ಮ್ಯಾನಿಟೋಬಾ, ಕೆನಡಾ: ಇಲ್ಲಿನ ಕಾರ್ಬೆರಿ ಪಟ್ಟಣದ ಬಳಿ ಗುರುವಾರ ಸೆಮಿ ಟ್ರೈಲರ್ ಟ್ರಕ್ ಮತ್ತು ಹಿರಿಯ ನಾಗರಿಕರನ್ನು ತುಂಬಿದ ಬಸ್ ಮಧ್ಯೆ ಡಿಕ್ಕಿ ಸಂಭವಿಸಿದೆ (Canada Road Accident). ಪರಿಣಾಮ ಕನಿಷ್ಠ 15 ಜನರು ಸಾವನ್ನಪ್ಪಿದ್ದು, 10 ಮಂದಿಗೂ ಹೆಚ್ಚು ಗಾಯಗೊಂಡಿರುವುದಾಗಿ ವರದಿಯಾಗಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.
ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದ ಆರ್‌ಸಿಎಂಪಿ ಮ್ಯಾನಿಟೋಬಾದ ಕಮಾಂಡಿಂಗ್ ಆಫೀಸರ್ ಅಸಿಸ್ಟೆಂಟ್ ಕಮಿಷನರ್ ರಾಬ್ ಹಿಲ್, ಸೆಮಿ ಟ್ರೈಲರ್ ಟ್ರಕ್‌ಗೆ ಡಿಕ್ಕಿ ಹೊಡೆದ ಬಸ್‌ನಲ್ಲಿ 25 ಜನರು ಪ್ರಯಾಣಿಸುತ್ತಿದ್ದರು. ಅದರಲ್ಲಿ ಹೆಚ್ಚಾಗಿ ಹಿರಿಯ ನಾಗರಿಕರು ಇದ್ದರು ಎಂದು ಹೇಳಿದರು.
ಬಸ್ ಪಶ್ಚಿಮ ಮ್ಯಾನಿಟೋಬಾ ನಗರವಾದ ಡೌಫಿನ್‌ನಿಂದ ಬರುತ್ತಿತ್ತು. ಗಾಯಗೊಂಡ 10 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ಮೃತರ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಈ ಒಂದು ದಿನ ಮ್ಯಾನಿಟೋಬಾದಲ್ಲಿ ಮತ್ತು ಕೆನಡಾದಾದ್ಯಂತ ದುರಂತ ಮತ್ತು ನಂಬಲಾಗದ ದುಃಖದ ದಿನವಾಗಿ ನೆನಪಿನಲ್ಲಿ ಉಳಿಯುತ್ತದೆ ಎಂದು ರಾಬ್ ಹಿಲ್ ಭಾವುಕರಾದರು.
ಡೌಫಿನ್ ಪ್ರದೇಶದಲ್ಲಿ ಅನೇಕ ಜನರು ತಮ್ಮ ಪ್ರೀತಿಪಾತ್ರರ ಬಗೆಗಿನ ಮಾಹಿತಿಗಾಗಿ ಕಾಯುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ರಾಬ್ ಹಿಲ್, ನನ್ನನ್ನು ಕ್ಷಮಿಸಿ.. ನಿಮಗೆ ಬೇಕಾದ ನಿರ್ಣಾಯಕ ಉತ್ತರವನ್ನು ನಾವು ನಿಮಗೆ ತ್ವರಿತವಾಗಿ ನೀಡಲು ಸಾಧ್ಯವಿಲ್ಲ ಎಂದು ಹೇಳಿದರು.
