ಜೆರುಸಲೇಂ: ಇಸ್ರೇಲ್ ಪ್ರಧಾನಿಯಾಗಿ 12 ವರ್ಷಗಳ ಕಾಲ ಸುದೀರ್ಘ ಆಡಳಿತ ನಡೆಸಿದ್ದ ಬೆಂಜಮಿನ್ ನೆತನ್ಯಾಹು ಅವರು ಕುರ್ಚಿಯಿಂದ ಕೆಳಗಿಳಿದಿದ್ದು, ಬಲಪಂಥೀಯ ಯಹೂದಿ ರಾಷ್ಟ್ರೀಯವಾದಿ ನಫ್ತಾಲಿ ಬೆನೆಟ್ ದೇಶದ ನೂತನ ಪ್ರಧಾನಿಯಾಗಿದ್ದಾರೆ. ಆದರೂ ಬೆಂಜಮಿನ್ ಅವರು ಇಸ್ರೇಲ್ನ ಪ್ರಬಲ ರಾಜಕಾರಣಿಯಾಗಿಯೇ ಉಳಿದಿದ್ದಾರೆ.
ಎಂಟು ಪಕ್ಷಗಳ ಬಣ
ನಫ್ತಾಲಿ ಬೆನೆಟ್ (49) ಅವರು ಪ್ರಧಾನಿಯಾಗಲು ಎಂಟು ಸಣ್ಣ-ಪುಟ್ಟ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳಬೇಕಿತ್ತು. ಅದರಂತೆ 8 ಪಕ್ಷಗಳೊಂದಿಗೆ ಸೇರಿಕೊಂಡು ಉಗ್ರ ರಾಷ್ಟ್ರೀಯತಾವಾದಿ ಪಕ್ಷದ ಮುಖ್ಯಸ್ಥ, ಮಾಜಿ ರಕ್ಷಣಾ ಸಚಿವ ನಫ್ತಾಲಿ ಬೆನೆಟ್ ವಿಶ್ವಾಸ ಮತಯಾಚನೆಯಲ್ಲಿ 60-59 ಮತಗಳನ್ನು ಪಡೆದುಕೊಂಡು ಗೆದ್ದಿದ್ದಾರೆ. ವಿಶೇಷವೆಂದರೆ ಈ ಬಣದಲ್ಲಿ ಅರಬ್ ಪಕ್ಷವೂ ಇದ್ದು, ಇಸ್ರೇಲ್ ಇತಿಹಾಸದಲ್ಲಿ ಪ್ರಥಮ ಬಾರಿಗೆ ಅರಬ್ ಅಲ್ಪಸಂಖ್ಯಾತರ ಪಕ್ಷವೊಂದು ಆಡಳಿತ ಸರ್ಕಾರದ ಭಾಗವಾಗಲಿದೆ. ಇನ್ನೊಂದು ಪ್ರಮುಖ ವಿಷಯವೆಂದರೆ, ಸಮ್ಮಿಶ್ರ ಸರ್ಕಾರದ ಒಪ್ಪಂದದ ಪ್ರಕಾರ ಮೈತ್ರಿಕೂಟ ರಚನೆಯಲ್ಲಿ ಪ್ರಮುಖ ಪಾತ್ರವಹಿಸಿದ ಯಾಯಿರ್ ಲಾಪಿಡ್ ಅವರನ್ನು 2023 ರಲ್ಲಿ ಪ್ರಧಾನ ಮಂತ್ರಿಯಾಗಿ ಬೆನೆಟ್ ನೇಮಕ ಮಾಡಬೇಕಿದೆ.
ವಿರೋಧ ಪಕ್ಷಕ್ಕೆ ನೆತನ್ಯಾಹು
ಇಸ್ರೇಲ್ ಸಂಸತ್ತಿನಲ್ಲಿ ಬೆಂಜಮಿನ್ ನೆತನ್ಯಾಹು (71) ಅವರ ಲಿಕುಡ್ ಪಕ್ಷವೇ ಅತಿದೊಡ್ಡ ರಾಜಕೀಯ ಪಕ್ಷವಾಗಿದ್ದು, ನೆತನ್ಯಾಹು ಪ್ರತಿಪಕ್ಷದ ನಾಯಕರಾಗಲಿದ್ದಾರೆ. ಆದರೆ ಬೆನೆಟ್ ಮೈತ್ರಿಕೂಟದಲ್ಲಿ ಯಾವುದಾದರೂ ಒಂದು ಪಕ್ಷ ಕೈಕೊಟ್ಟರೆ ಬೆನೆಟ್ ಸರ್ಕಾರ ಉರುಳಿಬಿದ್ದು, ಬೆಂಜಮಿನ್ ಮತ್ತೆ ಅಧಿಕಾರವಹಿಸಿಕೊಳ್ಳುವ ಸಾಧ್ಯತೆಯಿದೆ.
12 ವರ್ಷಗಳ ಸುದೀರ್ಘ ಆಡಳಿತ
ಬೆಂಜಮಿನ್ ನೆತನ್ಯಾಹು ಅವರು 1996 ರಿಂದ 1999 ರವರೆಗೆ ಮೊದಲ ಬಾರಿ ಇಸ್ರೇಲ್ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದಾರೆ. ಆ ಬಳಿಕ 2009 ರಿಂದ 2021ರ ವರೆಗೆ 12 ವರ್ಷಗಳ ಕಾಲ ಇಸ್ರೇಲ್ ಪಿಎಂ ಆಗಿ ದೇಶವನ್ನು ಆಳಿದ್ದಾರೆ. ಆದರೆ 2019ರಿಂದ ರಾಷ್ಟ್ರದಲ್ಲಿ ರಾಜಕೀಯ ಅಸ್ಥಿರತೆ ಇದ್ದ ಕಾರಣ ಕಳೆದ ಎರಡು ವರ್ಷಗಳಲ್ಲಿ 4 ಬಾರಿ ಚುನಾವಣೆ ನಡೆದಿವೆ. ಇತ್ತೀಚೆಗೆ ನಡೆದ ಇಸ್ರೇಲ್-ಪ್ಯಾಲೆಸ್ತೀನ್ ಸಂಘರ್ಷ ಬೆಂಜಮಿನ್ ಅಧಿಕಾರಕ್ಕೆ ಮತ್ತಷ್ಟು ಕುತ್ತು ತಂದಿತ್ತು. ಇದೀಗ ಇಸ್ರೇಲ್ ನೂತನ ಪ್ರಧಾನಿಯಾಗಿರುವ ನಫ್ತಾಲಿ ಬೆನೆಟ್, ಎಲ್ಲಾ ವರ್ಗದಿಂದ ವಿಭಿನ್ನ ನಾಯಕರು ನಿಲ್ಲುವ ಸಮಯ ಬಂದಿದೆ ಎಂದು ಹೇಳಿದ್ದಾರೆ.