ಲಂಡನ್: ನೈಋತ್ಯ ಲಂಡನ್ನ ಹೀತ್ರೂ ಪ್ರದೇಶದಲ್ಲಿ ಮಂಗಳವಾರದಂದು 40.2 ಡಿಗ್ರಿ ಉಷ್ಣಾಂಶ ದಾಖಲಾಗಿದೆ. ಇದು ಬ್ರಿಟನ್ನ ಸಾರ್ವಕಾಲಿಕ ಅತಿ ಹೆಚ್ಚು ಉಷ್ಣತೆಯಾಗಿದೆ.
ಆಗ್ನೇಯ ಲಂಡನ್ನ ಸರ್ರೆ ಪ್ರದೇಶದಲ್ಲಿ ಈ ಹಿಂದೆಂದಿಗಿಂತಲೂ ಅತಿ ಹೆಚ್ಚು ಅಂದರೆ 39 ಡಿಗ್ರಿ ಸೆಲ್ಸಿಯಸ್ ಉಷ್ಣತಾಮಾನ ದಾಖಲಾದ ನಂತರ ಕೆಲವೇ ಸಮಯದಲ್ಲಿ ಹೀತ್ರೂನಲ್ಲಿಯೂ ಉಷ್ಣತಾಮಾನ ದಾಖಲೆ ಪ್ರಮಾಣದಲ್ಲಿ ಏರಿಕೆ ಕಂಡಿದೆ. ಪಶ್ಚಿಮ ಇಂಗ್ಲೆಂಡ್‌ನ ಕೇಂಬ್ರಿಜ್ ಬೊಟಾನಿಕಲ್ ಗಾರ್ಡನ್ನಲ್ಲಿ 2019ರಲ್ಲಿ 38.7 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದು ಈವರೆಗಿನ ಅತಿಹೆಚ್ಚು ಉಷ್ಣಾಂಶವಾಗಿತ್ತು.
ದೇಶದ ವಿವಿಧ ಭಾಗಗಳಲ್ಲಿ ಉಷ್ಣಾಂಶಗಳು ಇನ್ನೂ ಹೆಚ್ಚಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಸೋಮವಾರ ರಾತ್ರಿ ಲಂಡನ್ನ ಕೆಲ ಭಾಗಗಳಲ್ಲಿ ಉಷ್ಣಾಂಶವು ದಾಖಲೆಯ 26 ಡಿಗ್ರಿ ಸೆಲ್ಸಿಯಸ್ಗೆ ಹೆಚ್ಚಳವಾಗಿದ್ದ ಹಿನ್ನೆಲೆಯಲ್ಲಿ ಈ ಹಿಂದೆಂದೂ ಕಾಣದಂಥ ಬಿಸಿ ಗಾಳಿ ಬೀಸಬಹುದೆಂದು ದೇಶದಲ್ಲಿ ಮುನ್ಸೂಚನೆ ನೀಡಲಾಗಿತ್ತು. ಹೀಗಾಗಿ ಅತಿಹೆಚ್ಚು ಬಿಸಿಲಿನ ಝಳ ಅನುಭವಿಸಬೇಕಾಗಬಹುದೆಂದು ಜನ ನಿರೀಕ್ಷೆ ಮಾಡಿದ್ದರು.
ಬ್ರಿಟನ್ ರಾಜಧಾನಿ ಸೇರಿದಂತೆ ಮಧ್ಯ, ಉತ್ತರ ಮತ್ತು ಆಗ್ನೇಯ ಇಂಗ್ಲೆಂಡ್ ಪ್ರದೇಶಗಳಲ್ಲಿ ವಿಪರೀತ ಬಿಸಿ ಗಾಳಿಯಿಂದ ಜೀವಹಾನಿಯಾಗುವ ಅಪಾಯದ ಎಚ್ಚರಿಕೆಯನ್ನು ಹವಾಮಾನ ಇಲಾಖೆ ಮುಂದುವರಿಸಿದೆ. ಬಿಸಿಗಾಳಿಯ ಹೊಡೆತದಿಂದ ಪಾರಾಗಲು ನದಿ ಹಾಗೂ ಕೆರೆಗಳ ನೀರಲ್ಲಿ ವಿಹರಿಸಲು ಯತ್ನಿಸಿದ ಕನಿಷ್ಠ ಐದು ಜನ ನೀರಲ್ಲಿ ಮುಳುಗಿ ಸತ್ತಿದ್ದಾರೆ ಎಂದು ತಿಳಿದು ಬಂದಿದೆ.
"ಮಂಗಳವಾರವು ಬಹಳ ವಿಶೇಷ ದಿನವಾಗಿರುತ್ತದೆ. ಇಂಗ್ಲೆಂಡ್‌ನ ಹಲವಾರು ಸ್ಥಳಗಳಲ್ಲಿ ಉಷ್ಣಾಂಶವು 41 ಡಿಗ್ರಿ ಸೆಲ್ಸಿಯಸ್ನಷ್ಟು ಗರಿಷ್ಠ ಮಟ್ಟವನ್ನು ತಲುಪಬಹುದು. ಇದು ದಾಖಲೆಯ ಅತ್ಯಂತ ಬಿಸಿಯಾದ ದಿನವಾಗಬಹುದು. ಇದೇ ಮೊದಲ ಬಾರಿಗೆ 40 ಡಿಗ್ರಿ ಸೆಲ್ಸಿಯಸ್ ಗಿಂತ ಹೆಚ್ಚಿನ ತಾಪಮಾನವನ್ನು ನಾವು ನೋಡುತ್ತಿದ್ದೇವೆ.” ಎಂದು ಹವಾಮಾನ ಇಲಾಖೆ ಅಧಿಕಾರಿ ರಾಚೆಲ್ ಆಯರ್ಸ್ ಹೇಳಿದರು.