ಬೊಗೋಟಾ (ಕೊಲಂಬಿಯಾ): ಗೂಳಿ ಕಾಳಗದ ವೇಳೆ ಕಟ್ಟಿಗೆಗಳಿಂದ ನಿರ್ಮಿಸಲಾದ ಸ್ಟ್ಯಾಂಡ್‌ನ ಮೇಲೆ ಪ್ರೇಕ್ಷಕರು ನಿಂತಿದ್ದರು. ಈ ವೇಳೆ ಸ್ಟ್ಯಾಂಡ್‌ನ ಒಂದು ಭಾಗ ಕುಸಿದು, ಸ್ಥಳದಲ್ಲೇ ನಾಲ್ವರು ಸಾವನ್ನಪ್ಪಿರುವ ಘಟನೆ ಮಧ್ಯ ಕೊಲಂಬಿಯಾದಲ್ಲಿ ಭಾನುವಾರ ನಡೆದಿದೆ. ಸಂಭವಿಸಿದ ಈ ದುರಂತದಲ್ಲಿ ಸುಮಾರು 30 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಟೋಲಿಮಾ ರಾಜ್ಯದ ಎಲ್ ಎಸ್ಪಿನಾಲ್ ನಗರದ ಕ್ರೀಡಾಂಗಣದಲ್ಲಿ ‘ಕೊರ್ರಲೆಜಾ’ ಎಂಬ ಸಾಂಪ್ರದಾಯಿಕ ಗೂಳಿ ಕಾಳಗ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ವೇಳೆ, ಗೂಳಿಗಳನ್ನು ಹಿಡಿಯಲು ಸಾರ್ವಜನಿಕರು ರಿಂಗ್ ಪ್ರವೇಶಿಸುತ್ತಾರೆ. ರೋಮಾಂಚನಕವಾದ ಸನ್ನಿವೇಶವನ್ನು ನೋಡಲು ಮೂರು ಅಂತಸ್ತಿನ ಕಟ್ಟಿಗೆ ಸ್ಟ್ಯಾಂಡ್ಗಳನ್ನು ನಿರ್ಮಿಸಲಾಗಿದೆ. ಗೂಳಿ ಕಾಳಗವನ್ನು ವೀಕ್ಷಿಸಲು ಆಗಮಿಸಿದ ಪ್ರೇಕ್ಷಕರು ಈ ಸ್ಟ್ಯಾಂಡ್ಗಳ ಮೇಲೆ ನಿಂತು ಎಂಜಾಯ್ ಮಾಡುತ್ತಿದ್ದರು. ಆದರೆ, ಈ ಸಂದರ್ಭದಲ್ಲಿ ದುರಂತ ಸಂಭವಿಸಿದೆ.
ಓದಿ: ಕೋಳಿ, ಟಗರು, ಗೂಳಿ ಕಾಳಗ ಆಯ್ತು, ಈಗ ಹೊಸ ಟ್ರೆಂಡ್ ಹಂದಿ ಕಾಳಗ!
ಪ್ರೇಕ್ಷಕರ ಭಾರಕ್ಕೆ ಸ್ಟ್ಯಾಂಡ್‌ನ ಒಂದು ಭಾಗ ಕುಸಿದಿದ್ದು, ಈ ವೇಳೆ ಜನರು ನೆಲಕ್ಕೆ ಬಿದ್ದಿದ್ದಾರೆ. ಈ ಸಂದರ್ಭದಲ್ಲಿ ಸ್ಥಳದಲ್ಲೇ ನಾಲ್ವರು ಸಾವನ್ನಪ್ಪಿದ್ದು, 30ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಇದಕ್ಕೆ ಸಂಬಂಧಪಟ್ಟ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಪ್ರೇಕ್ಷಕರ ಕಿರುಚಾಟ ಮತ್ತು ನರಳಾಟವನ್ನು ನೋಡಬಹುದಾಗಿದೆ.
ಗೂಳಿ ಕಾಳಗದ ವೇಳೆ ದುರಂತ ಸಂಭವಿಸಿದ್ದು, ಇಬ್ಬರು ಮಹಿಳೆಯರು ಸೇರಿದಂತೆ ನಾಲ್ವರು ಸಾವನ್ನಪ್ಪಿದ್ದಾರೆ. 30ಕ್ಕೂ ಹೆಚ್ಚು ಮಂದಿ ಗಾಯಗಳಾಗಿದ್ದು, ನಾವು ಗಾಯಾಳುಗಳನ್ನು ಟೋಲಿಮಾ ಆಸ್ಪತ್ರೆಗೆ ದಾಖಲಿಸಿದ್ದೇವೆ. ಈ ಘಟನೆ ಕುರಿತು ತನಿಖೆ ಕೈಗೊಳ್ಳಲಾಗಿದೆ ಎಂದು ಟೋಲಿಮಾ ಗವರ್ನರ್ ಜೋಸ್ ರಿಕಾರ್ಡೊ ಒರೊಜ್ಕೊ ಸ್ಥಳೀಯ ಮಾಧ್ಯಮಗಳಿಗೆ ತಿಳಿಸಿದ್ದಾರೆ.