ವಾಷಿಂಗ್ಟನ್: ಒಂದು ವೇಳೆ ಚೀನಾ ಆಕ್ರಮಣ ಮಾಡಿದಲ್ಲಿ ಅಮೆರಿಕ ಪಡೆಗಳು ತೈವಾನ್ ರಕ್ಷಿಸುತ್ತವೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ. ಈ ವಿಷಯದ ಬಗ್ಗೆ ಇದು ಅವರ ಅತ್ಯಂತ ಸ್ಪಷ್ಟ ಹೇಳಿಕೆಯಾಗಿದೆ.
ಭಾನುವಾರ ಪ್ರಸಾರವಾದ ಮಾಧ್ಯಮ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ಚೀನಾ ತನ್ನದು ಎಂದು ಹೇಳಿಕೊಳ್ಳುವ, ಪ್ರಜಾಸತ್ತಾತ್ಮಕ ಆಡಳಿತ ಹೊಂದಿರುವ ದ್ವೀಪರಾಷ್ಟ್ರವನ್ನು ಅಮೆರಿಕ ರಕ್ಷಿಸಲಿದೆಯೇ ಎಂಬ ಪ್ರಶ್ನೆಗೆ - ಹೌದು. ಅಂಥದೊಂದು ದಾಳಿ ನಡೆದರೆ ನಾವು ರಕ್ಷಣೆಗೆ ನಿಲ್ಲುತ್ತೇವೆ ಎಂದರು.
ಉಕ್ರೇನ್ ಸಂದರ್ಭದಲ್ಲಿ ಅಮೆರಿಕ ನಡೆದುಕೊಂಡಿದ್ದಕ್ಕಿಂತ ಭಿನ್ನವಾಗಿ ಅಮೆರಿಕ ಪಡೆಗಳು ತೈವಾನ್ ಅನ್ನು ರಕ್ಷಿಸುತ್ತವೆ ಎಂಬುದು ನಿಮ್ಮ ಮಾತಿನ ಅರ್ಥವೇ ಎಂದು ಕೇಳಿದಾಗ - ಹೌದು ಎಂದು ಉತ್ತರಿಸಿದರು. ಅಮೆರಿಕವು ದೀರ್ಘಕಾಲದಿಂದ ಅಸ್ಪಷ್ಟ ಕಾರ್ಯತಂತ್ರದ ನೀತಿಗೆ ಅಂಟಿಕೊಂಡಿದೆ ಮತ್ತು ತೈವಾನ್ ಮೇಲಿನ ದಾಳಿಗೆ ಮಿಲಿಟರಿ ರೂಪದಲ್ಲಿ ಪ್ರತಿಕ್ರಿಯಿಸುತ್ತದೆಯೇ ಎಂಬುದು ಸ್ಪಷ್ಟವಾಗುತ್ತಿಲ್ಲ.
ಈ ವರ್ಷದ ಆರಂಭದಲ್ಲಿ ಟೋಕಿಯೊ ಸೇರಿದಂತೆ ಇನ್ನೂ ಕೆಲವೆಡೆ ಅಧ್ಯಕ್ಷರು ಇದನ್ನು ಹೇಳಿದ್ದಾರೆ. ನಮ್ಮ ತೈವಾನ್ ನೀತಿಯು ಬದಲಾಗಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ, ಅದು ನಿಜ ಎಂದು ವೈಟ್ ಹೌಸ್ ವಕ್ತಾರರೊಬ್ಬರು ಹೇಳಿದರು. ತನ್ನನ್ನು ರಕ್ಷಿಸುವುದಾಗಿ ಹೇಳಿದ ಅಮೆರಿಕಕ್ಕೆ ತೈವಾನ್ ಧನ್ಯವಾದ ತಿಳಿಸಿದೆ.
ತೈವಾನ್ ರಕ್ಷಣೆಗೆ ಮಿಲಿಟರಿ ಕಾರ್ಯಾಚರಣೆಯಲ್ಲಿ ತೊಡಗಲು ಅಮೆರಿಕ ಸಿದ್ಧವಿದೆಯಾ ಎಂದು ಮೇ ತಿಂಗಳಲ್ಲಿ ಕೇಳಿದ ಪ್ರಶ್ನೆಗೆ, ಹೌದು.. ಅದು ನಮ್ಮ ಬದ್ಧತೆಯಾಗಿದೆ ಎಂದು ಹೇಳಿದ್ದರು.
ಇದನ್ನು ಓದಿ: ಇರಾನ್ನಲ್ಲಿ ಭಾರಿ ಪ್ರತಿಭಟನೆ: ಕೂದಲನ್ನು ಕತ್ತರಿಸಿ, ಹಿಜಾಬ್ ಸುಟ್ಟು ಮಹಿಳೆಯರ ಆಕ್ರೋಶ