ಸ್ಯಾಂಟಿಯಾಗೊ, ಚಿಲಿ: ಚಿಲಿಯ ವಿಮಾನ ನಿಲ್ದಾಣದಿಂದ ಶಸ್ತ್ರಸಜ್ಜಿತ ದರೋಡೆಕೋರರು 262 ಕೋಟಿ ರೂಪಾಯಿ ಕದಿಯಲು ನಡೆಸಿದ ಯತ್ನ ವಿಫಲವಾಗಿದೆ. ಅಲ್ಲಿನ ಮಾಧ್ಯಮಗಳ ವರದಿಯ ಪ್ರಕಾರ, ಬುಧವಾರ ಚಿಲಿಯ ಅರ್ಟುರೊ ಮೆರಿನೊ ಬೆನಿಟೆಜ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ದರೋಡೆಕೋರರು ಮತ್ತು ಭದ್ರತಾ ಅಧಿಕಾರಿಗಳ ನಡುವೆ ಹಲವಾರು ಗಂಟೆಗಳ ಕಾಲ ಗುಂಡಿನ ಚಕಮಕಿ ನಡೆದಿದೆ.
ಈ ವೇಳೆ ಒಬ್ಬ ಡಕಾಯಿತ ಮತ್ತು ಸಿಬ್ಬಂದಿ ಸಾವನ್ನಪ್ಪಿದ್ದಾರೆ. ಭದ್ರತಾ ಅಧಿಕಾರಿಗಳ ಪ್ರತೀಕಾರದ ಕ್ರಮವನ್ನು ನೋಡಿದ ಇತರ ಎಲ್ಲಾ ಡಕಾಯಿತರು ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಈ ಡಕಾಯಿತ್ಗಳು ಚಿಲಿಯ ವಿಮಾನ ನಿಲ್ದಾಣದಲ್ಲಿ ನಗದು ಆಗಮನದ ಬಗ್ಗೆ ಮಾಹಿತಿಯನ್ನು ಪಡೆದಿದ್ದರು. ಬಳಿಕ ದರೋಡೆಗೆ ಯೋಜನೆ ರೂಪಿಸಿ ಹಲ್ಲೆ ನಡೆಸಿರುವುದಾಗಿ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
262 ಕೋಟಿ ರೂಪಾಯಿ ಹೊತ್ತ ತಂದ ವಿಮಾನ: ತನಿಖಾ ಅಧಿಕಾರಿ ಎಡ್ವರ್ಡೊ ಬೇಜಾ ಅವರು ಮಿಯಾಮಿಯಿಂದ ವಿಮಾನ ನಿಲ್ದಾಣಕ್ಕೆ ನಗದು ಹಣ ತಂದಿದ್ದರು. ವಿಮಾನದಲ್ಲಿ 266 ಕೋಟಿ ರೂಪಾಯಿಗೂ ಹೆಚ್ಚು ಇತ್ತು. ಈ ರೂಪಾಯಿಗಳನ್ನು ಚಿಲಿಯ ವಿವಿಧ ಬ್ಯಾಂಕ್‌ಗಳಲ್ಲಿ ವಿತರಿಸಬೇಕಿತ್ತು. ಇದು ಕಾರ್ಗೋ ಸೆಕ್ಯುರಿಟಿ ಕಂಪನಿಯಾದ ಬ್ರಿಂಕ್ಸ್‌ಗೆ ಸೇರಿತ್ತು. ಈ ನಗದನ್ನು ವಿಮಾನದಿಂದ ಇಳಿಸುತ್ತಿದ್ದಾಗ ಇದ್ದಕ್ಕಿದ್ದಂತೆ ಗುಂಡಿನ ದಾಳಿ ಪ್ರಾರಂಭವಾಗಿತ್ತು. ಇದಕ್ಕೆ ಪ್ರತಿಯಾಗಿ ಅಲ್ಲಿದ್ದ ಭದ್ರತಾ ಅಧಿಕಾರಿಗಳು ಕೂಡ ಗುಂಡು ಹಾರಿಸಲು ಆರಂಭಿಸಿದರು. ಬಳಿಕ ದರೋಡೆಕೋರರು ಭದ್ರತಾ ಪಡೆಗಳ ಗುಂಡಿಗೆ ಉತ್ತರಿಸದೇ ಹೆದರಿ ಕಾಲ್ಕಿತ್ತಿದ್ದಾರೆ. ಆರೋಪಿಗಳಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ. ಘಟನೆಯ ನಂತರ ಹಣ ಸುರಕ್ಷಿತವಾಗಿದೆ ಎಂದು ಅಧಿಕಾರಿಗಳು ಬಹಿರಂಗಪಡಿಸಿದ್ದಾರೆ.
