ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಶಾಶ್ವತವಲ್ಲದ ಸ್ಥಾನದ ಹೊಸ ಸದಸ್ಯ ದೇಶಗಳಾಗಿ ಈಕ್ವೆಡಾರ್, ಜಪಾನ್, ಮಾಲ್ಟಾ, ಮೊಜಾಂಬಿಕ್ ಮತ್ತು ಸ್ವಿಟ್ಜರ್ಲೆಂಡ್ ಆಯ್ಕೆಯಾಗಿವೆ. ಈ ದೇಶಗಳು ಎರಡು ವರ್ಷಗಳ ಅವಧಿಗೆ ವಿಶ್ವಸಂಸ್ಥೆ ಸೇರಿಕೊಂಡಿವೆ. ಮೊಜಾಂಬಿಕ್ ರಾಯಭಾರಿ ಒಎಟ್ರಿ ಕೊಮಿಸ್ಸರಿಯೊ ಅಫೊನ್ಸೊ ಈ ಬೆಳವಣಿಗೆಯನ್ನು ಐತಿಹಾಸಿಕವೆಂದು ಬಣ್ಣಿಸಿದ್ದಾರೆ.
ಸ್ವಿಸ್ ರಾಯಭಾರಿ ಪಾಸ್ಕೇಲ್ ಬೇರಿ ಸ್ವಿಲ್ ಪ್ರತಿಕ್ರಿಯಿಸಿ, ಶಕ್ತಿಶಾಲಿ ಮಂಡಳಿಗೆ ಇದೇ ಮೊದಲ ಬಾರಿಗೆ ತಮ್ಮನ್ನು ಆಯ್ಕೆ ಮಾಡಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. ಮಾಲ್ಟಾ ಎರಡನೇ ಬಾರಿಗೆ ಭದ್ರತಾ ಮಂಡಳಿ ಸೇರಿಕೊಂಡಿದೆ. ಈಕ್ವೆಡಾರ್ ನಾಲ್ಕನೇ ಮತ್ತು ಜಪಾನ್ ದಾಖಲೆಯ 12ನೇ ಬಾರಿಗೆ ಈ ಸ್ಥಾನ ಪಡೆದಿದೆ.
ಎರಡು ವರ್ಷಕ್ಕೆ 10 ಸದಸ್ಯರ ನೇಮಕ: ಚೀನಾ, ಫ್ರಾನ್ಸ್, ರಷ್ಯಾ, ಬ್ರಿಟನ್ ಮತ್ತು ಅಮೆರಿಕ ವಿಶ್ವ ಸಂಸ್ಥೆಯ ಭದ್ರತಾ ಮಂಡಳಿಯ ಖಾಯಂ ಸದಸ್ಯರು. ಇವರಿಗೆ ವಿಟೊ ಅಧಿಕಾರವಿದೆ. 193 ರಾಷ್ಟ್ರಗಳ ಸಾಮಾನ್ಯ ಸಭೆಯ ನಂತರ ಇದರ 10 ಸದಸ್ಯರನ್ನು ಎರಡು ವರ್ಷಗಳ ಅವಧಿಗೆ ಆಯ್ಕೆ ಮಾಡಲಾಗುತ್ತದೆ. ವಿಶ್ವಸಂಸ್ಥೆಯ ಖಾಯಂ ಅಲ್ಲದ 10 ಸದಸ್ಯ ರಾಷ್ಟ್ರಗಳನ್ನು ವಿಶ್ವಸಂಸ್ಥೆಯ ಸಾಮಾನ್ಯ ಸಭೆ ಎರಡು ವರ್ಷದ ಅವಧಿಗೆ ಚುನಾಯಿಸುತ್ತದೆ. ಅವರಿಗೆ ಜಾಗತಿಕ ಪ್ರದೇಶಗಳನ್ನು ನೀಡಲಾಗುತ್ತದೆ. ಅನೇಕ ದೇಶಗಳು ಭದ್ರತಾ ಮಂಡಳಿಯಲ್ಲಿ ಸ್ಥಾನ ಪಡೆಯುವುದನ್ನು ರಾಜತಾಂತ್ರಿಕ ಸಾಧನೆ ಎಂದು ಪರಿಗಣಿಸುತ್ತದೆ. ಇದು ಜಾಗತಿಕ ಮಟ್ಟದಲ್ಲಿ ರಾಷ್ಟ್ರದ ವರ್ಚಸ್ಸು ಹೆಚ್ಚಿಸುತ್ತದೆ. ಅಲ್ಲದೇ ಸಣ್ಣ ರಾಷ್ಟ್ರಗಳಿಗೆ ಒಂದು ದೊಡ್ಡ ಧ್ವನಿ ಸಿಕ್ಕಂತೆ ಆಗುತ್ತದೆ.
