ನೆದರ್ಲ್ಯಾಂಡ್ಸ್ : ಇಲ್ಲಿನ ಕರಾವಳಿಯಲ್ಲಿ ಸುಮಾರು 3,000 ಕಾರುಗಳನ್ನು ಸಾಗಿಸುತ್ತಿದ್ದ ಸರಕು ಸಾಗಣೆ ಹಡಗಿನಲ್ಲಿ ಭಾರಿ ಬೆಂಕಿ ಅವಘಡ ಸಂಭವಿಸಿದೆ. ಘಟನೆಯಲ್ಲಿ ಓರ್ವ ಭಾರತೀಯ ಪ್ರಜೆ ಸಾವನ್ನಪ್ಪಿದ್ದು, 20ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಬೆಂಕಿ ನಂದಿಸುವ ಕಾರ್ಯ ನಡೆಯುತ್ತಿದೆ ಎಂದು ಡಚ್ ಕೋಸ್ಟ್ ಗಾರ್ಡ್ ಅಧಿಕಾರಿಗಳು ಹೇಳಿದ್ದಾರೆ.
ಜರ್ಮನಿಯಿಂದ ಸಿಂಗಾಪುರಕ್ಕೆ ಹೊರಟಿದ್ದ ಫ್ರೀಮ್ಯಾಂಟಲ್ ಹೈವೇ ಎಂಬ ಹೆಸರಿನ ಹಡಗು ಮಂಗಳವಾರ ಮಧ್ಯರಾತ್ರಿ ಅಮೆಲ್ಯಾಂಡ್‌ನ ಡಚ್ ದ್ವೀಪದ ಬಳಿ ಬೆಂಕಿ ಅನಾಹುತಕ್ಕೆ ತುತ್ತಾಗಿತ್ತು. ಈ ಸಂದರ್ಭದಲ್ಲಿ 23 ಸಿಬ್ಬಂದಿ ತಮ್ಮ ಪ್ರಾಣ ಉಳಿಸಿಕೊಳ್ಳಲು ಸಮುದ್ರಕ್ಕೆ ಹಾರಿದ್ದಾರೆ. ಓರ್ವ ಭಾರತೀಯ ಸಿಬ್ಬಂದಿ ಸಾವಿಗೀಡಾಗಿರುವ ಮಾಹಿತಿಯನ್ನು ನೆದರ್‌ಲ್ಯಾಂಡ್ಸ್‌ನಲ್ಲಿರುವ ಭಾರತದ ರಾಯಭಾರ ಕಚೇರಿ (ಇಂಡಿಯಾ ಇನ್ ನೆದರ್‌ಲ್ಯಾಂಡ್ಸ್) ಈ ವಿಷಯವನ್ನು ದೃಢಪಡಿಸಿದೆ. ಮೃತ ವ್ಯಕ್ತಿಯ ಕುಟುಂಬದೊಂದಿಗೆ ಸಂಪರ್ಕದಲ್ಲಿದ್ದು, ಶೀಘ್ರವೇ ಮೃತದೇಹವನ್ನು ಭಾರತಕ್ಕೆ ತಲುಪಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಕಚೇರಿ ತಿಳಿಸಿದೆ. ಗಾಯಾಳು ಸಿಬ್ಬಂದಿಯೊಂದಿಗೂ ಸಂಪರ್ಕದಲ್ಲಿದ್ದೇವೆ. ಅವರೆಲ್ಲರೂ ಸುರಕ್ಷಿತವಾಗಿದ್ದಾರೆ. ಡಚ್ ಅಧಿಕಾರಿಗಳು ಮತ್ತು ಶಿಪ್ಪಿಂಗ್ ಕಂಪನಿಯೊಂದಿಗೆ ಮಾತನಾಡಿದ್ದು ಮುಂದಿನ ಎಲ್ಲ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಭಾರತೀಯ ರಾಯಭಾರ ಕಚೇರಿ ಹೇಳಿದೆ.
