ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಜೋ ಬೈಡನ್ 6ಕ್ಕೂ ಹೆಚ್ಚು ಭಾರತೀಯ-ಅಮೆರಿಕನ್ ಮೂಲದ ಪರಿಣತರನ್ನು ತಮ್ಮ ದೇಶದ ಆಡಳಿತದ ಪ್ರಮುಖ ಸ್ಥಾನಗಳಿಗೆ ಮರು ನೇಮಕ ಮಾಡಿದ್ದಾರೆ. ಈ ಮಾಹಿತಿಯನ್ನು ಸೆನೆಟ್‌ಗೆ ಕಳುಹಿಸಲಾಗಿದೆ. 118 ಸದಸ್ಯರಿರುವ ಕಾಂಗ್ರೆಸ್‌ನ ಸೆನೆಟರ್‌ಗಳ ಪ್ರಮಾಣ ವಚನ ಮತ್ತು ಅಮೆರಿಕದ ಜನಪ್ರತಿನಿಧಿ ಮನೆಗೆ ಸ್ಪೀಕರ್ ಚುನಾವಣೆ ಪ್ರಕ್ರಿಯೆಗೆ ಮಂಗಳವಾರ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ಬೈಡನ್ ಅನೇಕ ಭಾರತೀಯ-ಅಮೆರಿಕನ್ ಮೂಲದವರನ್ನು ಪ್ರಮುಖ ಸ್ಥಾನಗಳಿಗೆ ಮರು ನೇಮಕ ಮಾಡಿದ್ದಾರೆ.
ರಾಜ್ಯ ನಿರ್ವಹಣೆ ಮತ್ತು ಮೂಲದ ಉಪ ಕಾರ್ಯದರ್ಶಿಯಾಗಿ ರಿಚರ್ಡ್ ವರ್ಮಾ, ವಿಶ್ವ ಆರೋಗ್ಯ ಸಂಸ್ಥೆಯ ಎಕ್ಸಿಕ್ಯೂಟಿವ್ ಬೋರ್ಡ್ನ ಅಮೆರಿಕದ ಪ್ರತಿನಿಧಿಯಾಗಿ ಕರ್ನಾಟಕ ಮೂಲದ ಡಾ.ವಿವೇಕ್ ಹಲಗೆರೆ ಮೂರ್ತಿ ಅವರನ್ನು ನೇಮಿಸಿದ್ದಾರೆ. ಜನವರಿ 16, 2015ರಿಂದ ಜ.20, 2017ರವರೆಗೆ ವರ್ಮಾ ಅಮೆರಿಕ ರಾಯಭಾರಿಯಾಗಿ ಭಾರತದಲ್ಲಿ ಸೇವೆ ಸಲ್ಲಿಸಿದ್ದರು. ಸದ್ಯ ಅವರು ಮುಖ್ಯ ಕಾನೂನು ಅಧಿಕಾರಿಯಾಗಿದ್ದು, ಮಾಸ್ಟರ್ಕಾರ್ಡ್ನಲ್ಲಿ ಗ್ಲೋಬಲ್ ಪಬ್ಲಿಕ್ ಪಾಲಿಸಿ ಮುಖ್ಯಸ್ಥರೂ ಹೌದು.
ಮತ್ತೊಮ್ಮೆ ಕನ್ನಡಿಗ ಡಾ. ಮೂರ್ತಿಗೆ ಸ್ಥಾನ: ಮೂರ್ತಿ ಈ ಹಿಂದೆ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಅವರ ಅಧಿಕಾರವಧಿಯಲ್ಲಿ 19ನೇ ಸರ್ಜನ್ ಜನರಲ್ ಆಗಿ ಸೇವೆ ಸಲ್ಲಿಸಿದ್ದರು. ಇದೀಗ ವಿಶ್ವ ಆರೋಗ್ಯ ಸಂಸ್ಥೆಯ ಎಕ್ಸಿಕ್ಯೂಟಿವ್ ಬೋರ್ಡ್ನ ಅಮೆರಿಕದ ಪ್ರತಿನಿಧಿಯಾಗಿದ್ದಾರೆ. ಸಾಮಾನ್ಯ ಮಂಡಳಿಗೆ ಅಂಜಲಿ ಚತುರ್ವೇದಿ ಅವರನ್ನು ಕೂಡ ಬೈಡನ್ ಮರು ನೇಮಕ ಮಾಡಿದ್ದಾರೆ. ರವಿ ಚೌದರಿ ಅವರನ್ನು ವಾಯುದಳದ ಅಸಿಸ್ಟೆಂಟ್ ಸೆಕ್ರಟರಿ ಆಗಿ ನೇಮಕ ಮಾಡಲಾಗಿದೆ. ಜಾಗತಿಕ ಸಮಸ್ಯೆಗಳಿಗೆ ರಾಯಭಾರಿಯಾಗಿ ಗೀತಾ ರಾವ್ ಗುಪ್ತ ಮತ್ತು ಪ್ಲಂಬ್ ಅವರು ರಕ್ಷಣಾ ಉಪ ಕಾರ್ಯದರ್ಶಿಯಾಗಿ ರಾಧಾ ಅಯ್ಯಂಗಾರ್ ಅವರನ್ನು ನೇಮಿಸಲಾಗಿದೆ.
