ಮೊಜಾಂಬಿಕ್: ಜನವರಿ 23 ರಂದು ಸಂಭವಿಸಿದ ಎಲೋಯಿಸ್ ಚಂಡಮಾರುತದ ರಭಸಕ್ಕೆ ಹಲವು ಕಡೆ ಭೂಕುಸಿತ ಉಂಟಾಗಿದ್ದು, ಬೀರಾ ನಗರದಲ್ಲಿ ಭಾರಿ ಮಳೆಯಾದ ಪರಿಣಾಮ ಪ್ರವಾಹ ಉಂಟಾಗಿದೆ.
ಎಲೋಯಿಸ್ ಚಂಡಮಾರುತಕ್ಕೆ ಮೊಜಾಂಬಿಕ್ನಲ್ಲಿ ಈವರೆಗೂ ಆರು ಜನರು ಸಾವನ್ನಪ್ಪಿದ್ದಾರೆ, 12 ಮಂದಿ ಗಾಯಗೊಂಡಿದ್ದಾರೆ ಮತ್ತು 176,000 ಕ್ಕೂ ಹೆಚ್ಚು ಜನರನ್ನು ಈ ಚಂಡಮಾರುತ ಬಾಧಿಸಿದೆ ಎಂದು ಪ್ರಾಥಮಿಕ ವರದಿಗಳು ಬಹಿರಂಗಪಡಿಸಿವೆ. ಚಂಡಮಾರುತದ ಪರಿಣಾಮ 8,800 ಮನೆಗಳು ಕುಸಿದಿವೆ. ಈ ಚಂಡಮಾರುತ ಬುಜಿ, ಡೋಂಡೊ, ಬೈರಾ ಸಿಟಿಗಳನ್ನು ಹೆಚ್ಚು ಬಾಧಿಸಿದೆ. ಈಗಾಗಲೇ ಸುಮಾರು 8,300 ಜನರನ್ನು ಸ್ಥಳಾಂತರಗೊಳಿಸಲಾಗಿದೆ. ಸುಮಾರು 160 ಶಾಲೆಗಳು ಹಾಗು 26 ಆರೋಗ್ಯ ಕೇಂದ್ರಗಳಿಗೆ ಚಂಡಮಾರುತದಿಂದ ಭಾರಿ ಹಾನಿಯಾಗಿದೆ. ಕೆಲವು ಪ್ರದೇಶಗಳಲ್ಲಿ ವಿದ್ಯುತ್ ಸಂಪೂರ್ಣ ಕಡಿತಗೊಂಡಿದೆ. ಪ್ರವಾಹದಿಂದಾಗಿ ಸುಮಾರು 142,000 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಹಾನಿ ಉಂಟಾಗಿದೆ.
ಸಂತ್ರಸ್ತರ ನೆರವಿಗೆ ವಿಶ್ವಸಂಸ್ಥೆ ಧಾವಿಸಿದೆ. ಮೊಜಾಂಬಿಕ್ ಸರ್ಕಾರ ಸಂತ್ರಸ್ತರಿಗೆ ಕನಿಷ್ಠ ಅಗತ್ಯ ವಸ್ತುಗಳನ್ನು ಪೂರೈಸುತ್ತಿದ್ದು, ಜನರನ್ನು ಸುರಕ್ಷತಾ ಸ್ಥಳಕ್ಕೆ ಸ್ಥಳಾಂತರಿಸುವಲ್ಲಿ ನಿರತವಾಗಿದೆ.
ಇದನ್ನೂ ಓದಿ:ಭಟ್ಕಳ: ಪಕ್ಕದ ಮನೆಯಲ್ಲಿ ಹತ್ಯೆಯಾದ ಮಹಿಳೆ ಶವ ನೋಡಿ ವ್ಯಕ್ತಿ ಕುಸಿದು ಬಿದ್ದು ಸಾವು!