ಘಟನೆಯ ನಂತರ ವಿಮಾನ ನಿಲ್ದಾಣದಲ್ಲಿದ್ದ ಪ್ರಯಾಣಿಕರಿಗೆ ಯಾವುದೇ ಹಾನಿಯಾಗಿಲ್ಲ. ಆದ್ರೆ ಈ ಗುಂಡಿನ ದಾಳಿಯಲ್ಲಿ ಒಬ್ಬ ನಾಗರಿಕ ವಿಮಾನಯಾನ ಉದ್ಯೋಗಿ ಮತ್ತು ಒಬ್ಬ ಆರೋಪಿ ಸೇರಿ ಇಬ್ಬರು ಸಾವನ್ನಪ್ಪಿದ್ದಾರೆ. ವಿಮಾನ ನಿಲ್ದಾಣದಲ್ಲಿ ನಡೆದ ಗುಂಡಿನ ದಾಳಿಯ ಹಲವು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಜನರು ಇದನ್ನು ನೆಟ್‌ಫ್ಲಿಕ್ಸ್‌ನ ಪ್ರಸಿದ್ಧ ಶೋ ‘ಮನಿ ಹೀಸ್ಟ್’ಗೆ ಹೋಲಿಸುತ್ತಿದ್ದಾರೆ. ಇದರಲ್ಲಿ ಅನೇಕರು ಗುಂಪು ಕಟ್ಟಿಕೊಂಡು ಕಳ್ಳತನಕ್ಕಾಗಿ ಬೇರೆ ಬೇರೆ ಕಡೆ ದಾಳಿ ಮಾಡುತ್ತಾರೆ. ಚಿಲಿ ವಿಮಾನ ನಿಲ್ದಾಣದಲ್ಲಿ ದರೋಡೆಗೆ ಯತ್ನಿಸಿದ ನಂತರ ಪ್ರದೇಶವನ್ನು ಸೀಲ್ ಮಾಡಲಾಗಿದೆ
ಚಿಲಿಯ ಉಪ ಆಂತರಿಕ ಸಚಿವರು ಈ ಬಗ್ಗೆ ಮಾತನಾಡಿ, ಬುಧವಾರದ ಘಟನೆ ಯೋಜಿತ ದಾಳಿಯಾಗಿದೆ. ಇದರಲ್ಲಿ ಡಕಾಯಿತರು ಅಪಾಯಕಾರಿ ಶಸ್ತ್ರಾಸ್ತ್ರಗಳನ್ನು ಹೊಂದಿದ್ದರು ಎಂದರು. ಚಿಲಿ ಅಧ್ಯಕ್ಷ ಗೇಬ್ರಿಯಲ್ ಬೋರಿಕ್ ಕೂಡ ಈ ಸಂಪೂರ್ಣ ಘಟನೆಗೆ ಪ್ರತಿಕ್ರಿಯಿಸಿದ್ದಾರೆ. ಎಲ್ಲಿ ಅಭದ್ರತೆಯ ಭಾವನೆ ಇದೆಯೋ ಅಲ್ಲಿ ಈ ರೀತಿ ಘಟನೆಗಳು ನಡೆಯುತ್ತವೆ ಎಂದರು.
ಸ್ಯಾಂಟಿಯಾಗೊ ವಿಮಾನ ನಿಲ್ದಾಣದಲ್ಲಿ ಇಂತಹ ದರೋಡೆಗಳು ಹೊಸದೇನಲ್ಲ. 2020 ರಲ್ಲಿ, ಕಳ್ಳರ ಗ್ಯಾಂಗ್ ವಿಮಾನ ನಿಲ್ದಾಣದ ಗೋದಾಮಿನಿಂದ 15 ಮಿಲಿಯನ್ ಡಾಲರ್ ಮೌಲ್ಯದ ಸರಕುಗಳನ್ನು ಕದ್ದಿದೆ. ಇದಕ್ಕೂ ಮುನ್ನ ಆರು ವರ್ಷಗಳ ಹಿಂದೆ 10 ಮಿಲಿಯನ್ ಡಾಲರ್ ಮೌಲ್ಯದ ವಸ್ತುಗಳನ್ನು ಕಳವು ಮಾಡಲಾಗಿತ್ತು. ಈಗ 262 ಕೋಟಿ ಲೂಟಿ ಮಾಡಲು ವಿಫಲ ಯತ್ನಿಸಿದೆ.
ಓದಿ: ಬಣ್ಣ ಎರಚಬೇಡಿ ಎಂದಿದ್ದಕ್ಕೆ ವೃದ್ಧೆಯನ್ನು ಹೊಡೆದು ಕೊಂದೇ ಬಿಟ್ಟರು: ಪಾನಮತ್ತ ಯುವಕರ ದುಷ್ಕೃತ್ಯ