ಸೆನೆಟ್ನಿಂದ ಅಧಿಕೃತವಾಗಿಲ್ಲ: ಕಳೆದ ಕಾಂಗ್ರೆಸ್ಲ್ಲಿ ಇವರನ್ನೆಲ್ಲ ಆಡಳಿತದ ಪ್ರಮುಖ ಹುದ್ದೆಗೆ ಬೈಡನ್ ನೇಮಕ ಮಾಡಿದ್ದಾರೆ. ಆದರೆ, ಸೆನೆಟ್ನಿಂದ ಈ ಬಗ್ಗೆ ಅಧಿಕೃತವಾಗಿಲ್ಲ. ಆದರೆ, ಭಾರತೀಯ ಸಮುದಾಯದೊಂದಿಗೆ ಬೈಡನ್ ಆತ್ಮೀಯ ಸಂಬಂಧವನ್ನು ಹೊಂದಿದ್ದಾರೆ. 2020ರಲ್ಲಿ ಭಾರತೀಯ ಮೂಲದ ಕಮಲಾ ಹ್ಯಾರಿಸ್ ಅವರನ್ನು ತಮ್ಮ ಸಹವರ್ತಿಯಾಗಿ ಆಯ್ಕೆ ಮಾಡುವ ಮೂಲಕ ಅವರು ಇತಿಹಾಸ ಸೃಷ್ಟಿಸಿದ್ದರು.
ನುಡಿದಂತೆ ನಡೆಯುತ್ತಿರುವ ಬೈಡನ್: ತಮ್ಮ ಆಡಳಿತದ ವಿವಿಧ ಹಂತಗಳ ನೇಮಕಾತಿಯಲ್ಲಿ ಭಾರತೀಯ ಅಮೆರಿಕನ್ನರಿಗೆ ಹೆಚ್ಚು ಪ್ರಾತಿನಿಧ್ಯ ನೀಡುವುದಾಗಿ ಬೈಡನ್ 2020ರಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆಯ ವೇಳೆ ಭರವಸೆ ನೀಡಿದ್ದರು. ಅದರಂತೆ ತಮ್ಮ ಆಡಳಿತದ ವಿವಿಧ ಪ್ರಮುಖ ಹುದ್ದೆಗಳಿಗೆ ಭಾರತೀಯರನ್ನು ನೇಮಕ ಮಾಡುತ್ತಾ ಬಂದಿದ್ದಾರೆ. ಈ ಹಿಂದೆ ಡೋನಾಲ್ಡ್ ಟ್ರಂಪ್ ಮತ್ತು ಬರಾಕ್ ಒಬಾಮ ಅವರ ಅಡಳಿತ ಅವಧಿಯಲ್ಲೂ ಕೂಡ ಅನೇಕ ಭಾರತೀಯ ಅಮೆರಿಕನ್ನರು ಆಡಳಿತದ ಪ್ರಮುಖ ಹುದ್ದೆಗಳನ್ನು ಅಲಂಕರಿಸಿದ್ದರು.
ಇದನ್ನೂ ಓದಿ: ಅಮೆರಿಕ ನಿರ್ಮಿತ ಉಕ್ರೇನ್ ರಾಕೆಟ್ ದಾಳಿಗೆ 63 ರಷ್ಯಾ ಸೈನಿಕರು ಹತ