ಬೀಜಿಂಗ್(ಚೀನಾ): ಮಧ್ಯ ಚೀನಾ ಭಾಗದಲ್ಲಿರುವ ಝೆಂಗ್‌ಝೌ ಪ್ರಾಂತ್ಯದಲ್ಲಿ ಕೋವಿಡ್ ನಿರ್ಬಂಧ ಕ್ರಮಗಳಿಂದಾಗಿ ಐಫೋನ್ ತಯಾರಿಕಾ ಕಾರ್ಖಾನೆಗಳು ಸಂಕಷ್ಟ ಎದುರಿಸುತ್ತಿವೆ. ಹೀಗಾಗಿ ಗ್ರಾಹಕರಿಗೆ ಲೇಟೆಸ್ಟ್ ಐಫೋನ್‌ಗಳ ಪೂರೈ ವಿಳಂಬವಾಗಲಿದೆ ಎಂದು ಆ್ಯಪಲ್ ಕಂಪನಿ ತಿಳಿಸಿದೆ.
ಆದ್ರೆ ಚೀನಾದಲ್ಲಿ ಕೋವಿಡ್ ನಿರ್ಬಂಧ ಕ್ರಮಗಳಿಂದ ಉಂಟಾಗುತ್ತಿರುವ ತೊಡಕುಗಳ ಬಗ್ಗೆ ಐಫೋನ್ ತಯಾರಿಸುತ್ತಿರುವ ಫಾಕ್ಸ್‌ಕಾನ್ ಕಂಪನಿಯು ಉತ್ಪಾದನೆ ಮತ್ತು ಪೂರೈಕೆಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿರಲಿಲ್ಲ. ಆದರೆ ಅಲ್ಲಿನ ಸರ್ಕಾರದ ಬಿಗಿ ನಿಲುವುಗಳಿಂದ ಕಾರ್ಖಾನೆಯು ಕಠಿಣ ನಿರ್ಬಂಧಗಳನ್ನು ಏಕಾಏಕಿ ವಿಧಿಸಿದ್ದು ಉತ್ಪಾದನಾ ಸಾಮರ್ಥ್ಯ ಕಡಿಮೆಯಾಗಲು ಕಾರಣ ಎಂದು ಹೇಳಲಾಗುತ್ತಿದೆ.
ಕಾರ್ಖಾನೆಗೆ ಬರುವ ಪ್ರತಿ ಕೆಲಸಗಾರನ ಆರೋಗ್ಯ ಮತ್ತು ಸುರಕ್ಷತೆಯನ್ನು ಖಾತ್ರಿಪಡಿಸಿದ ನಂತರವೇ ಆತ ಉತ್ಪಾದನಾ ಘಟಕ ಪ್ರವೇಶಿಸಲು ಅನುಮತಿ ನೀಡಲಾಗುತ್ತದೆ. ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳಿಂದಾಗಿ ಗ್ರಾಹಕರು ಇತ್ತೀಚಿನ ಐಫೋನ್ 14 ಪ್ರೊ ಮತ್ತು ಐಫೋನ್ 14 ಪ್ರೊ ಮ್ಯಾಕ್ಸ್ ಮಾದರಿಯ ಮೊಬೈಲ್‌ಗಳನ್ನು ಪಡೆಯಲು ಹೆಚ್ಚು ಕಾಲಾವಕಾಶ ಬೇಕಾಗುತ್ತದೆ ಎಂದು ಆ್ಯಪಲ್ ಹೇಳಿದೆ.