ಬುರ್ಕಿನಾ ಫಾಸೊ(ಪಶ್ಚಿಮ ಆಪ್ರಿಕಾ): ಪಶ್ಚಿಮ ಆಫ್ರಿಕಾದ ಜಿಹಾದಿ ಪೀಡಿತ ಬುರ್ಕಿನಾ ಫಾಸೊ ದೇಶದಲ್ಲಿ ಅಗತ್ಯ ಸಾಮಗ್ರಿಗಳನ್ನು ಸಾಗಿಸುತ್ತಿದ್ದ ಬೆಂಗಾವಲು ವಾಹನವೊಂದು ಸುಧಾರಿತ ಸ್ಫೋಟಕ ಸಾಧನ (ಐಇಡಿ)ಕ್ಕೆ ಗುದ್ದಿದ ಪರಿಣಾಮ ಭಾರಿ ಸ್ಫೋಟ ಸಂಭವಿಸಿದೆ. ಸೋಮವಾರ ನಡೆದ ಘಟನೆಯಲ್ಲಿ ವಾಹನದಲ್ಲಿದ್ದ ಕನಿಷ್ಠ 35 ನಾಗರಿಕರು ಸಾವನ್ನಪ್ಪಿದ್ದು, 37 ಮಂದಿ ಗಾಯಗೊಂಡಿದ್ದಾರೆ.
ಪ್ರಾದೇಶಿಕ ಗವರ್ನರ್ ರೊಡಾಲ್ಫ್ ಸೊರ್ಗೊ ಮಾಹಿತಿ ನೀಡಿದ್ದು, ಜಿಬೋ ಮತ್ತು ಬೌರ್ಜಾಂಗಾ ನಡುವೆ ಘಟನೆ ಸಂಭವಿಸಿದೆ. ಮಿಲಿಟರಿ ನೇತೃತ್ವದ ಬೆಂಗಾವಲು ಪಡೆಯ ವಾಹನ ದೇಶದ ಉತ್ತರ ಭಾಗದಿಂದ ಬುರ್ಕಿನಾ ಫಾಸೊ ರಾಜಧಾನಿ ಔಗಡೌಗೌಗೆ ಅಗತ್ಯ ವಸ್ತುಗಳನ್ನು ಸರಬರಾಜು ಮಾಡುತ್ತಿತ್ತು. ಈ ಸಂದರ್ಭದಲ್ಲಿ ಸ್ಫೋಟ ಸಂಭವಿಸಿದೆ.
ಬೆಂಗಾವಲು ವಾಹನದಲ್ಲಿ ನಾಗರಿಕರು, ಚಾಲಕರು ಹಾಗೂ ವ್ಯಾಪಾರಿಗಳು ಸಂಚರಿಸುತ್ತಿದ್ದ ಕಾರಣ ಹೆಚ್ಚು ಸಾವುನೋವು ಸಂಭವಿಸಿದೆ. ಬೇರೆ ಬೆಂಗಾವಲು ವಾಹನದಲ್ಲಿದ್ದ ಸೈನಿಕರು ತಕ್ಷಣ ಗಾಯಾಳುಗಳ ರಕ್ಷಣೆಗೆ ಕ್ರಮ ತೆಗೆದುಕೊಂಡಿದ್ದಾರೆ. ಟ್ರಕ್ ಹಾಗೂ ಸಾರ್ವಜನಿಕ ಸಾರಿಗೆ ಬಸ್ಗಳು ಸೇರಿದಂತೆ ಹಲವಾರು ವಾಹನಗಳಿಗೆ ಹಾನಿಯಾಗಿವೆ. ಸಾವನ್ನಪ್ಪಿದವರಲ್ಲಿ ಔಗಡೌಗೌಗೆ ವಸ್ತುಗಳನ್ನು ಖರೀದಿಸಲು ಹೋಗುತ್ತಿದ್ದ ವ್ಯಾಪಾರಿಗಳು ಮತ್ತು ಮುಂದಿನ ಶಾಲಾ ವರ್ಷಕ್ಕೆ ರಾಜಧಾನಿಗೆ ಹಿಂದಿರುಗುತ್ತಿದ್ದ ವಿದ್ಯಾರ್ಥಿಗಳೂ ಇದ್ದರು ಎಂದು ಜಿಬೋ ನಿವಾಸಿಗಳು ತಿಳಿಸಿದ್ದಾರೆ.
ರಕ್ತ ಚರಿತ್ರೆ: ಕಳೆದ ಏಳು ವರ್ಷಗಳಿಂದ ಪಶ್ಚಿಮ ಆಫ್ರಿಕಾದ ಈ ದೇಶ ಇಸ್ಲಾಂ ಜಿಹಾದಿಗಳ ಹಿಡಿತದಲ್ಲಿದೆ. ಈ ರೀತಿಯ ಸ್ಫೋಟಗಳನ್ನು ಎದುರಿಸುತ್ತಲೇ ಇದ್ದು ಇದುವರೆಗೆ 2,000ಕ್ಕೂ ಹೆಚ್ಚು ಜೀವನಗಳನ್ನು ಬಲಿ ತೆಗೆದುಕೊಂಡಿದೆ. 19 ಲಕ್ಷ ಜನರು ತಮ್ಮ ಮನೆಗಳನ್ನು ತೊರೆದಿದ್ದಾರೆ. ಇಸ್ಲಾಂ ಜಿಹಾದಿ ಗುಂಪುಗಳು ಇತ್ತೀಚೆಗೆ ಉತ್ತರದ ಪ್ರಮುಖ ನಗರಗಳಾದ ಡೋರಿ ಮತ್ತು ಜಿಬೋಗೆ ಹೋಗುವ ಪ್ರಮುಖ ರಸ್ತೆಗಳ ಮೇಲೆ ಇದೇ ರೀತಿಯ ದಾಳಿಗಳನ್ನು ನಡೆಸಿವೆ. ಆಗಸ್ಟ್ ಆರಂಭದಲ್ಲಿ, ಅದೇ ಪ್ರದೇಶದಲ್ಲಿ 15 ಸೈನಿಕರು ಅವಳಿ ಐಇಡಿ ಸ್ಫೋಟದಲ್ಲಿ ಸಾವನ್ನಪ್ಪಿದ್ದರು.
ಇದನ್ನೂ ಓದಿ: ಬುರ್ಕಿನಾ ಫಾಸೋದಲ್ಲಿ ಜಿಹಾದಿ ದಾಳಿಗೆ 22 ಮಂದಿ ಬಲಿ, ನಿಲ್ಲದ ರಕ್ತದೋಕುಳಿ