ಇಸ್ಲಾಮಾಬಾದ್: ಪಂಜಾಬ್ ಮತ್ತು ಖೈಬರ್ ಪಖ್ತುಂಖ್ವಾ ಪ್ರಾಂತ್ಯಗಳಲ್ಲಿನ ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ (ಪಿಟಿಐ) ಸರ್ಕಾರಗಳು ಡಿಸೆಂಬರ್ 23 ರಂದು ತಮ್ಮ ಅಸೆಂಬ್ಲಿಗಳನ್ನು ವಿಸರ್ಜಿಸಿ ಹೊಸ ಚುನಾವಣೆಗೆ ದಾರಿ ಮಾಡಿಕೊಡಲಿದೆ ಎಂದು ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದಾರೆ. ಪಾಕಿಸ್ತಾನ ದೇಶ ವಿನಾಶದಂಚಿನಲ್ಲಿದೆ ಎಂದು ಇದೇ ಸಂದರ್ಭದಲ್ಲಿ ಅವರು ಎಚ್ಚರಿಕೆ ನೀಡಿದ್ದಾರೆ.
ಎಲ್ಲಿಯವರೆಗೆ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗಳು ನಡೆಯುವುದಿಲ್ಲವೋ ಅಲ್ಲಿಯವರೆಗೆ ದೇಶವು (ಪಾಕಿಸ್ತಾನ) ವಿನಾಶವಾಗಲಿದೆ ಎಂಬ ಭಯ ಕಾಡುತ್ತಿರುತ್ತದೆ ಎಂದು ಪಿಟಿಐ ಅಧ್ಯಕ್ಷ ಖಾನ್ ಹೇಳಿದರು. ವಿಡಿಯೋ ಮೂಲಕ ಭಾಷಣ ಮಾಡಿದ ಇಮ್ರಾನ್ ಜೊತೆ ಪಂಜಾಬ್ ಮುಖ್ಯಮಂತ್ರಿ ಪರ್ವೇಜ್ ಇಲಾಹಿ ಮತ್ತು ಖೈಬರ್ ಪಖ್ತುನಖ್ವಾ ಮುಖ್ಯಮಂತ್ರಿ ಮಹಮೂದ್ ಖಾನ್ ಇದ್ದರು.
ಪಾಕಿಸ್ತಾನದ ಮಾಜಿ ಸೇನಾ ಮುಖ್ಯಸ್ಥ ಜನರಲ್ (ನಿವೃತ್ತ) ಕಮರ್ ಜಾವೇದ್ ಬಾಜ್ವಾ ಅವರು ತಮ್ಮ ಪಕ್ಷದ ವಿರುದ್ಧ ರೂಪಿಸಲಾದ ಪಿತೂರಿಯಲ್ಲಿ ಭಾಗಿಯಾಗಿದ್ದಾರೆ. ಪಿಟಿಐ ಸರ್ಕಾರದ ಪತನಕ್ಕೆ ಜನರಲ್ ಬಾಜ್ವಾ ಮಾತ್ರ ಜವಾಬ್ದಾರರು ಎಂದು ಪಾಕ್ ಮಾಜಿ ಪ್ರಧಾನಿ ಆರೋಪಿಸಿದರು.
ಇಮ್ರಾನ್ ಖಾನ್ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗಾಗಿ ತಮ್ಮ ಬೇಡಿಕೆಯನ್ನು ಪುನರುಚ್ಚರಿಸಿದರು, ಇಲ್ಲದಿದ್ದರೆ ದೇಶ ಮುಳುಗಬಹುದು ಎಂದು ಎಚ್ಚರಿಸಿದರು. ಪಾಕಿಸ್ತಾನದ ಸಮಸ್ಯೆಗಳಿಗೆ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಯೊಂದೇ ಪರಿಹಾರ, ಆದರೆ ಸೋಲುವ ಭೀತಿಯಿಂದಾಗಿ ಸರ್ಕಾರ ಹೊಸ ಚುನಾವಣೆಗಳಿಗೆ ಹೆದರುತ್ತಿದೆ ಎಂದು ಹೇಳಿದರು.
