ನ್ಯೂಯಾರ್ಕ್ ( ಅಮೆರಿಕ) : ತೈವಾನ್‌ನ ಉಪಾಧ್ಯಕ್ಷ ಮತ್ತು ಅಧ್ಯಕ್ಷೀಯ ಅಭ್ಯರ್ಥಿ ವಿಲಿಯಂ ಲೈ ಅವರು ಅಮೆರಿಕಕ್ಕೆ ಭೇಟಿ ನೀಡಿರುವುದು ಚೀನಾವನ್ನು ಕೆರಳಿಸಿದೆ. ಈ ಕುರಿತು ಟ್ವೀಟ್ ಮಾಡಿರುವ ಚೀನಾ ವಿದೇಶಾಂಗ ಸಚಿವಾಲಯವು ವಿಲಿಯಂ ಲೈ ಅವರನ್ನು "ತೊಂದರೆ ತರುವವನು" ಎಂದು ಉಲ್ಲೇಖಿಸಿ, ಪ್ರವಾಸಕ್ಕೆ ಖಂಡನೆ ವ್ಯಕ್ತಪಡಿಸಿದೆ.
ದಕ್ಷಿಣ ಅಮೆರಿಕದಲ್ಲಿ ತೈವಾನ್‌ನ ಏಕೈಕ ಮಿತ್ರ ಪರಾಗ್ವೆ ಆಗಿದ್ದು, ಆಗಸ್ಟ್ 15 ರಂದು ಪರಗ್ವೆಯ ಅಧ್ಯಕ್ಷರಾಗಿ ಸ್ಯಾಂಟಿಯಾಗೊ ಪೆನಾ ಅವರು ಅಧಿಕಾರ ಸ್ವೀಕಾರ ಮಾಡಲಿದ್ದಾರೆ. ಈ ಸಮಾರಂಭ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ವಿಲಿಯಂ ಲೈ ಪರಗ್ವೆಗೆ ತೆರಳುತ್ತಿದ್ದರು. ಆದರೆ ಮಾರ್ಗ ಮಧ್ಯೆ ಶನಿವಾರ ನ್ಯೂಯಾರ್ಕ್‌ಗೆ ಸಹ ಭೇಟಿ ನೀಡಿದ್ದರು. ಇದನ್ನು ಖಂಡಿಸಿದ ಚೀನಾ,ತೈವಾನ್ ಉಪರಾಷ್ಟ್ರಪತಿಯವರ ಭೇಟಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವುದಾಗಿ ಹೇಳಿದೆ.
ಇನ್ನು ಅಮೆರಿಕ ಭೇಟಿ ಕುರಿತು ಟ್ವೀಟ್ ಮಾಡಿರುವ ವಿಲಿಯಂ ಲೈ, ನ್ಯೂಯಾರ್ಕ್ ಆಗಮಿಸಿರುವುದು ಸಂತಸ ತಂದಿದೆ. ಅಮೆರಿಕವು ಸ್ವಾತಂತ್ರ್ಯ, ಪ್ರಜಾಪ್ರಭುತ್ವ ಮತ್ತು ಅವಕಾಶಗಳನ್ನು ನೀಡುವ ಐಕಾನ್ ಎಂದು ಅವರು ಬಣ್ಣಿಸಿದ್ದಾರೆ.
ಇದನ್ನೂ ಓದಿ : ಪೆಲೋಸಿ ತೈವಾನ್ ಪ್ರವಾಸ ಮತ್ತು ಚೀನಾ ರಣ ನೀತಿ... ಏನಿದು ವಿವಾದ?
