈಡನ್, ಚೀನಾದ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಅವರನ್ನು 'ಸರ್ವಾಧಿಕಾರಿ' ಎಂದು ಕರೆದಿದ್ದರು. ವಾಷಿಂಗ್ಟನ್ ವಿದೇಶಾಂಗ ಕಾರ್ಯದರ್ಶಿ ಅಂಟೋನಿ ಬ್ಲಿಂಕೆನ್ ಬೀಜಿಂಗ್ಗೆ ಉನ್ನತ ಮಟ್ಟದ ಬೇಟಿ ನೀಡಿದ್ದ ಒಂದು ದಿನದ ನಂತರ ಈ ಹೇಳಿಕೆ ನೀಡಿದ್ದರು. ಅಮೆರಿಕದ ಸರ್ವಾಧಿಕಾರಿ ಹೇಳಿಕೆಗೆ ಚೀನಾ ತಿರುಗೇಟು ನೀಡಿದ್ದು, ಇದನ್ನು 'ಅತ್ಯಂತ ಅಸಂಬದ್ಧ ಹಾಗೂ ಬೇಜಬ್ದಾರಿ' ಎಂದು ಕರೆದಿತ್ತು.
ಅದರ ನಂತರದಲ್ಲಿ ಯುಎಸ್ ಆರ್ಥಿಕ ಇಲಾಖೆ ಕಾರ್ಯದರ್ಶಿ ಜಾನೆಟ್ ಯೆಲೆನ್ ಹಾಗೂ ಹವಾಮಾನ ಪ್ರತಿನಿಧಿ ಜಾನ್ ಕೆರ್ರಿ ಅವರುನ್ನು ಬೀಜಿಂಗ್ ತನ್ನ ದೇಶಕ್ಕೆ ಸ್ವಾಗತಿಸಿಕೊಂಡಿತ್ತು. ವಾಣಿಜ್ಯ ಕಾರ್ಯದರ್ಶಿ ಜಿನಾ ರೈಮಂಡೊ ಕೂಡ ಚೀನಾ ಪ್ರವಾಸಕ್ಕೆ ಯೋಜಿಸುತ್ತಿದ್ದಾರೆ. ಈ ಸರಣಿ ಭೇಟಿ, ನವೆಂಬರ್ನಲ್ಲಿ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ನಡೆಯಲಿರುವ ಏಷ್ಯಾ - ಫೆಸಿಫಿಕ್ ಆರ್ಥಿಕತೆಯ ಶೃಂಗಸಭೆಯಲ್ಲಿ ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಭಾಗವಹಿಸುವ ನಿರೀಕ್ಷೆಯಿದ್ದು, ಬೈಡನ್ ಹಾಗೂ ಕ್ಷಿ ನಡುವಿನ ಮಾತುಕತೆ ಸಭೆಗೆ ಅಡಿಪಾಯ ಹಾಕಬಹುದು. ಕಳೆದ ನವಂಬರ್ನಲ್ಲಿ ಇಂಡೋನೇಷ್ಯಾದಲ್ಲಿ ನಡೆದ ಗ್ರೂಪ ಆಫ್ 20 ಶೃಂಗಸಭೆಯಲ್ಲಿ ವೈಯಕ್ತಿಕವಾಗಿ ಭೇಟಿಯಾದ ಬಳಿಕ ಇಬ್ಬರೂ ನಾಯಕರು ಇದುವರೆಗೆ ಮಾತನಾಡಿಲ್ಲ.
ಚೀನಾ ಆರ್ಥಿಕತೆ: ಒಂದು ಕಾಲಕ್ಕೆ ಅಕ್ಷಯಪಾತ್ರೆಯಾಗಿದ್ದ ಚೀನಾ, ಈಗ ಚೀನಾ ದೇಶದ ಸುತ್ತಮುತ್ತಲಿನ ದೇಶಗಳಿಗೆ ಮಾತ್ರವಲ್ಲದೇ ಚೀನೀ ಕುಟುಂಬಗಳಿಗೆ ಅಪಾಯದ ಎಚ್ಚರಿಕೆಯ ಗಂಟೆಯಾಗಿದೆ. ಜಾಗತೀಕರಣದ ಲಾಭ ವರ್ಧಿಸುವ ಆವೃತ್ತಿಯಿಂದ ಅನಿಶ್ಚಿತತೆಯ ಸಮಯದಲ್ಲಿ ವಿಶ್ವದ ಆರ್ಥಿಕತೆಗೆ ಚೀನಾ ವೈಲ್ಡ್ ಕಾರ್ಡ್ ಎಂಟ್ರಿಯಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಇತ್ತೀಚಿನ ಕೆಲವು ವಾರಗಳ ಹಲವು ಬೆಳವಣಿಗೆಗಳಿಂದಾಗಿ ಅಪಾಯ ಹೆಚ್ಚಾಗಿದ್ದು, ಚೀನಾದ ಆರ್ಥಿಕತೆ ಇತ್ತೀಚೆಗೆ ಗಣನೀಯವಾಗಿ ಇಳಿಕೆಯಾಗಿದೆ ಎಂಬ ಮಾತುಗಳು ಮೊದಲು ಕೇಳಿ ಬಂದಿತ್ತು. ಕೋವಿಡ್ ನಿರ್ಬಂಧಗಳನ್ನು ತೆರವುಗೊಳಿಸಿದ ಬಳಿಕವೂ ಭರವಸೆಯ ಬೆಳವಣಿಗೆ ಕಂಡು ಬಂದಿರಲಿಲ್ಲ. ಈ ವಾರದ ಡಾಟಾ ಗಮನಿಸಿದರೆ, ಚೀನಾದ ರಪ್ತು ಪ್ರಮಾಣ ಕೂಡ ಮೂರು ತಿಂಗಳುಗಳಿಂದ ಸತತವಾಗಿ ಕುಸಿಯುತ್ತಾ ಬಂದಿದೆ. ಜೊತೆಗೆ ಕಳೆದ ಐದು ತಿಂಗಳುಗಳಿಂದಲೇ ಆಮದಿನಲ್ಲೂ ಇಳಿಕೆ ಕಂಡಿದೆ ಎಂದು ಹೇಳುತ್ತದೆ ಎಂದು ವರದಿಯಾಗಿದೆ. ಆಹಾರದಿಂದ ಅಪಾರ್ಟ್ಮೆಂಟ್ಗಳ ವರೆಗೂ ಸರಕಗಳೆಲ್ಲದರ ಬೆಲೆ ಕುಸಿದಿದೆ ಎಂಬ ಸುದ್ದಿಯಾಗಿ, ಚೀನಾ ಹಣದುಬ್ಬರವಿಳಿತದ ಅಂಚಿನಲ್ಲಿರಬಹುದು ಎಂಬ ಆತಂಕ ಹೆಚ್ಚಿಸಿತ್ತು.
ಇದನ್ನೂ ಓದಿ : ಚೀನಾ ಆರ್ಥಿಕತೆ ಅಸ್ಥಿರ?: ಪ್ರಮುಖ ಮಾರುಕಟ್ಟೆ ವಿಶ್ಲೇಷಕನ ವೀಚಾಟ್ ಖಾತೆ ಸ್ಥಗಿತ