ಎರಡೂ ವಿಧಾನಸಭೆಗಳನ್ನು ವಿಸರ್ಜಿಸಿದ ನಂತರ ನಾವು ಪ್ರಾಂತ್ಯಗಳಲ್ಲಿ ಚುನಾವಣೆ ನಡೆಸಲಿದ್ದೇವೆ. ಅಲ್ಲದೆ, ನಮ್ಮ 123 ಮತ್ತು 125ನೇ ಸಂಖ್ಯೆಯ ಕ್ಷೇತ್ರದ ರಾಷ್ಟ್ರೀಯ ಅಸೆಂಬ್ಲಿ ಸದಸ್ಯರು ನೀಡಿರುವ ರಾಜೀನಾಮೆಗಳನ್ನು ಅಂಗೀಕರಿಸಲಾಗಿಲ್ಲ. ಅವನ್ನು ಅಂಗೀಕರಿಸುವಂತೆ ವಿಧಾನಸಭೆಯ ಸ್ಪೀಕರ್ ಮನವಿ ಮಾಡುತ್ತೇವೆ ಎಂದು ಅವರು ಹೇಳಿದರು.
ವಿಧಾನಸಭೆಗಳನ್ನು ವಿಸರ್ಜಿಸಿದ ನಂತರ ಪಿಟಿಐನ ಕ್ರಿಯಾ ಯೋಜನೆಯ ಬಗ್ಗೆ ಮಾತನಾಡಿದ ಅವರು, ನಂತರ ನಾವು ಚುನಾವಣೆಗೆ ತಯಾರಿ ನಡೆಸುತ್ತೇವೆ ಮತ್ತು ರಾಷ್ಟ್ರೀಯ ಅಸೆಂಬ್ಲಿಯಲ್ಲಿ ನಮ್ಮ ಸುಮಾರು 130 ಸ್ಥಾನಗಳೊಂದಿಗೆ ನಾವು ನ್ಯಾಷನಲ್ ಅಸೆಂಬ್ಲಿ ಸ್ಪೀಕರ್ ಬಳಿಗೆ ಹೋಗುತ್ತೇವೆ ಮತ್ತು ಕೆಲವೇ ಜನರ ರಾಜೀನಾಮೆಗಳ ಬದಲಿಗೆ ನಮ್ಮ ಎಲ್ಲರ ರಾಜೀನಾಮೆಗಳನ್ನು ಅಂಗೀಕರಿಸುವಂತೆ ಒತ್ತಾಯಿಸುತ್ತೇವೆ ಎಂದರು.
ಪಾಕಿಸ್ತಾನದ ಜನರನ್ನು ಉದ್ದೇಶಿಸಿ ಮಾತನಾಡಿದ ಪಿಟಿಐ ಮುಖ್ಯಸ್ಥ, ಜನ ನಿರಾಶೆಯಾಗದಂತೆ ಮನವಿ ಮಾಡಿದರು. ನಿರಾಶೆ ಹೊಂದುವುದು ಎಂದರೆ ಸಮಾಜಕ್ಕಾಗಿ ನಾವು ಮಾಡಬೇಕಿರುವ ಕರ್ತವ್ಯದಿಂದ ದೂರ ಹೋದಂತೆ ಎಂದು ಅವರು ಹೇಳಿದರು. ಸರ್ಕಾರಕ್ಕೆ ಚುನಾವಣೆ ಮೂಲಕ ತಕ್ಕ ಪಾಠ ಕಲಿಸಬೇಕು ಎಂದ ಅವರು, ಈ ಕಳ್ಳರ ಹೆಸರು ಶಾಶ್ವತವಾಗಿ ಅಳಿಸಿಹೋಗುವಷ್ಟು ದೊಡ್ಡ ಸೋಲನ್ನು ಅವರಿಗೆ ನೀಡಬೇಕು ಎಂದರು.
ಇದನ್ನೂ ಓದಿ: ಭಾರತ ಹೊಗಳಿದ್ದ ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಮೇಲೆ ಗುಂಡಿನ ದಾಳಿ