ಸ್ಯಾನ್ ಫ್ರಾನ್ಸಿಸ್ಕೋ(ಅಮೆರಿಕ): ಚೀನಾ ಯಾವುದೇ ರೀತಿಯ "ಘರ್ಷಣೆ ಅಥವಾ ಯುದ್ಧವನ್ನು ಪ್ರಚೋದಿಸಿಲ್ಲ ಮತ್ತು ಒಂದು ಇಂಚು ವಿದೇಶಿ ಭೂಮಿಯನ್ನು ಆಕ್ರಮಿಸಿಕೊಂಡಿಲ್ಲ" ಎಂದು ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರು ಗುರುವಾರ ತಿಳಿಸಿದರು. ಏಷ್ಯಾ-ಪೆಸಿಫಿಕ್ ಆರ್ಥಿಕ ಸಹಕಾರ (APEC) ಶೃಂಗಸಭೆಯ ಅಂಗವಾಗಿ ನಡೆದ ಭೋಜನಕೂಟದಲ್ಲಿ ಕ್ಸಿ ಈ ಹೇಳಿಕೆ ನೀಡಿದ್ದಾರೆ. ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರೊಂದಿಗಿನ ಬಹುನಿರೀಕ್ಷಿತ ಮಾತುಕತೆಗಳ ಬಳಿಕ ಉಭಯ ನಾಯಕರು ದ್ವಿಪಕ್ಷೀಯ ಉದ್ವಿಗ್ನತೆಯನ್ನು ಕಡಿಮೆ ಮಾಡುವ ಪ್ರತಿಜ್ಞೆ ಕೈಗೊಂಡರು.
ಯುಎಸ್-ಚೀನಾ ಬ್ಯುಸಿನೆಸ್ ಕೌನ್ಸಿಲ್ ಮತ್ತು ಯುಎಸ್-ಚೀನಾ ಸಂಬಂಧಗಳ ರಾಷ್ಟ್ರೀಯ ಸಮಿತಿ ಆಯೋಜಿಸಿದ ಸಮಾರಂಭದಲ್ಲಿ ಕ್ಸಿ ಅವರ ಹೇಳಿಕೆಗಳನ್ನು ಸೂಕ್ಷ್ಮವಾಗಿ ಗಮನಿಸಲಾಯಿತು. "ಪೀಪಲ್ಸ್ ರಿಪಬ್ಲಿಕ್ ಸ್ಥಾಪನೆಯಾಗಿ 70 ವರ್ಷಗಳಾಗಿದೆ. ಅದಕ್ಕಿಂತಲೂ ಮುನ್ನಾ ಚೀನಾ ದೇಶವು ಸಂಘರ್ಷ ಅಥವಾ ಯುದ್ಧವನ್ನು ಪ್ರಚೋದಿಸಿಲ್ಲ. ಒಂದು ಇಂಚು ವಿದೇಶಿ ಭೂಮಿಯನ್ನು ಆಕ್ರಮಿಸಿಕೊಂಡಿಲ್ಲ" ಎಂದು ಕ್ಸಿ ಹೇಳಿದರು.
ಸಭೆಯಲ್ಲಿ ಕ್ಸಿನ್‌ಜಿಯಾಂಗ್, ಟಿಬೆಟ್ ಮತ್ತು ಹಾಂಗ್‌ಕಾಂಗ್ ಸೇರಿದಂತೆ ಚೀನಾದ ಮಾನವ ಹಕ್ಕುಗಳ ಉಲ್ಲಂಘನೆಯ ಬಗ್ಗೆ ಜೋ ಬೈಡನ್ ಕಳವಳ ವ್ಯಕ್ತಪಡಿಸಿದರು. ಮಾನವ ಹಕ್ಕುಗಳ ಸಾರ್ವತ್ರಿಕತೆಯನ್ನು ಅವರು ಈದೇ ಸಂದರ್ಭದಲ್ಲಿ ಒತ್ತಿ ಹೇಳಿದರು. ಅಂತರರಾಷ್ಟ್ರೀಯ ಮಾನವ ಹಕ್ಕುಗಳ ಬದ್ಧತೆಗಳನ್ನು ಗೌರವಿಸುವುದು ಎಲ್ಲಾ ರಾಷ್ಟ್ರಗಳ ಜವಾಬ್ದಾರಿ ಎಂದು ತಿಳಿಸಿದರು.
ಇದನ್ನೂ ಓದಿ: ಇಸ್ರೇಲ್ 'ಭಯೋತ್ಪಾದಕ ರಾಷ್ಟ್ರ'ವೆಂದ ಟರ್ಕಿ ಅಧ್ಯಕ್ಷ : ತಿರುಗೇಟು ಕೊಟ್ಟ ಇಸ್ರೇಲ್ ಪ್ರಧಾನಿ
ಗಮನಾರ್ಹವಾಗಿ, 2020ರಲ್ಲಿ ಭಾರತ ಮತ್ತು ಚೀನಾದ ಸೈನಿಕರು ಗಾಲ್ವಾನ್‌ನಲ್ಲಿ ಘರ್ಷಣೆ ನಡೆಸಿದ್ದರು. ಅದೇ ವರ್ಷ ಮಹಾಮಾರಿ ಕೋವಿಡ್ 19 ಸಾಂಕ್ರಾಮಿಕ ರೋಗ ಪ್ರಾರಂಭವಾಗಿತ್ತು. ಮೇ 2020 ರಿಂದ ಚೀನಿ ಪಡೆಗಳು ಪೂರ್ವ ಲಡಾಖ್‌ನ ಗಡಿ ರೇಖೆ ಬಳಿ ಆಕ್ರಮಣ ಮಾಡಲು ಪ್ರಯತ್ನಿಸಿದಾಗ ಎರಡೂ ಕಡೆಯವರು ಪೆಟ್ರೋಲಿಂಗ್ ಪಾಯಿಂಟ್ 15 ರ ಬಳಿ ಸೇನೆ ನಿಯೋಜಿಸಿದ್ದರು. ಇದರಿಂದಾಗಿ ಗಾಲ್ವಾನ್ ಪ್ರದೇಶವು ಸಂಘರ್ಷದ ಕೇಂದ್ರಬಿಂದುವಾಗಿ ಹೊರಹೊಮ್ಮಿತು. 2020ರಿಂದ 50,000 ಭಾರತೀಯ ಸೈನಿಕರು ಸುಧಾರಿತ ಶಸ್ತ್ರಾಸ್ತ್ರಗಳೊಂದಿಗೆ ಎಲ್‌ಎಸಿ (ಲೈನ್ ಆಫ್ ಆ್ಯಕ್ಚುವಲ್ ಕಂಟ್ರೋಲ್) ಉದ್ದಕ್ಕೂ ಫಾರ್ವರ್ಡ್ ಪೋಸ್ಟ್‌ಗಳಲ್ಲಿ ನೆಲೆಸಿದ್ದಾರೆ.
ಇದನ್ನೂ ಓದಿ: ಅಪೆಕ್ (APEC) ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಅಮೆರಿಕಕ್ಕೆ ಆಗಮಿಸಿದ ಜಿನ್‌ಪಿಂಗ್