ಅಯೋವಾ(ಅಮೆರಿಕ): ಉಕ್ರೇನ್‌ನಲ್ಲಿ ರಷ್ಯಾದ ದಾಳಿ ಮುಂದುವರೆದಿದ್ದು, ಅದೊಂದು 'ನರಮೇಧ' ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಯೋವಾದಿಂದ ವಾಷಿಂಗ್ಟನ್ಗೆ ಮರಳುವ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಬೈಡನ್ ಉಕ್ರೇನ್ನ ದೇಶವನ್ನು ಅಳಿಸಿಹಾಕಲು ರಷ್ಯಾ ಅಧ್ಯಕ್ಷ ವ್ಲಾಡಿಮೀರ್ ಪುಟಿನ್ ಯತ್ನಿಸುತ್ತಿರುವುದು ಸ್ಪಷ್ಟವಾಗಿದೆ. ನಾನು ಅದನ್ನು ನರಮೇಧ ಎಂದೇ ಕರೆಯುತ್ತೇನೆ ಎಂದಿದ್ದಾರೆ.
ಅಯೋವಾದ ಮೆನ್ಲೋದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಯುದ್ಧದ ಪರಿಣಾಮವಾಗಿ ಹೆಚ್ಚುತ್ತಿರುವ ಇಂಧನ ಬೆಲೆಗಳನ್ನು ಉದ್ದೇಶಿಸಿ ಮಾತನಾಡಿದ್ದ ಬೈಡನ್ ಅವರು ಪುಟಿನ್ ಉಕ್ರೇನ್‌ನಲ್ಲಿ ನರಮೇಧ ನಡೆಸುತ್ತಿದ್ದಾರೆ ಎಂದಿದ್ದಾರೆ. ಇದೇ ಪ್ರಶ್ನೆಯನ್ನು ಅಯೋವಾದಿಂದ ವಾಷಿಂಗ್ಟನ್ಗೆ ಮರಳಲು ವಿಮಾನ ನಿಲ್ದಾಣಕ್ಕೆ ಬಂದಿದ್ದ ವೇಳೆ ಮತ್ತೊಂದು ಮಾಧ್ಯಮಕ್ಕೆ ಇದೇ ರೀತಿಯಾಗಿ ಉತ್ತರ ನೀಡಿದ್ದಾರೆ. ಆಗಾಗ್ಗೆ ಉಕ್ರೇನ್ ಪರ ಮಾತನಾಡುವ ಅವರ ಹೇಳಿಕೆಗಳು ಉಕ್ರೇನ್ ಅಧ್ಯಕ್ಷ ವೊಲೊಡಿಮೀರ್ ಝೆಲೆನ್ಸ್ಕಿ ಅವರ ಪ್ರಶಂಸೆಗೂ ಪಾತ್ರವಾಗಿದ್ದವು. ಇಲ್ಲಿಯವರೆಗೆ ಅಮೆರಿಕ ಒದಗಿಸಿದ ಸಹಾಯಕ್ಕಾಗಿ ನಾವು ಕೃತಜ್ಞರಾಗಿರುತ್ತೇವೆ. ನಾವು ಮತ್ತಷ್ಟು ಪ್ರಬಲವಾಗಿ ರಷ್ಯಾವನ್ನು ಎದುರಿಸಲು ಹೆಚ್ಚಿನ ಶಸ್ತ್ರಾಸ್ತ್ರಗಳ ಅಗತ್ಯವಿದೆ ಎಂದು ಝೆಲೆನ್ಸ್ಕಿ ಹೇಳಿದ್ದಾರೆ.
