ವಾಷಿಂಗ್ಟನ್: ಅಮೆರಿಕ ತನ್ನ ಸೇನಾಪಡೆ ವಾಪಸ್ ಪಡೆದುಕೊಳ್ಳುತ್ತಿದ್ದಂತೆ ತಾಲಿಬಾನ್ ಉಗ್ರರು ಅಫ್ಘಾನಿಸ್ತಾನದ ಮೇಲೆ ಸಂಪೂರ್ಣ ಹಿಡಿತ ಸಾಧಿಸಿದ್ದಾರೆ. ಇದೇ ವಿಚಾರವಾಗಿ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಮೆರಿಕ ಅಧ್ಯಕ್ಷ ಜೋ ಬೈಡನ್ ವಿರುದ್ಧ ವಾಗ್ದಾಳಿ ನಡೆಸಿದ್ದು, ರಾಜೀನಾಮೆಗೆ ಆಗ್ರಹಿಸಿದ್ದಾರೆ.
ಕಳೆದ 20 ವರ್ಷಗಳಿಂದ ಅಫ್ಘಾನಿಸ್ತಾನಲ್ಲಿ ಅಮೆರಿಕ ಸೇನೆ ನಿಯೋಜನೆ ಮಾಡಿತ್ತು. ಆದರೆ ಇದೀಗ ದಿಢೀರ್ ಆಗಿ ಹಿಂಪಡೆದುಕೊಳ್ಳಲಾಗಿದೆ. ಇದರ ಬೆನ್ನಲ್ಲೇ ತಾಲಿಬಾನ್ ಉಗ್ರರು ಒಂದರ ಮೇಲೆ ಒಂದರಂತೆ ಎಲ್ಲ ನಗರ ವಶಕ್ಕೆ ಪಡೆದುಕೊಂಡಿದ್ದು, ಇದೀಗ ಕಾಬೂಲ್ಗೂ ಲಗ್ಗೆ ಹಾಕಿದ್ದಾರೆ. ಇದೇ ವಿಷಯನ್ನಿಟ್ಟುಕೊಂಡು ಟ್ರಂಪ್ ವಾಗ್ದಾಳಿ ನಡೆಸಿದ್ದಾರೆ.
ಜೋ ಬೈಡನ್ ಅಫ್ಘಾನಿಸ್ತಾನದಲ್ಲಿ ಯಾವುದಕ್ಕೆ ಅವಕಾಶ ನೀಡಿದ್ದಾರೋ ಅದಕ್ಕೆ ಅವಮಾನಿತರಾಗಿ ರಾಜೀನಾಮೆ ನೀಡಬೇಕು ಎಂದಿದ್ದಾರೆ. ಇದರ ಜೊತೆಗೆ ಅಮೆರಿಕದಲ್ಲಿ ಕೋವಿಡ್ ಪ್ರಕರಣ ಹೆಚ್ಚಳ, ದೇಶೀಯ ವಲಸೆ ನೀತಿ, ಆರ್ಥಿಕ ಮತ್ತು ಇಂಧನ ನೀತಿಗಳ ವಿರುದ್ಧ ವಾಗ್ದಾಳಿ ನಡೆಸಿದರು.
ಅಫ್ಘಾನ್ನ ಯುಎಸ್ ರಾಯಭಾರಿ ಬಳಿ ಸ್ಫೋಟ
ಅಫ್ಘಾನಿಸ್ತಾನದಲ್ಲಿರುವ ಅಮೆರಿಕ ರಾಯಭಾರಿ ಕಚೇರಿ ಬಳಿ ಎರಡು ಸಲ ಸ್ಫೋಟ ನಡೆಸಲಾಗಿದೆ. ಕಾಬೂಲ್ನಲ್ಲಿರುವ ಕಚೇರಿ ಬಳಿ ಸ್ಫೋಟ ಸಂಭವಿಸಿರುವುದಾಗಿ ತಿಳಿದು ಬಂದಿದೆ. ಇದರ ಬೆನ್ನಲ್ಲೇ ಅಲ್ಲಿನ ವಿಮಾನ ನಿಲ್ದಾಣದ ಬಳಿ ಕೂಡ ಗುಂಡಿನ ದಾಳಿ ನಡೆಸಿದ್ದಾರೆ.
ಇದನ್ನೂ ಓದಿ: 20 ವರ್ಷಗಳ ಬಳಿಕ ಅಫ್ಘಾನ್ನಲ್ಲಿ ಅಧಿಪತ್ಯ ಸ್ಥಾಪಿಸಿದ ತಾಲಿಬಾನಿಗಳು
ಅಫ್ಘಾನ್ನಿಂದ ಅಧ್ಯಕ್ಷ ಅಶ್ರಫ್ ಘನಿ ಪಲಾಯನ
ತಾಲಿಬಾನ್ ಉಗ್ರರು ನಿನ್ನೆ ಕಾಬೂಲ್ ವಶಕ್ಕೆ ಪಡೆದುಕೊಳ್ಳುತ್ತಿದ್ದಂತೆ ಅಲ್ಲಿನ ಅಧ್ಯಕ್ಷ ಆಶ್ರಫ್ ಘನಿ ದೇಶದಿಂದ ಅಜ್ಞಾತ ಸ್ಥಳಕ್ಕೆ ಪಲಾಯನ ಮಾಡಿದ್ದಾರೆಂದು ತಿಳಿದು ಬಂದಿದೆ. ಬರುವ ದಿನಗಳಲ್ಲಿ ನಡೆಯಲಿರುವ ರಕ್ತಪಾತ ತಪ್ಪಿಸುವ ಉದ್ದೇಶದಿಂದ ದೇಶ ಬಿಡುತ್ತಿರುವುದಾಗಿ ಫೇಸ್ಬುಕ್ನಲ್ಲಿ ಬರೆದುಕೊಂಡಿದ್ದಾರೆ. ಜೊತೆಗೆ ತಾವು ಅತ್ಯಂತ ಕಠಿಣ ಆಯ್ಕೆ ತೆಗೆದುಕೊಂಡಿದ್ದಾಗಿ ಹೇಳಿದ್ದಾರೆ.
ವಿಶ್ವಸಂಸ್ಥೆ ಸಭೆ
ಅಫ್ಘಾನಿಸ್ತಾನದಲ್ಲಿ ಹಿಂಸಾಚಾರ ಭುಗಿಲೆದ್ದಿರುವ ಕಾರಣ ವಿಶ್ವಸಂಸ್ಥೆ ಮಧ್ಯಸ್ಥಿಕೆ ವಹಿಸುವ ಸಾಧ್ಯತೆ ಇದೆ. ಇದೇ ವಿಚಾರವಾಗಿ ಇಂದು ಮಹತ್ವದ ಸಭೆ ನಡೆಸಲು ಮುಂದಾಗಿದೆ. ಇದರಲ್ಲಿ ಯುಎಸ್, ಬ್ರಿಟನ್, ಫ್ರಾನ್ಸ್, ರಷ್ಯಾ ಹಾಗೂ ಚೀನಾ ದೇಶದ ಪ್ರಮುಖ ಮುಖಂಡರು ಭಾಗಿಯಾಗಲಿದ್ದಾರೆ.