ಟೆಲ್ ಅವೀವ್, ಇಸ್ರೇಲ್ : ಭಯೋತ್ಪಾದಕರ ದಾಳಿಯಲ್ಲಿ ಕನಿಷ್ಠ ಇಬ್ಬರು ಸಾವನ್ನಪ್ಪಿ ಮತ್ತು ಎಂಟು ಜನರು ಗಾಯಗೊಂಡಿರುವ ಘಟನೆ ಇಸ್ರೇಲ್‌ನ ಟೆಲ್ ಅವೀವ್‌ನಲ್ಲಿ ಗುರುವಾರ ರಾತ್ರಿ ನಡೆದಿದೆ. ಭಯೋತ್ಪಾದಕನ ಚಿತ್ರವನ್ನು ಇಸ್ರೇಲ್ ಪೊಲೀಸರು ಬಿಡುಗಡೆ ಮಾಡಿದ್ದಾರೆ.
ಟೆಲ್ ಅವೀವ್ ನಗರದ ಡಿಜೆನ್‌ಗಾಫ್ ಸ್ಟ್ರೀಟ್‌ನ ಹಲವು ಸ್ಥಳಗಳಲ್ಲಿ ಈ ಭಯೋತ್ಪಾದಕರ ದಾಳಿ ನಡೆದಿದೆ ಎಂದು ಪೊಲೀಸ್ ವಕ್ತಾರ ಎಲಿ ಲೆವಿ ಮಾಹಿತಿ ನೀಡಿದ್ದಾರೆ. ಟೆಲ್ ಅವಿವ್‌ನ ಅತ್ಯಂತ ಜನನಿಬಿಡ ಪ್ರದೇಶಗಳಲ್ಲಿ ಒಂದಾದ ಡಿಜೆನ್‌ಗಾಫ್ ಸ್ಟ್ರೀಟ್ ಕೆಫೆಗಳು ಮತ್ತು ಬಾರ್‌ಗಳಿಂದ ಕೂಡಿದೆ. ಈ ಪ್ರದೇಶದಲ್ಲಿ ಉಗ್ರನೋರ್ವ ಗುಂಡಿನ ದಾಳಿ ನಡೆಸಿದ್ದಾನೆ.
ಈ ವೇಳೆ ಹತ್ತು ಮಂದಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ನಂತರ ಚಿಕಿತ್ಸೆ ಫಲಕಾರಿಯಾಗದೇ ಇಬ್ಬರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಗಾಯಾಳುಗಳುಗಳಿಗೆ ಚಿಕಿತ್ಸೆ ಮುಂದುವರೆದಿದೆ ಎಂದು ಟೈಮ್ಸ್ ಆಫ್ ಇಸ್ರೇಲ್ ವರದಿ ಮಾಡಿದೆ.
ಮೃತಪಟ್ಟವರಿಗೆ ನನ್ನ ಸಂತಾಪಗಳನ್ನು ತಿಳಿಸುತ್ತೇನೆ. ಗಾಯಾಳುಗಳು ಸಂಪೂರ್ಣವಾಗಿ ಚೇತರಿಸಿಕೊಳ್ಳಲು ನಾನು ಪ್ರಾರ್ಥಿಸುತ್ತೇನೆ ಎಂದು ಪ್ರಧಾನಿ ನಫ್ತಾಲಿ ಬೆನೆಟ್ ಹೇಳಿಕೆ ನೀಡಿದ್ದು, ಭಯೋತ್ಪಾದಕನನ್ನು ಹಿಡಿಯಲು ಭದ್ರತಾ ಪಡೆಗಳು ಶೋಧ ಕಾರ್ಯಾಚರಣೆ ನಡೆಸುತ್ತಿವೆ.
ಭಯೋತ್ಪಾದಕ ಎಲ್ಲಿದ್ದರೂ ಅವನನ್ನು ಹಿಡಿಯುತ್ತೇವೆ. ಭಯೋತ್ಪಾದನಾ ಕೃತ್ಯಕ್ಕೆ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಸಹಕರಿಸಿದ ಎಲ್ಲರೂ ಬೆಲೆ ತೆರಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ಪೊಲೀಸರ ಪ್ರಕಾರ ಭಯೋತ್ಪಾದಕರು ತಲೆಮರೆಸಿಕೊಂಡಿದ್ದು, ನೂರಾರು ಪೊಲೀಸರು ನಗರದಾದ್ಯಂತ ಶೋಧ ಕಾರ್ಯಾಚರಣೆ ಆರಂಭಿಸಿದ್ದಾರೆ.
ಇಸ್ರೇಲ್ ಪೊಲೀಸರು ಶಂಕಿತ ವ್ಯಕ್ತಿಯ ಚಿತ್ರವನ್ನು ಬಿಡುಗಡೆ ಮಾಡಿ, ಈ ವ್ಯಕ್ತಿಯ ಕುರಿತು ಗೊತ್ತಾದರೆ ಮಾಹಿತಿ ನೀಡುವಂತೆ ಮನವಿ ಮಾಡಿದ್ದಾರೆ. ಶಂಕಿತ ವ್ಯಕ್ತಿ ಕಪ್ಪು ಶರ್ಟ್ ಮತ್ತು ಕಪ್ಪು ಶಾರ್ಟ್ಸ್ ಧರಿಸಿದ್ದು, ಅವನ ಬಳಿ ಪಿಸ್ತೂಲ್ ಇರುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಪಾಕ್ ಸುಪ್ರೀಂಕೋರ್ಟ್‌ನಲ್ಲಿ ಇಮ್ರಾನ್‌ಖಾನ್‌ಗೆ ಸೋಲು; 24 ಗಂಟೆಯೊಳಗೆ ವಿಶ್ವಾಸ ಮತಯಾಚಿಸಲು ಆದೇಶ!