ನಾಗೌರ್ (ರಾಜಸ್ಥಾನ): ಕೊರೊನಾ ಹಿನ್ನೆಲೆ ಕತಾರ್‌ನಲ್ಲಿ ಸಿಲುಕಿರುವ 300 ವಲಸೆ ಕಾರ್ಮಿಕರ ಗೋಳು ಹೇಳತೀರದಂತಾಗಿದೆ. ಕಳೆದ ಮೂರು ತಿಂಗಳಿನಿಂದ ತಮ್ಮ ವೇತನವನ್ನು ನೀಡಿಲ್ಲ. ಇದರಿಂದ ಬದುಕು ಸಂಕಷ್ಟಕ್ಕೆ ಸಿಲುಕಿದೆ ಎಂದು ಕಾರ್ಮಿಕರು ಆರೋಪಿಸಿದ್ದಾರೆ.
ಕತಾರ್‌ನಲ್ಲಿ ಕೆಲಸ ಮಾಡುವ ಸುಮಾರು 800 ಭಾರತೀಯರನ್ನು ದೋಹಾದ ಮೂರು ಶಿಬಿರಗಳಲ್ಲಿ ಇರಿಸಲಾಗಿದೆ. ಇದರಲ್ಲಿ ಹೆಚ್ಚಿನವರು ರಾಜಸ್ಥಾನದವರಾಗಿದ್ದಾರೆ. ಆದರೆ, ಎರಡು ಶಿಬಿರಗಳಲ್ಲಿರುವವರು ಸಂಬಳ ಮತ್ತು ಸರಿಯಾದ ಆಹಾರವನ್ನು ಪಡೆಯುತ್ತಿದ್ದರೆ, ಮೂರನೇ ಶಿಬಿರದಲ್ಲಿರುವವರು ವೇತನ ಮತ್ತು ಸರಿಯಾದ ಊಟವಿಲ್ಲದೆ ಬಳಲುತ್ತಿದ್ದಾರೆ ಎಂದು ಕಾರ್ಮಿಕರು ಆರೋಪಿಸಿದ್ದಾರೆ.
ಕಳೆದ ಮೂರು ತಿಂಗಳಿನಿಂದ ತಮ್ಮ ಶಿಬಿರದಲ್ಲಿದ್ದ 300 ಕಾರ್ಮಿಕರಿಗೆ ವೇತನ ದೊರೆತಿಲ್ಲ. ಸಹಾಯ ಪಡೆಯಲು ಸಹ ಅವಕಾಶ ನೀಡುತ್ತಿಲ್ಲ. ಮಾರ್ಚ್ 13 ರಿಂದ ಜೂನ್ 16 ರವರೆಗೆ ನಮ್ಮ ಸಂಬಳವನ್ನು ನಾವು ಸ್ವೀಕರಿಸಿಲ್ಲ. ನಮಗೆ ಸರಿಯಾದ ಆಹಾರವನ್ನು ಸಹ ನೀಡುತ್ತಿಲ್ಲ. ಕಾರ್ಮಿಕ ನ್ಯಾಯಾಲಯ, ಸ್ಥಳೀಯ ಪೊಲೀಸರು ಅಥವಾ ಭಾರತೀಯ ರಾಯಭಾರ ಕಚೇರಿಯನ್ನು ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ. ಕಾರಣ ನಮಗೆ ಶಿಬಿರದಿಂದ ಹೊರಬರಲು ಅವಕಾಶ ನೀಡುತ್ತಿಲ್ಲ ಎಂದು ನಾಗೌರ್ ಮೂಲದ ವಿಕ್ರಮ್ ಸಿಂಗ್ ಹೇಳಿದ್ದಾರೆ.
ಬೇರೆ ದಾರಿಯಿಲ್ಲದೆ, ಕಾರ್ಮಿಕರು ತಮ್ಮ ಸಹಾಯಕ್ಕೆ ಬರುವಂತೆ ಆಯಾ ಲೋಕಸಭಾ ಸಂಸದರು ಮತ್ತು ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರಿಗೆ ಮನವಿ ಸಲ್ಲಿಸಲು ಸಾಮಾಜಿಕ ಮಾಧ್ಯಮಗಳ ಸಹಾಯವನ್ನು ಪಡೆದಿದ್ದಾರೆ.