ಪ್ರಾಥಮಿಕ ತನಿಖೆಯ ಪ್ರಕಾರ..: ಹಡಗಿನಲ್ಲಿರುವ ಮೂರು ಸಾವಿರ ಕಾರುಗಳಲ್ಲಿ 25ಕ್ಕೂ ಹೆಚ್ಚು ಎಲೆಕ್ಟ್ರಿಕ್ ಕಾರುಗಳಿದ್ದವು. ಈ ಪೈಕಿ ಎಲೆಕ್ಟ್ರಿಕ್ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬಳಿಕ ಕೆನ್ನಾಲಿಗೆ ಇಡೀ ಹಡಗನ್ನು ಆವರಿಸಿದೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದು, 48 ಗಂಟೆ ಕಳೆದರೂ ನಿಯಂತ್ರಿಸಲು ಸಾಧ್ಯವಾಗಿಲ್ಲ. ಇಂದೂ ಕೂಡ ಬೆಂಕಿ ನಂದಿಸುವ ಕಾರ್ಯ ಮುಂದುವರೆದಿದೆ ಎಂದು ಕೋಸ್ಟ್ ಗಾರ್ಡ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಅಗ್ನಿಶಾಮಕ ದಳ ಸಿಬ್ಬಂದಿ ಹಡಗು ಹತ್ತಲು ಸಾಧ್ಯವಾಗದೇ ಇರುವ ಕಾರಣ ಯಂತ್ರಗಳ ಸಹಾಯದಿಂದ ಬೆಂಕಿ ನಂದಿಸಲಾಗುತ್ತಿದೆ. ಮತ್ತೊಂದೆಡೆ, ಹಡಗಿನಲ್ಲಿ ಹೆಚ್ಚು ನೀರು ತುಂಬಿದ್ದು ಮುಳುಗುವ ಅಪಾಯವೂ ಎದುರಾಗಿದೆ. ಹಡಗು ಮುಳುಗದಂತೆ ಜಾಗ್ರತೆವಹಿಸಿ ಬೆಂಕಿ ನಂದಿಸುವುದು ಅತ್ಯಂತ ದೊಡ್ಡ ಸವಾಲು ಎಂದು ಅಗ್ನಿಶಾಮಕ ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆ ನಡೆದ ಸ್ಥಳವು ಯುನೆಸ್ಕೋ ವಿಶ್ವ ಪರಂಪರೆಯ ತಾಣವಾದ ವಾಡೆನ್ ಸೀ ಬಳಿ ಇದೆ. ಇದು ಪ್ರಪಂಚಾದ್ಯಂತ ವಲಸೆ ಹಕ್ಕಿಗಳಿಗೆ ನೆಚ್ಚಿನ ಪ್ರದೇಶವೂ ಹೌದು.
ಮಾರ್ಚ್ 2022ರಲ್ಲಿ, ಜರ್ಮನಿಯಿಂದ ಯುನೈಟೆಡ್ ಸ್ಟೇಟ್ಸ್‌ಗೆ ಕಾರುಗಳನ್ನು ಸಾಗಿಸುತ್ತಿದ್ದ ದೊಡ್ಡ ಸರಕು ಸಾಗಣೆ ಹಡಗು ಬೆಂಕಿ ಅವಘಡಕ್ಕೆ ತುತ್ತಾಗಿ ಅಟ್ಲಾಂಟಿಕ್ ಸಾಗರದಲ್ಲಿ ಮುಳುಗಿತ್ತು. ಸುಮಾರು 13 ದಿನಗಳವರೆಗೆ ಹಡಗು ಹೊತ್ತಿ ಉರಿದಿತ್ತು.
ಇದನ್ನೂ ಓದಿ: ಗಂಗಾನದಿಯಲ್ಲಿ 17 ಟ್ರಕ್ಗಳನ್ನು ಹೊತ್ತು ಸಾಗುತ್ತಿದ್ದ ಕಾರ್ಗೋ ಹಡಗು ನೀರುಪಾಲು!