ಇನ್ನೊಂದೆಡೆ, ಚೀನಾದ ವಿದೇಶಾಂಗ ಸಚಿವಾಲಯವು ಯುಎಸ್ ಮತ್ತು ತೈವಾನ್ ನಡುವಿನ ಯಾವುದೇ ಅಧಿಕೃತ ಮಾತುಕತೆಯನ್ನು ದೃಢವಾಗಿ ವಿರೋಧಿಸುತ್ತದೆ ಎಂದು ಹೇಳಿದೆ. ಜೊತೆಗೆ, ತೈವಾನ್ ಉಪಾಧ್ಯಕ್ಷರ ಭೇಟಿಯಿಂದ ಉಂಟಾಗುವ ಬೆಳವಣಿಗೆಗಳನ್ನು ಚೀನಾ ಗಮನಿಸುತ್ತದೆ. ಅಷ್ಟೇ ಅಲದೇ, ರಾಷ್ಟ್ರೀಯ ಸಾರ್ವಭೌಮತೆ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ಕಾಪಾಡಲು ದೃಢವಾದ ಕ್ರಮಗಳನ್ನ ತೆಗೆದುಕೊಳ್ಳುತ್ತದೆ. ತೈವಾನ್‌ನ ಅಧ್ಯಕ್ಷ ತ್ಸೈ ಇಂಗ್ - ವೆನ್‌ಗಿಂತಲೂ ವಿಲಿಯಂ ಲೈ ಸ್ವಾತಂತ್ರ್ಯದ ಬಗ್ಗೆ ಹೆಚ್ಚು ಬಹಿರಂಗವಾಗಿ ಮಾತನಾಡಿದ್ದಾರೆ ಎಂದು ತಿಳಿಸಿದೆ.
ಇದನ್ನೂ ಓದಿ : ತೈವಾನ್ ಸಂಶೋಧನಾ ಕೇಂದ್ರಕ್ಕೆ 1.5 ಮಿಲಿಯನ್ ರೂ. ದೇಣಿಗೆ ನೀಡಿದ ಭಾರತ
ವರದಿಯ ಪ್ರಕಾರ, ಚೀನಾದ ಆಡಳಿತಾರೂಢ ಕಮ್ಯುನಿಸ್ಟ್ ಪಕ್ಷವು ತೈವಾನ್ ಅನ್ನು ತನ್ನ ಭೂಪ್ರದೇಶದ ಭಾಗ ಎಂದು ಹೇಳಿಕೊಂಡಿದೆ. ಹಾಗೆಯೇ, ಸ್ವಯಂ-ಆಡಳಿತದ ದ್ವೀಪವನ್ನು ವಶಪಡಿಸಿಕೊಳ್ಳುವ ಪ್ರಯತ್ನ ಮುಂದುವರೆಸಿದೆ.
ಇದನ್ನೂ ಓದಿ : 'ಬೆಂಕಿಯೊಂದಿಗೆ ಆಡುವವರು ಸುಟ್ಟು ಹೋಗ್ತಾರೆ' : ತೈವಾನ್ ವಿಚಾರವಾಗಿ ಅಮೆರಿಕಕ್ಕೆ ಚೀನಾ ಎಚ್ಚರಿಕೆ
ಅಮೆರಿಕವು ತೈವಾನ್‌ನೊಂದಿಗೆ ಯಾವುದೇ ರಾಜತಾಂತ್ರಿಕ ಸಂಬಂಧಗಳನ್ನು ಹೊಂದಿಲ್ಲ. ತೈವಾನ್ ಸರ್ಕಾರದೊಂದಿಗೆ ಔಪಚಾರಿಕ ಮಾತುಕತೆಯಾಗಲಿ ಅಥವಾ ಒಪ್ಪಂದಗಳಾಗಲಿ ನಡೆದಿಲ್ಲ. ಆದ್ದರಿಂದ ಇದೊಂದು ಅನಧಿಕೃತ ಪ್ರವಾಸದ ಭಾಗವಾಗಿದೆ ಎಂದು ತೈವಾನ್ ಅಧಿಕಾರಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ : ತೈವಾನ್‌ಗೆ ಅಮೆರಿಕ ನಿಯೋಗ ಭೇಟಿ ; ಉರಿದು ಬಿದ್ದ ಚೀನಾ !
ಇನ್ನು ಕಳೆದ ವರ್ಷ ಸಹ ಚೀನಾದ ವಿರೋಧದ ನಡುವೆಯೂ ಅಮೆರಿಕ ಸಂಸತ್ನ ಸ್ಪೀಕರ್ ನ್ಯಾನ್ಸಿ ಪೆಲೋಸಿ ತೈವಾನ್‌ಗೆ ಭೇಟಿ ನೀಡಿದ್ದರು. ಅತ್ತ ತೈವಾನ್‌ಗೆ ಪೆಲೋಸಿ ಭೇಟಿ ನೀಡುತ್ತಿದ್ದಂತೆ ಇತ್ತ ಚೀನಾ ಮಿಲಿಟರಿ ಸನ್ನದ್ಧತೆ ಘೋಷಿಸಿತ್ತು.