ವಾಷಿಂಗ್ಟನ್: ಫಿನ್‌ಲ್ಯಾಂಡ್ ಮತ್ತು ಸ್ವೀಡನ್ ದೇಶಗಳು ನ್ಯಾಟೋ ಮೈತ್ರಿಕೂಟಕ್ಕೆ ಸೇರುವುದನ್ನು ಅಮೆರಿಕದ ಅಧ್ಯಕ್ಷ ಜೋ ಬೈಡನ್ ಅವರು ಮಂಗಳವಾರ ಔಪಚಾರಿಕವಾಗಿ ಸ್ವಾಗತಿಸಿದರು. ಈ ಎರಡೂ ದೇಶಗಳಿಗೆ ಯುಎಸ್ ಔಪಚಾರಿಕ ಬೆಂಬಲವನ್ನು ನೀಡುವ ಅನುಮೋದನೆ ಪತ್ರಗಳಿಗೆ ಸಹಿ ಹಾಕಿದರು.
ನಾರ್ಡಿಕ್ ರಾಷ್ಟ್ರಗಳು ಪರಸ್ಪರ ರಕ್ಷಣಾ ಒಪ್ಪಂದ ಮಾಡಿಕೊಂಡು ಭದ್ರತೆಯ ಆತಂಕದಿಂದ ಸೇನಾ ನೆರವಿಗಾಗಿ ನ್ಯಾಟೋ ಸದಸ್ಯತ್ವ ಪಡೆಯಲು ಮುಂದಾಗಿವೆ. ರಷ್ಯಾವು ಪಕ್ಕದ ಉಕ್ರೇನ್ ಮೇಲೆ ಆಕ್ರಮಣ ಮುಂದುವರೆಸಿದ ನಂತರ ಭದ್ರತಾ ದೃಷ್ಠಿಯಿಂದ ಫಿನ್‌ಲ್ಯಾಂಡ್ ಮತ್ತು ಸ್ವೀಡನ್ ದೇಶಗಳು ಈ ನಿರ್ಧಾರ ಕೈಗೊಂಡಿವೆ.
ಈ ಕುರಿತು ಮಾಹಿತಿ ನೀಡಿರುವ ಬೈಡನ್, ಫಿನ್‌ಲ್ಯಾಂಡ್ ಮತ್ತು ಸ್ವೀಡನ್ ದೇಶಗಳಿಗೆ ಈ ಮೈತ್ರಿ ಅನಿವಾರ್ಯವಾಗಿದೆ. NATO ಸದಸ್ಯತ್ವವನ್ನು ಅನುಮೋದಿಸುವ ಅಂಗೀಕಾರಕ್ಕೆ ಸಹಿ ಹಾಕುವ ಮೊದಲು ಎರಡೂ ರಾಷ್ಟ್ರಗಳ ಮುಖ್ಯಸ್ಥರೊಂದಿಗೆ ಮಾತನಾಡಿದ್ದೇನೆ, ಉಳಿದ ನ್ಯಾಟೋ ಸದಸ್ಯರು ತಮ್ಮದೇ ಆದ ಅನುಮೋದನೆ ಪ್ರಕ್ರಿಯೆಯನ್ನು ಸಾಧ್ಯವಾದಷ್ಟು ಬೇಗ ಮುಗಿಸಬೇಕು ಎಂದು ಒತ್ತಾಯಿಸಿದರು.
ನ್ಯಾಟೋ ಎಂದರೇನು?: ಉತ್ತರ ಅಟ್ಲಾಂಟಿಕ್ ಒಪ್ಪಂದ ಸಂಸ್ಥೆ ಎಂಬುದರ ಸಂಕ್ಷಿಪ್ತ ರೂಪವೇ ನ್ಯಾಟೋ. ಈ ಒಕ್ಕೂಟದ ಮುಖ್ಯ ಉದ್ದೇಶ ಸದಸ್ಯ ರಾಷ್ಟ್ರಗಳ ಸ್ವಾತಂತ್ರ್ಯ, ಸಾರ್ವಭೌಮತೆ ಹಾಗೂ ಭದ್ರತೆಯನ್ನು ಕಾಪಾಡುವುದು. ಇದಕ್ಕಾಗಿ ರಾಜಕೀಯ ಹಾಗೂ ಮಿಲಿಟರಿ ಶಕ್ತಿ ಸದ್ಬಳಕೆ ಮಾಡುವುದು. ಏಪ್ರಿಲ್ 1949 ರಲ್ಲಿ ವಾಷಿಂಗ್ಟನ್ ಡಿಸಿಯಲ್ಲಿ ನ್ಯಾಟೋವನ್ನು ಸ್ಥಾಪಿಸಲಾಯಿತು. ಇದರ ಪ್ರಧಾನ ಕಚೇರಿಯು ಬೆಲ್ಜಿಯಂನ ಬ್ರಸೆಲ್ಸ್‌ನಲ್ಲಿದೆ. ರಾಜತಾಂತ್ರಿಕ ಪ್ರಯತ್ನಗಳು ವಿಫಲವಾದರೆ, ಬಿಕ್ಕಟ್ಟು-ನಿರ್ವಹಣೆಯ ಕಾರ್ಯಾಚರಣೆಗಳನ್ನು ಕೈಗೊಳ್ಳಲು ನ್ಯಾಟೋ ಮಿಲಿಟರಿ ಶಕ್ತಿಯನ್ನು ಹೊಂದಿದೆ.
ಇದನ್ನೂ ಓದಿ: ನ್ಯಾಟೋ ಸೇರುವ ನಿರ್ಧಾರಕ್ಕೆ ಡೇಟ್ ಫಿಕ್ಸ್: ಅಡಕತ್ತರಿಯಲ್ಲಿ ಸ್ವೀಡನ್, ಫಿನ್‌ಲ್ಯಾಂಡ್!