ಧ್ವನಿ ಎತ್ತಲು ಸಣ್ಣ ದೇಶಗಳಿಗೆ ದೊಡ್ಡ ಅವಕಾಶ: ಯುಎನ್ ಭದ್ರತಾ ಮಂಡಳಿ ಶಾಂತಿಪಾಲನಾ ಕಾರ್ಯಾಚರಣೆಗಳನ್ನು ನಿಯೋಜಿಸುತ್ತದೆ. ದೇಶಗಳ ಮೇಲೆ ನಿರ್ಬಂಧಗಳನ್ನು ಅನುಮೋದಿಸುತ್ತದೆ. ಕೆಲವೊಮ್ಮೆ ಸಂಘರ್ಷಗಳ ಕುರಿತು ಧ್ವನಿ ಎತ್ತುತ್ತದೆ. ಭಯೋತ್ಪಾದನೆ ಮತ್ತು ಶಸ್ತ್ರಾಸ್ತ್ರ ನಿಯಂತ್ರಣದಂತಹ ಸಮಸ್ಯೆಗಳನ್ನು ಸಹ ಸಮೀಕ್ಷೆ ಮಾಡುತ್ತದೆ.
ಇನ್ನೂ 60 ರಾಷ್ಟ್ರಗಳು ಈ ಸ್ಥಾನವನ್ನೇ ಪಡೆದಿಲ್ಲ: ಮಂಡಳಿಗಾಗಿ ದೇಶಗಳು ಹಲವು ವರ್ಷಗಳ ಪ್ರಚಾರ ನಡೆಸುತ್ತವೆ. 1946ರಲ್ಲಿ ಸ್ಥಾಪನೆಯಾದ ಈ ಗುಂಪಿನಲ್ಲಿ 60 ರಾಷ್ಟ್ರಗಳು ಸ್ಥಾನವನ್ನೇ ಪಡೆದಿಲ್ಲ. ಭಾರತ, ಐರ್ಲೆಂಡ್, ಕೀನ್ಯಾ, ಮೆಕ್ಸಿಕೋ ಮತ್ತು ನಾರ್ವೆಯ ಇತ್ತೀಚಿನ ಸದಸ್ಯರಾಗಿದ್ದು, ಇವರ ಅವಧಿ ಡಿಸೆಂಬರ್ 31ರಂದು ಕೊನೆಗೊಂಡಿದೆ. ಎರಡು ವರ್ಷದ ಅವಧಿಗೆ ನೇಮಕವಾದ ಇತರೆ ಸದಸ್ಯರೆಂದರೆ ಅಲ್ಬೇನಿಯಾ, ಬ್ರೆಜಿಲ್, ಗ್ಯಾಬೊನ್, ಘಾನಾ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್.
ಇದನ್ನೂ ಓದಿ: 2023: ವಿಶ್ವದಲ್ಲೇ ಮೊದಲು ಹೊಸ ವರ್ಷ ಅದ್ಧೂರಿಯಾಗಿ ಬರಮಾಡಿಕೊಂಡ ನ್ಯೂಜಿಲೆಂಡ್