ನ್ಯೂ ಸೌತ್ ವೇಲ್ಸ್, ಆಸ್ಟ್ರೇಲಿಯಾ: ನಗರದಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಹಂಟರ್ ವ್ಯಾಲಿಯಲ್ಲಿರುವ ವೈನ್ ಕೌಂಟಿ ಡ್ರೈವ್ನಲ್ಲಿ ಬಸ್ ಪಲ್ಟಿಯಾಗಿ 10 ಮಂದಿ ಸಾವನ್ನಪ್ಪಿದ್ದು, ಇತರ 11 ಮಂದಿ ಗಂಭೀರವಾಗಿ ಗಾಯಗೊಂಡಿರುವುದಾಗಿ ವರದಿಯಾಗಿದೆ. ಗಾಯಾಳುಗಳನ್ನು ಹೆಲಿಕಾಪ್ಟರ್ ಮತ್ತು ರಸ್ತೆ ಮೂಲಕ ಪ್ರದೇಶದ ಆಸ್ಪತ್ರೆಗಳಿಗೆ ಕರೆದೊಯ್ಯಲಾಗಿದೆ. ಬಸ್ನಲ್ಲಿ ಕೇವಲ 40 ಮಂದಿ ಪ್ರಯಾಣಿಕರಿದ್ದರು ಎಂದು ಹೇಳಲಾಗುತ್ತಿದೆ.
ಭೀಕರ ರಸ್ತೆ ಅಪಘಾತದಲ್ಲಿ ಸಾವು ನೋವು: ಹಂಟರ್ ವ್ಯಾಲಿ ಪ್ರದೇಶದಲ್ಲಿ ಭಾನುವಾರ ತಡರಾತ್ರಿ ಮದುವೆ ಮುಗಿಸಿಕೊಂಡು ವಾಪಸ್ಸಾಗುತ್ತಿದ್ದ ವೇಳೆ ಅತಿಥಿಗಳನ್ನು ಹೊತ್ತೊಯ್ಯುತ್ತಿದ್ದ ಬಸ್ ರಸ್ತೆಗೆ ಉರುಳಿ ಬಿದ್ದಿದೆ. ಪರಿಣಾಮ ಕನಿಷ್ಠ 10 ಮಂದಿ ಸಾವನ್ನಪ್ಪಿದ್ದು, 11 ಮಂದಿ ಗಾಯಗೊಂಡಿದ್ದರು. ರಸ್ತೆ ಅಪಘಾತ ಸಂಭವಿಸುತ್ತಿದ್ದಂತೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ರವಾನಿಸಿ ರಕ್ಷಣಾ ಕಾರ್ಯ ಕೈಗೊಂಡಿದ್ದರು. ಸುದ್ದಿ ತಿಳಿದಾಕ್ಷಣ ಪೊಲೀಸರು ಮತ್ತು ರಕ್ಷಣಾ ಪಡೆಗಳು ಸ್ಥಳಕ್ಕೆ ದೌಡಾಯಿಸಿದ್ದರು. ಬಳಿಕ ತುರ್ತು ಸೇವೆಗಳು ರಾತ್ರಿಯಿಡೀ ಕಾರ್ಯನಿರ್ವಹಿಸುತ್ತಿದ್ದವು.
