ಬ್ಯೂನಸ್ ಐರಿಸ್: ಅರ್ಜೆಂಟೀನಾ ದೇಶದಲ್ಲಿ ಜನವರಿಯಲ್ಲಿ ಶೇ 98.8 ರಷ್ಟು ವರ್ಷದಿಂದ ವರ್ಷಕ್ಕೆ ಹಣದುಬ್ಬರ ಏರಿಕೆಯಾಗಿದೆ. ಹೊಸ ವರ್ಷ ಆರಂಭವಾದ ನಂತರ ಶೇ 6 ರಷ್ಟು ಮಾಸಿಕ ಬೆಲೆ ಹೆಚ್ಚಳದೊಂದಿಗೆ ಇಷ್ಟು ದೊಡ್ಡ ಪ್ರಮಾಣದಲ್ಲಿ ಹಣದುಬ್ಬರ ಹೆಚ್ಚಾಗಿದೆ ಎಂದು ನ್ಯಾಷನಲ್ ಇನ್ಸಿಟಿಟ್ಯೂಟ್ ಆಫ್ ಸ್ಟ್ಯಾಟಿಸ್ಟಿಕ್ಸ್ ಅಂಡ್ ಸೆನ್ಸಸ್ (INDEC) ವರದಿ ಮಾಡಿದೆ. ದೇಶದಲ್ಲಿ ಉಂಟಾದ ಈ ವಿಪರೀತ ಹಣದುಬ್ಬರದಿಂದ ಜನತೆ ಕಂಗಾಲಾಗಿದ್ದಾರೆ.
ಮನರಂಜನೆ ಮತ್ತು ಸಂಸ್ಕೃತಿ (ಶೇ 9), ಸಂವಹನ (ಶೇ 8), ವಸತಿ, ನೀರು, ಅನಿಲ, ವಿದ್ಯುತ್ ಮತ್ತು ಇತರ ಇಂಧನಗಳು (ಶೇ 8), ಆಹಾರ (ಶೇ 6.8), ಇತರ ವಲಯಗಳು ಜನವರಿಯಲ್ಲಿ ಹೆಚ್ಚಿನ ಬೆಲೆ ವ್ಯತ್ಯಾಸಗಳನ್ನು ಹೊಂದಿವೆ. ಸರಕು ಮತ್ತು ಸೇವೆಗಳು (ಶೇ 6.8) ಮತ್ತು ರೆಸ್ಟೋರೆಂಟ್‌ಗಳು ಮತ್ತು ಹೋಟೆಲ್‌ಗಳು (ಶೇ 6.2 ಶೇಕಡಾ) ರಷ್ಟು ಹಣದುಬ್ಬರ ದಾಖಲಿಸಿವೆ ಎಂದು INDEC ಡೇಟಾವನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.
ಮೇಲಿನ ಸರಕು ಹಾಗೂ ಸೇವೆ ಮಾತ್ರವಲ್ಲದೇ ಸಾರಿಗೆ (ಶೇ 5.9), ಗೃಹೋಪಯೋಗಿ ಉಪಕರಣಗಳು ಮತ್ತು ನಿರ್ವಹಣೆ (ಶೇ 5.4) ಮತ್ತು ಆರೋಗ್ಯ (ಶೇ 4.9) ವಲಯಗಳು ಕೂಡ ಮಾಸಿಕ ಏರಿಕೆಗಳನ್ನು ವರದಿ ಮಾಡಿವೆ. ಕಳೆದ 12 ತಿಂಗಳುಗಳಲ್ಲಿ ಬಟ್ಟೆ ಮತ್ತು ಪಾದರಕ್ಷೆಗಳು (ಶೇ 120.6), ರೆಸ್ಟೋರೆಂಟ್‌ಗಳು ಮತ್ತು ಹೋಟೆಲ್‌ಗಳು (ಶೇ 109.9), ವಿವಿಧ ಸರಕುಗಳು ಮತ್ತು ಸೇವೆಗಳು (ಶೇ 102.6) ಕ್ಷೇತ್ರಗಳಲ್ಲಿ ಕೂಡ ಬೆಲೆಗಳು ಹೆಚ್ಚಾಗಿವೆ. ಏತನ್ಮಧ್ಯೆ, ಐಎನ್‌ಡಿಇಸಿ ಪ್ರಕಾರ ಆಹಾರ ಶೇಕಡಾ 98.4, ಆರೋಗ್ಯ ಶೇಕಡಾ 92.3, ಸಾರಿಗೆ ಶೇಕಡಾ 92 ಮತ್ತು ವಸತಿ, ನೀರು, ಅನಿಲ, ವಿದ್ಯುತ್ ಮತ್ತು ಇತರ ಇಂಧನಗಳ ಬೆಲೆಗಳು ಶೇಕಡಾ 91.5 ರಷ್ಟು ಏರಿಕೆಯಾಗಿವೆ.