ನರಮೇಧ ಎಂದರೇನು?: ವಿಶ್ವಸಂಸ್ಥೆಯ ಒಪ್ಪಂದವೊಂದರ ಪ್ರಕಾರ ಸಂಪೂರ್ಣವಾಗಿ ಅಥವಾ ಭಾಗಶಃ, ರಾಷ್ಟ್ರೀಯ, ಜನಾಂಗೀಯ ಅಥವಾ ಧಾರ್ಮಿಕ ಗುಂಪನ್ನು ನಾಶಮಾಡುವ ಉದ್ದೇಶದಿಂದ ತೆಗೆದುಕೊಂಡ ಕ್ರಮಗಳನ್ನು ನರಮೇಧ ಎಂದು ಕರೆಯಲಾಗುತ್ತದೆ. ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧದಂತೆ ಹಲವಾರು ಯುದ್ಧಗಳು ನಡೆದಿವೆ. ಈ ವೇಳೆ ಅಮೆರಿಕ ನರಮೇಧ ಎಂದು ಕೆಲವು ಸನ್ನಿವೇಶಗಳಲ್ಲಿ ಯುದ್ಧವನ್ನು ಅಥವಾ ಹಿಂಸಾಚಾರವನ್ನು ಕರೆದಿರಲಿಲ್ಲ. ಅಂತಾರಾಷ್ಟ್ರೀಯ ಸಮಾವೇಶದ ಅಡಿಯಲ್ಲಿ ಒಂದು ಹಿಂಸಾಚಾರವನ್ನು ನರಮೇಧ ಎಂದು ಘೋಷಣೆಯಾಗಬೇಕಾಗುತ್ತದೆ. ಆದರೆ, ಕೆಲವು ಬಾರಿ ಅಮೆರಿಕ ತೆಗೆದುಕೊಂಡ ನಿರ್ಧಾರಗಳು ಏಕಪಕ್ಷೀಯ ಎಂದು ಅನ್ನಿಸುತ್ತವೆ. ಉದಾಹರಣೆಗೆ 1994ರಲ್ಲಿ ರುವಾಂಡಾದ ಹುಟುಸ್ ಜನಸಮುದಾಯ ಟುಟ್ಸಿತ್ ಸಮುದಾಯಕ್ಕೆ ಸೇರಿದ 8,50,000 ಜನರನ್ನು ಕೊಂದಿದ್ದರು. ಈ ಘಟನೆಯನ್ನು ನರಮೇಧ ಎಂದು ಘೋಷಿಸುವುದನ್ನು ಆಗಿನ ಅಮೆರಿಕ ಅಧ್ಯಕ್ಷರಾದ ಬಿಲ್ ಕ್ಲಿಂಟನ್ ನಿರ್ಬಂಧಿಸಿದ್ದರು.
ಈಗ ರಷ್ಯಾ ಉಕ್ರೇನ್‌ನಲ್ಲಿ ನಡೆಸುತ್ತಿರುವ ಯುದ್ಧವನ್ನು ನರಮೇಧ ಎಂದು ಪರಿಗಣಿಸಲಾಗುತ್ತದೆಯೇ? ಎಂಬ ಬಗ್ಗೆ ನಿರ್ಧಾರ ಮಾಡುವುದು ವಕೀಲರಿಗೆ ಬಿಟ್ಟದ್ದು ಎಂದು ಬೈಡನ್ ಹೇಳಿದ್ದು, ನನಗೆ ಖಚಿತವಾಗಿ ರಷ್ಯಾ ನಡೆಸುತ್ತಿರುವುದು ನರಮೇಧ ಎಂಬುದಾಗಿ ಸ್ಪಷ್ಟವಾಗುತ್ತದೆ ಎಂದಿದ್ದಾರೆ. ಇದರೊಂದಿಗೆ ಉಕ್ರೇನ್‌ನಲ್ಲಿ ರಷ್ಯನ್ನರು ಮಾಡಿದ ಭಯಾನಕ ಹಿಂಸಾಚಾರದ ಹೆಚ್ಚಿನ ಪುರಾವೆಗಳು ಹೊರಬರುತ್ತಿವೆ. ಅಲ್ಲಿ ನಡೆಯುತ್ತಿರುವ ವಿನಾಶದ ಬಗ್ಗೆ ನಾವು ಇನ್ನೂ ಹೆಚ್ಚು ತಿಳಿದುಕೊಳ್ಳಲಿದ್ದೇವೆ. ಇದು ನರಮೇಧವೋ? ಅಲ್ಲವೋ? ಎಂಬುದನ್ನು ವಕೀಲರು ಅಂತಾರಾಷ್ಟ್ರೀಯ ಮಟ್ಟದಲ್ಲಿ ನಿರ್ಧರಿಸಲು ಅವಕಾಶ ಮಾಡಿಕೊಡುತ್ತೇವೆ ಎಂದು ಬೈಡನ್ ಹೇಳಿದ್ದಾರೆ.
ಇದನ್ನೂ ಓದಿ: ರಷ್ಯಾದೊಂದಿಗಿನ ಶಸ್ತ್ರಾಸ್ತ್ರಗಳ ವಹಿವಾಟು ನಿಲ್ಲಿಸಲು ಎಲ್ಲಾ ರಾಷ್ಟ್ರಗಳಿಗೆ ಅಮೆರಿಕ ಕರೆ