ಬಸ್ ಚಾಲಕನ ಸ್ಥಿತಿ ಚಿಂತಾಜನಕ: ಅಪಘಾತದಲ್ಲಿ 18 ಪ್ರಯಾಣಿಕರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ. ಬಸ್ ಚಾಲಕ ಹಾಗೂ 58 ವರ್ಷದ ವ್ಯಕ್ತಿಯ ಸ್ಥಿತಿ ಗಂಭೀರವಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ನ್ಯೂ ಸೌತ್ ವೇಲ್ಸ್ನ ಗ್ರೆಟಾ ಪಟ್ಟಣದಲ್ಲಿ ಬಸ್ ಅಪಘಾತದ ನಂತರ, ಸಂಚಾರದಲ್ಲಿ ಅಸ್ತವ್ಯಸ್ತ ಉಂಟಾಗಿತ್ತು. ಬಳಿಕ ಪೊಲೀಸರು ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ದಟ್ಟವಾದ ಮಂಜಿನಿಂದ ಅಪಘಾತ: ರಾತ್ರಿ 11:30 ರ ನಂತರ ಅಪಘಾತ ಸಂಭವಿಸಿದೆ. ಸದ್ಯ ಈ ದುರ್ಘಟನೆ ಮಂಜಿನಿಂದಾಗಿ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ. ಅಪಘಾತಕ್ಕೆ ನಿಖರವಾದ ಕಾರಣವನ್ನು ಕಂಡು ಹಿಡಿಯಲಾಗುತ್ತಿದೆ ಎಂದು ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಆಸ್ಟ್ರೇಲಿಯಾದ ಮಾಧ್ಯಮಗಳ ಪ್ರಕಾರ, ಬಸ್ಸಿನಲ್ಲಿ ಸುಮಾರು 40 ಜನರು ವಾಂಡಿನ್ ಎಸ್ಟೇಟ್ ವೈನರಿಯಲ್ಲಿ ನಡೆದ ಮದುವೆ ಸಮಾರಂಭದಲ್ಲಿ ಹಾಜರಾಗಿದ್ದರು. ಇವರೆಲ್ಲರೂ ಕಾರ್ಯಕ್ರಮದಲ್ಲಿ ಭಾಗವಹಿಸಿ ಹಿಂತಿರುಗುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ ಎಂದು ವರದಿ ಮಾಡಲಾಗಿದೆ.
ಸೆಸ್ನಾಕ್ ಮೇಯರ್ ಸಂತಾಪ: ಈ ಅಪಘಾತವು ನಿಜವಾಗಿಯೂ ಭಯಾನಕವಾಗಿದೆ. ಭೀಕರ ರಸ್ತೆ ಅಪಘಾತದಿಂದ ಮೃತಪಟ್ಟಿರುವ ದಾರುಣ ಘಟನೆ ತಿಳಿದು ಅಪಾರ ದುಃಖವಾಯಿತು. ಗಾಯಾಳುಗಳು ಚಿಕಿತ್ಸೆ ಪಡೆಯುತ್ತಿದ್ದು, ಮೃತರ ಕುಟುಂಬಸ್ಥರಿಗೆ ದುಃಖ ಸಹಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ. ಮೃತರ ಆತ್ಮಕ್ಕೆ ಚಿರಶಾಂತಿ ದೊರೆಯಲಿ ಎಂದು ಸೆಸ್ನಾಕ್ ಮೇಯರ್ ಜೈ ಸುವಾಲ್ ಸಂತಾಪ ಸೂಚಿಸಿದರು.
ಆಸ್ಟ್ರೇಲಿಯಾದ ಮೊದಲ ವೈನ್ ಪ್ರದೇಶ: ಹಂಟರ್ ವ್ಯಾಲಿಯು ಪ್ರಮುಖ ವಿವಾಹ ಮತ್ತು ಪ್ರವಾಸಿ ತಾಣಗಳಲ್ಲಿ ಒಂದಾಗಿದೆ. ಆದ್ದರಿಂದ ರಾಜ್ಯ ಮತ್ತು ದೇಶದಾದ್ಯಂತದ ಜನರು ಇಲ್ಲಿಗೆ ಭೇಟಿ ನೀಡುವುದು ಸಾಮಾನ್ಯ. ಗ್ರೇಟಾವು ಹಂಟರ್ ವ್ಯಾಲಿಯು ವೈನ್ ಪ್ರದೇಶದ ಹೃದಯಭಾಗದಲ್ಲಿದೆ. ಈ ಪ್ರದೇಶದಲ್ಲಿ ಹೆಚ್ಚಾಗಿ ರೆಸ್ಟೋರೆಂಟ್ಗಳಿವೆ. ಇದು ಆಸ್ಟ್ರೇಲಿಯಾದಲ್ಲಿ ಸ್ಥಾಪಿಸಲಾದ ಮೊದಲ ವೈನ್ ಪ್ರದೇಶವಾಗಿದೆ. ಅಪಘಾತದ ಸುತ್ತಲಿನ ಸಂದರ್ಭಗಳ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಓದಿ: Mysore Bangalore Highway accident: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ.. ಓರ್ವ ಸಾವು ; 3 ಮಂದಿಗೆ ತೀವ್ರ ಗಾಯ