ಜೆರುಸಲೇಂ: ಇಸ್ರೇಲ್ ಓಲ್ಡ್ ಸಿಟಿಯ ಡೆಮಾಸ್ಕಸ್ ಗೇಟ್ ಬಳಿ ಭದ್ರತಾ ಪಡೆಗಳು ಮತ್ತು ಪ್ರತಿಭಟನಾಕಾರರ ನಡುವೆ ನಡೆದ ಗಲಾಟೆಯಲ್ಲಿ ಸುಮಾರು 80 ಪ್ಯಾಲೆಸ್ತೀನಿಯರು ಗಾಯಗೊಂಡಿದ್ದು, 14 ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರತಿಭಟನಾಕಾರರು ಭದ್ರತಾ ಪಡೆಗಳ ಮೇಲೆ ಕಲ್ಲು, ಬಾಟಲಿಗಳನ್ನು ಎಸೆದ ಕಾರಣಕ್ಕಾಗಿ ಭದ್ರತಾ ಪಡೆಗಳು ಸ್ಟನ್ ಗ್ರೆನೇಡ್ಗಳು ಮತ್ತು ಜಲ ಫಿರಂಗಿ ಪ್ರಯೋಗಿಸಿತು ಎಂದು ಪ್ಯಾಲೆಸ್ತೀನಿಯನ್ ರೆಡ್ ಕ್ರಸೆಂಟ್ ತಿಳಿಸಿದೆ.
ರಂಝಾನ್ 27 ರ ಪವಿತ್ರ ದಿನವಾದ ಶನಿವಾರ ರಾತ್ರಿ ಸುಮಾರು 90 ಸಾವಿರ ಪ್ಯಾಲೆಸ್ತೀನೀಯರು ಟೆಂಪಲ್ ಮೌಂಟ್‌ನಲ್ಲಿ ನಡೆದ ಲೈಲತುಲ್ ಖದರ್ ವಿಶೇಷ ಪ್ರಾರ್ಥನೆಯಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಹಮಾಸ್ ಭಯೋತ್ಪಾದಕ ಗುಂಪಿನ ಮಿಲಿಟರಿ ವಿಭಾಗವನ್ನು ಬೆಂಬಲಿಸಿ ಘೋಷಣೆ ಮೊಳಗಿಸಲಾಯಿತು. ಅಲ್ಲದೆ ಇಸ್ರೇಲ್ ಮೇಲೆ ದಾಳಿ ಮಾಡುವ ಬಗ್ಗೆ ಪುನರುಚ್ಚರಿಸಿದರು. ಈ ವೇಳೆ ಭದ್ರತಾ ಪಡೆಗಳು ಮತ್ತು ಪ್ರಾರ್ಥನಾ ನಿರತರ ನಡುವೆ ಗಲಾಟೆಯಾಯಿತು ಎಂದು ಟೈಮ್ಸ್ ಆಫ್ ಇಸ್ರೇಲ್ ವರದಿ ಮಾಡಿದೆ.
ಇದನ್ನೂ ಓದಿ: ಕಾಬೂಲ್ ಶಾಲೆ ಬಳಿ ಸ್ಫೋಟ: ಸಾವಿನ ಸಂಖ್ಯೆ 53ಕ್ಕೆ ಏರಿಕೆ
ಈ ನಡುವೆ, ಇಸ್ರೇಲ್ನ ಶೈಖ್ ಜರ್ರಾಹ್ ಪ್ರದೇಶದಲ್ಲಿ ಕೂಡ ರಾಷ್ಟ್ರೀಯವಾದಿಗಳು ಎಂದು ಹೇಳಲಾಗುವ ಯಹೂದಿಗಳು ಮತ್ತು ಪ್ಯಾಲೆಸ್ತೀನಿಯರ ನಡುವೆ ಗಲಾಟೆ ನಡೆದಿದೆ. ಇಸ್ರೇಲ್ ಅಧಿಕಾರಿಗಳ ಮೇಲೆ ಪೆಪ್ಪರ್ ಸ್ಪ್ರೇ ಮಾಡಿದ ಇಬ್ಬರು ಶಂಕಿತ ಪ್ಯಾಲೆಸ್ತೀನಿಯರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಟೆಂಪಲ್ ಮೌಂಟ್ ಸುತ್ತಮುತ್ತಲಿನ ಉದ್ವಿಗ್ನತೆ ಜೆರುಸಲೇಂನಲ್ಲಿ ಇಸ್ರೇಲಿಗರು ಮತ್ತು ಪ್ಯಾಲೆಸ್ತೀನಿಯರ ನಡುವೆ ಘರ್ಷಣೆಗೆ ಕಾರಣವಾಯಿತು. ಇದಾದ ಬಳಿಕ ಗಾಝಾ ಪಟ್ಟಿಯಿಂದ ಇಸ್ರೇಲ್ ಮೇಲೆ ರಾಕೆಟ್ ಹಾರಿಸಲಾಗಿದೆ. ರಾಕೆಟ್ ಬಯಲು ಪ್ರದೇಶದಲ್ಲಿ ಬಂದು ಬಿದ್ದಿದ್ದು, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಇಸ್ರೇಲ್ ರಕ್ಷಣಾ ಪಡೆಗಳು ಹೇಳಿರುವುದಾಗಿ ಟೈಮ್ಸ್ ಆಫ್ ಇಸ್ರೇಲ್ ವರದಿ ಮಾಡಿದೆ.