ಮರಿಯುಪೊಲ್(ಉಕ್ರೇನ್): ರಷ್ಯಾ ಸೇನಾ ಪಡೆಗಳು ಉಕ್ರೇನ್ ಮೇಲಿನ ದಾಳಿಯನ್ನು ತೀವ್ರಗೊಳಿಸಿವೆ. ಉಕ್ರೇನ್‌ನ ಆಗ್ನೇಯ ಭಾಗದಲ್ಲಿರುವ ಮರಿಯುಪೊಲ್ ನಗರದ ಥಿಯೇಟರ್ ಮೇಲೆ ನಡೆದ ಭೀಕರ ಬಾಂಬ್ ದಾಳಿಯಲ್ಲಿ, ಕನಿಷ್ಠ 300 ಮಂದಿ ನಾಗರಿಕರು ಸಾವನ್ನಪ್ಪಿದ್ದಾರೆ ಎಂದು ಎಎಫ್ಬಿ ನ್ಯೂಸ್ ಏಜೆನ್ಸಿ ವರದಿ ಮಾಡಿದೆ. ರಷ್ಯಾದ ಶೆಲ್ ದಾಳಿಯಿಂದ ಸಾವನ್ನಪ್ಪುವವರ ಸಂಖ್ಯೆ ಹೆಚ್ಚಾಗಿದ್ದು, ಮೃತದೇಹಗಳನ್ನು ಸಾಮೂಹಿಕವಾಗಿ ಹೂಳಲಾಗುತ್ತಿದೆ ಎಂದು ತಿಳಿದುಬಂದಿದೆ.
ಮಾರ್ಚ್ 16ರಂದು ಈ ದಾಳಿ ನಡೆದಿದ್ದು, ರಷ್ಯಾದ ಪಡೆಗಳು ಅತ್ಯಂತ ಶಕ್ತಿಶಾಲಿ ಬಾಂಬ್ ಅನ್ನು ಮರಿಯುಪೊಲ್‌ನ ಥಿಯೇಟರ್ ಮೇಲೆ ಹಾಕಿದ್ದವು. ಅಧಿಕಾರಿಗಳ ಮಾಹಿತಿ ಪ್ರಕಾರ ಮಕ್ಕಳು ಸೇರಿದಂತೆ ಒಂದು ಸಾವಿರಕ್ಕೂ ಹೆಚ್ಚು ಮಕ್ಕಳು ಯುದ್ಧದ ಕಾರಣದಿಂದಾಗಿ ಈ ಥಿಯೇಟರ್ನಲ್ಲಿ ಆಶ್ರಯ ಪಡೆದಿದ್ದರು. ಈ ದಾಳಿಯ ನಂತರ ಮರಿಯುಪೋಲ್ಗೆ ಉಕ್ರೇನ್‌ನ ಉಳಿದ ಭಾಗಗಳಿಂದ ಸಂಪರ್ಕ ಸಂಪೂರ್ಣವಾಗಿ ಕಡಿತಗೊಂಡಿದೆ ಎಂದು ತಿಳಿದುಬಂದಿದೆ.
ಮರಿಯುಪೊಲ್ ನಿವಾಸಿಗಳು ಹಸಿವಿನಿಂದ ಕಂಗಾಲಾಗಿದ್ದು, ಸಹಾಯಕ್ಕಾಗಿ ಅಲ್ಲಿನ ಸಿಟಿ ಕೌನ್ಸಿಲ್ ಮನವಿ ಮಾಡುತ್ತಿದೆ. ರಷ್ಯಾದ ಪಡೆಗಳು ಕದನ ವಿರಾಮ ಒಪ್ಪಂದಗಳನ್ನು ಉಲ್ಲಂಘಿಸುತ್ತಿರುವುದರಿಂದ ಮಾನವೀಯ ಕಾರಿಡಾರ್‌ಗಳನ್ನು ರಚಿಸಲು ಸಾಧ್ಯವಾಗದೇ ಇದ್ದು ಹಾಗೂ ನೆರವು ನೀಡಲು ಸರ್ಕಾರ ವಿಫಲವಾಗುತ್ತಿರುವ ಕಾರಣದಿಂದಾಗಿ ಅಲ್ಲಿನ ಜನರು ಆಹಾರ ಇಲ್ಲದೇ ನರಳುವ ಸ್ಥಿತಿಗೆ ತಲುಪಿದ್ದಾರೆ ಎಂದು ದಿ ಕೀವ್ ಇಂಡಿಪೆಂಡೆಂಟ್ ಟ್ವೀಟ್ ಮಾಡಿದೆ.
ಇದನ್ನೂ ಓದಿ: ರಷ್ಯಾ ಉಕ್ರೇನ್ ನಾಗರಿಕರನ್ನು ಅಪಹರಣ ಮಾಡುತ್ತಿದೆ: ಗಂಭೀರ ಆರೋಪ ಮಾಡಿದ ಕೀವ್