ವೆನೆಜುವೆಲಾ: ದಕ್ಷಿಣ ಅಮೆರಿಕದ ವೆನೆಜುವೆಲಾದಲ್ಲಿ ಭಾರಿ ಮಳೆಯಿಂದಾಗಿ ಉಂಟಾದ ಭೂಕುಸಿತದಲ್ಲಿ 22 ಮಂದಿ ಮೃತಪಟ್ಟರೆ, 50ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ.
ದೇಶದಲ್ಲಿ ಭಾರೀ ಮಳೆ ಸುರಿಯುತ್ತಿದ್ದು, ನದಿಗಳು ಉಕ್ಕಿ ಹರಿಯುತ್ತಿವೆ. ಇದರಿಂದ ಭೀಕರ ಪ್ರವಾಹ ಉಂಟಾಗಿದ್ದು, ಹಲವೆಡೆ ಭೂಕುಸಿತ ಉಂಟಾಗುತ್ತಿದೆ. ಈವರೆಗೂ ಕನಿಷ್ಠ 22 ಜನರು ದುರಂತದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. 50 ಕ್ಕೂ ಮಂದಿ ಕಣ್ಮರೆಯಾಗಿದ್ದಾರೆ. ನೈಸರ್ಗಿಕ ಸಂಪತ್ತು ಭಾರಿ ಪ್ರಮಾಣದಲ್ಲಿ ನಾಶವಾಗಿದೆ ಎಂದು ಅಲ್ಲಿನ ಸರ್ಕಾರ ತಿಳಿಸಿದೆ.
ಮಧ್ಯ ವೆನೆಜುವೆಲಾದ ಲಾಸ್ ಟೆಜೆರಿಯಾಸ್ ಪಟ್ಟಣದಲ್ಲಿ ಸಂಭವಿಸಿದ ಭೂಕುಸಿತದಿಂದ ಅತಿಹೆಚ್ಚು ಹಾನಿಯುಂಟಾಗಿದೆ. ಇತ್ತೀಚೆಗೆ ಸಂಭವಿಸಿದ ದುರ್ಘಟನೆಗಳಲ್ಲಿ ಇದು ಹೆಚ್ಚಿನ ಪ್ರಮಾಣದ್ದಾಗಿದ್ದು, ಅಪಾಯದಮಟ್ಟ ಮೀರಿ ಹರಿಯುತ್ತಿರುವ ನದಿಗಳಿಂದ ಭೀಕರ ಪ್ರವಾಹ ಉಂಟಾಗಿದೆ ಎಂದು ಉಪಾಧ್ಯಕ್ಷ ಡೆಲ್ಸಿ ರೋಡ್ರಿಗಸ್ ಹೇಳಿದ್ದಾರೆ.