ಬೀಜಿಂಗ್: ಇದೇ ವಾರ ತೈವಾನ್‌ಗೆ ಭೇಟಿ ನೀಡಿದ್ದ ಅಮೆರಿಕ ಜನಪ್ರತಿನಿಧಿ ಸಭೆಯ ಸ್ಪೀಕರ್ ನ್ಯಾನ್ಸಿ ಪೆಲೋಸಿ ವಿರುದ್ಧ ಚೀನಾದ ವಿದೇಶಾಂಗ ಸಚಿವಾಲಯವು ಶುಕ್ರವಾರ ಹಲವಾರು ನಿರ್ಬಂಧಗಳನ್ನು ಘೋಷಿಸಿದೆ. ಪೆಲೋಸಿ ಅವರ ತೈವಾನ್ ಭೇಟಿಯಿಂದ ಚೀನಾ ಕೆರಳಿ ಕೆಂಡವಾಗಿದ್ದು, ತೈವಾನ್ ಸುತ್ತಮತ್ತ ಮಿಲಿಟರಿ ಡ್ರಿಲ್ ಕೂಡ ನಡೆಸಿದೆ.
"ಪೆಲೋಸಿ ಅವರು ಚೀನಾದ ಆಂತರಿಕ ವ್ಯವಹಾರಗಳಲ್ಲಿ ಮಧ್ಯಪ್ರವೇಶಿಸುತ್ತಿದ್ದಾರೆ ಮತ್ತು ಚೀನಾದ ಸಾರ್ವಭೌಮತ್ವ, ಪ್ರಾದೇಶಿಕ ಸಮಗ್ರತೆಯನ್ನು ಹಾಳು ಮಾಡುತ್ತಿದ್ದಾರೆ. ಬೀಜಿಂಗ್, ಪೆಲೋಸಿ ಮತ್ತು ಅವರ ಹತ್ತಿರದ ಕುಟುಂಬದ ಮೇಲೆ ನಿರ್ಬಂಧಗಳನ್ನು ವಿಧಿಸುತ್ತದೆ" ಎಂದು ಚೀನಾ ವಿದೇಶಾಂಗ ಸಚಿವಾಲಯ ಹೇಳಿದೆ. ತನ್ನ ಪ್ರಮುಖ ಹಿತಾಸಕ್ತಿಗಳಿಗೆ ವಿರುದ್ಧವಾಗಿ ವರ್ತಿಸಿದ ಮತ್ತು ಹಾಂಗ್ ಕಾಂಗ್, ಕ್ಸಿನ್‌ಜಿಯಾಂಗ್‌ನ ವಾಯುವ್ಯ ಪ್ರದೇಶದಲ್ಲಿನ ಮಾನವ ಹಕ್ಕುಗಳ ವಿಷಯಗಳ ಬಗ್ಗೆ ಮಾತನಾಡಿದ್ದಕ್ಕಾಗಿ ಚೀನಾ ಇತ್ತೀಚಿನ ವರ್ಷಗಳಲ್ಲಿ ಹಲವಾರು ಅಮೆರಿಕದ ಅಧಿಕಾರಿಗಳ ಮೇಲೆ ನಿರ್ಬಂಧಗಳನ್ನು ಹೇರಿದೆ.
"ಚೀನಾ ಒಳಗೊಂಡಿರುವ ಮಾನವ ಹಕ್ಕುಗಳ ವಿಷಯಗಳ ಬಗ್ಗೆ ಸುಳ್ಳುಗಳನ್ನು ಹರಡಿದ" ಅಮೆರಿಕದ ಅಧಿಕಾರಿಗಳ ಬಹಿರಂಗಪಡಿಸದ ಪಟ್ಟಿಯ ಮೇಲೆ ಚೀನಾ ವೀಸಾ ನಿರ್ಬಂಧಗಳನ್ನು ವಿಧಿಸುತ್ತಿದೆ ಎಂದು ಈ ವರ್ಷದ ಮಾರ್ಚ್‌ನಲ್ಲಿ ಬೀಜಿಂಗ್ ತಿಳಿಸಿತ್ತು. ಅಮೆರಿಕದ ಮಾಜಿ ವಿದೇಶಾಂಗ ಕಾರ್ಯದರ್ಶಿ ಮೈಕ್ ಪೊಂಪಿಯೊ ಮತ್ತು ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವಾಣಿಜ್ಯ ಸಲಹೆಗಾರ ಪೀಟರ್ ನವರೊ ಅವರನ್ನು ಈ ಹಿಂದೆಯೇ ಚೀನಾ ನಿರ್ಬಂಧಿಸಿದೆ. ಇವರ್ಯಾರೂ ಚೀನಾ ಪ್ರವೇಶಿಸದಂತೆ ಮತ್ತು ಚೀನಾದ ಕಂಪನಿಗಳೊಂದಿಗೆ ಯಾವುದೇ ವ್ಯಾಪಾರ ವಹಿವಾಟು ಮಾಡದಂತೆ ನಿಷೇಧಿಸಲಾಗಿದೆ.
ಬೀಜಿಂಗ್‌ನ ಆಡಳಿತಾರೂಢ ಕಮ್ಯುನಿಸ್ಟ್ ಪಕ್ಷವು, ಸ್ವಆಡಳಿತವಿರುವ ಪ್ರಜಾಸತ್ತಾತ್ಮಕ ದೇಶವಾದ ತೈವಾನ್ ಅನ್ನು ತನ್ನ ದೇಶದ ಭಾಗವೆಂದು ಪರಿಗಣಿಸಿದೆ ಮತ್ತು ಅಗತ್ಯ ಬಿದ್ದರೆ ಮುಂದೊಂದು ದಿನ ಬಲವಂತವಾಗಿ ಅದನ್ನು ವಿಲೀನ ಮಾಡಿಕೊಳ್ಳುವುದಾಗಿ ಹೇಳಿದೆ.