ಪ್ರಮುಖ ಅಪರಾಧ ಸೇವೆಗಳ ಉಸ್ತುವಾರಿ ಅಧಿಕಾರಿ ರಾಬ್ ಲಾಸನ್ ಅವರು ಮಾತನಾಡಿ, ಹಿರಿಯರನ್ನು ಹೊತ್ತೊಯ್ಯುತ್ತಿದ್ದ ಬಸ್ ದಕ್ಷಿಣಕ್ಕೆ ಹೆದ್ದಾರಿ 5 ರಲ್ಲಿ ಪ್ರಯಾಣಿಸುತ್ತಿತ್ತು. ಟ್ರಾನ್ಸ್-ಕೆನಡಾ ಹೆದ್ದಾರಿಯ ಪೂರ್ವ ದಿಕ್ಕಿನ ಲೇನ್ ಅನ್ನು ದಾಟಿದಾಗ ಬಸ್ ಮತ್ತು ಸೆಮಿ ಟ್ರೈಲರ್ ಟ್ರಕ್ ಮಧ್ಯೆ ಡಿಕ್ಕಿ ಸಂಭವಿಸಿದೆ. ಸ್ಥಳೀಯ ಕಾಲಾಮಾನ ಪ್ರಕಾರ ಬೆಳಗ್ಗೆ 11.30ರ ಸಮಯ ಅಪಘಾತ ಸಂಭವಿಸಿದೆ. ಸುದ್ದಿ ತಿಳಿದ ಕೂಡಲೇ ನಾವು ನಮ್ಮ ರಕ್ಷಣಾ ಪಡೆಯನ್ನು ಘಟನಾ ಸ್ಥಳಕ್ಕೆ ಕಳುಹಿಸಿದ್ದೆವು. ಅಷ್ಟೊತ್ತಿಗಾಗಲೇ ಸ್ಥಳೀಯರು ರಕ್ಷಣಾ ಕಾರ್ಯ ಕೈಗೊಂಡಿದ್ದರು. ಸ್ಥಳೀಯರೊಂದಿಗೆ ನಾವು ಸಹ ರಕ್ಷಣಾ ಕಾರ್ಯ ಮುಂದುವರಿಸಿ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸುವ ವ್ಯವಸ್ಥೆ ಮಾಡಿದ್ದೆವು. ಮೃತದೇಹಗಳನ್ನು ವಶಕ್ಕೆ ಪಡೆದು ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಮರಣೋತ್ತರ ಪರೀಕ್ಷೆ ಬಳಿಕ ಮೃತ ದೇಹಗಳನ್ನು ಸಂಬಂಧಪಟ್ಟ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗುವುದು ಎಂದು ಲಾಸನ್ ಹೇಳಿದರು.
ಅಪಘಾತದಲ್ಲಿ ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡವರಿಗೆ ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಸಂತಾಪ ಸೂಚಿಸಿದ್ದಾರೆ. ತಮ್ಮ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಿಂದ ಅವರು ಟ್ವೀಟ್ ಮಾಡಿ, 'ಕಾರ್ಬೆರಿ, ಮ್ಯಾನಿಟೋಬಾದಿಂದ ಬಂದ ಸುದ್ದಿ ನಂಬಲಾಗದಷ್ಟು ದುಃಖವಾಗಿದೆ. ಇಂದು ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡವರಿಗೆ ನನ್ನ ಆಳವಾದ ಸಂತಾಪ ವ್ಯಕ್ತಪಡಿಸುತ್ತೇನೆ ಮತ್ತು ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ನಾನು ಬಯಸುತ್ತೇನೆ. ಪೀಡಿತರು ಅನುಭವಿಸುತ್ತಿರುವ ನೋವನ್ನು ನಾನು ಊಹಿಸಲು ಸಾಧ್ಯವಿಲ್ಲ. ಆದರೆ, ಈ ದುಃಖದ ಸಮಯದಲ್ಲಿ ಪ್ರತಿಯೊಬ್ಬ ಕೆನಡಿಯನ್ ನಿಮ್ಮೊಂದಿಗಿದ್ದಾರೆ ಎಂದು ಬರೆದುಕೊಂಡಿದ್ದಾರೆ. ಈ ಅಪಘಾತ ಕುರಿತು ಸೂಕ್ತ ತನಿಖೆಗೆ ಅಲ್ಲಿನ ಸರ್ಕಾರ ಆದೇಶಿಸಿದೆ.
ಓದಿ: ರಸ್ತೆ ಅಪಘಾತದಲ್ಲಿ ಮೂರು ಆನೆಗಳ ದಾರುಣ ಸಾವು; ಆಂಧ್ರ ಪ್ರದೇಶದ ಚಿತ್ತೂರಿನಲ್ಲಿ ಘಟನೆ