ಅರ್ಜೆಂಟೀನಾದ ಹೆಚ್ಚಿನ ಹಣದುಬ್ಬರದ ದೃಷ್ಟಿಯಿಂದ, ಮೂಲ ಸರಕು ಮತ್ತು ಸೇವೆಗಳ ಮೌಲ್ಯದಲ್ಲಿ ಮಧ್ಯಮ ದರದ ಹೆಚ್ಚಳವನ್ನು ಖಾತರಿಪಡಿಸಲು ಸರ್ಕಾರವು ಸಮಗ್ರ ಬೆಲೆ ನಿಯಂತ್ರಣ ಕಾರ್ಯಕ್ರಮವನ್ನು ಜಾರಿಗೆ ತಂದಿದೆ. ಫೆಬ್ರವರಿ ಆರಂಭದಲ್ಲಿ ಸೆಂಟ್ರಲ್ ಬ್ಯಾಂಕ್ ಆಫ್ ಅರ್ಜೆಂಟೀನಾ ಬಿಡುಗಡೆ ಮಾಡಿದ ಮಾರುಕಟ್ಟೆ ಅಧ್ಯಯನದ ಪ್ರಕಾರ, ದೇಶದಲ್ಲಿ ಹಣದುಬ್ಬರವು 2023 ರಲ್ಲಿ ಶೇಕಡಾ 97.6 ಕ್ಕೆ ತಲುಪುತ್ತದೆ ಎಂದು ಮುನ್ಸೂಚನೆ ನೀಡಲಾಗಿದೆ.
ಹಣದುಬ್ಬರವು ಸರಕು ಮತ್ತು ಸೇವೆಗಳ ಬೆಲೆಗಳು ಎಷ್ಟು ವೇಗವಾಗಿ ಏರುತ್ತಿವೆ ಎಂಬುದರ ಅಳತೆಗೋಲಾಗಿದೆ. ಹಣದುಬ್ಬರ ಉಂಟಾದಾಗ ಆಹಾರದಂತಹ ಮೂಲಭೂತ ಅವಶ್ಯಕತೆಗಳ ಬೆಲೆಯೇರಿಕೆಗೆ ಕಾರಣವಾಗುತ್ತದೆ. ಇದು ಒಟ್ಟಾರೆ ಆರ್ಥಿಕತೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು. ವಸತಿ, ಆಹಾರ, ವೈದ್ಯಕೀಯ ಆರೈಕೆ, ಅಗತ್ಯ ಆಧಾರಿತ ವೆಚ್ಚಗಳು, ಸೌಂದರ್ಯವರ್ಧಕಗಳು, ಆಟೋಮೊಬೈಲ್ಗಳು ಮತ್ತು ಆಭರಣಗಳಂತಹ ವೆಚ್ಚಗಳು ಸೇರಿದಂತೆ ಯಾವುದೇ ಉತ್ಪನ್ನ ಅಥವಾ ಸೇವೆಯಲ್ಲಿ ಹಣದುಬ್ಬರ ಸಂಭವಿಸಬಹುದು. ಹಣದುಬ್ಬರವು ಇಂದು ಉಳಿಸಿದ ಹಣವನ್ನು ನಾಳೆ ಕಡಿಮೆ ಮೌಲ್ಯಯುತವಾಗಿಸುವುದರಿಂದ ಇದು ಕಳವಳಕಾರಿಯಾಗಿದೆ. ಹಣದುಬ್ಬರವು ಗ್ರಾಹಕರ ಕೊಳ್ಳುವ ಶಕ್ತಿಯನ್ನು ಕುಗ್ಗಿಸುತ್ತದೆ ಮತ್ತು ನಿವೃತ್ತಿ ಹೊಂದುವ ಸಾಮರ್ಥ್ಯವನ್ನು ಸಹ ಅಡ್ಡಿಪಡಿಸಬಹುದು. ಕೆಲವು ಕಂಪನಿಗಳು ತಮ್ಮ ಸರಕುಗಳಿಗೆ ಹೆಚ್ಚಿನ ಬೇಡಿಕೆಯ ಪರಿಣಾಮವಾಗಿ ತಮ್ಮ ಉತ್ಪನ್ನಗಳಿಗೆ ಹೆಚ್ಚಿನ ಶುಲ್ಕ ವಿಧಿಸಿದರೆ ಹಣದುಬ್ಬರದಿಂದ ಹೆಚ್ಚು ಲಾಭ ಮಾಡಿಕೊಳ್ಳಬಹುದು.
ಇದನ್ನೂ ಓದಿ: ಬಜೆಟ್ನಲ್ಲಿ ಹಣದುಬ್ಬರ, ಮನರೇಗಾ ಉಲ್ಲೇಖವೇ ಇಲ್ಲ.. ಇದು ಮಿತ್ರರ ಬಜೆಟ್ ಎಂದ ರಾಹುಲ್ ಗಾಂಧಿ