ನಿಯಾಮಿ (ನೈಜರ್): ಪಶ್ಚಿಮ ನೈಜರ್‌ನ ಮಿಲಿಟರಿ ಕ್ಯಾಂಪ್‌ನ ಮೇಲೆ ಮೂರು ದಿನಗಳ ಹಿಂದೆ ನಡೆದ ಜಿಹಾದಿ ಉಗ್ರರ ದಾಳಿಯಿಂದಾಗಿ 89 ಸೈನಿಕರು ಮೃತಪಟ್ಟಿದ್ದಾರೆ ಎಂದು ಸಾರ್ವಜನಿಕ ರೇಡಿಯೊದಲ್ಲಿ ಇಲ್ಲಿನ ಸರ್ಕಾರ ತಿಳಿಸಿದೆ.
ಸಂಪೂರ್ಣ ಶೋಧದ ಬಳಿಕ ಸ್ನೇಹಪರ ಪಡೆಗಳ 89 ಯೋಧರು ಸಾವನ್ನಪ್ಪಿದ್ದಾರೆ ಎಂಬುದು ತಿಳಿದುಬಂದಿದೆ. ಮೃತರ ಗೌರವಾರ್ಥವಾಗಿ ನೈಜರ್ನಲ್ಲಿ ಮೂರು ದಿನಗಳ ಕಾಲ ರಾಷ್ಟ್ರೀಯ ಶೋಕಾಚರಣೆ ಘೋಷಿಸಲಾಗಿದೆ ಎಂದು ಸರ್ಕಾರದ ವಕ್ತಾರ ಜಕಾರಿಯಾ ಅಬ್ದುರಹಮೆ ತಿಳಿಸಿದ್ದಾರೆ.
ಚೈನ್‌ಗೋದರ್ ಶಿಬಿರದ ಮೇಲೆ ಗುರುವಾರ ನಡೆದ ದಾಳಿಗೆ 25 ಸೈನಿಕರು ಸಾವನ್ನಪ್ಪಿದ್ದರು. ಮೊನ್ನೆ ನಡೆದ ಜಿಹಾದಿ ದಾಳಿಯಲ್ಲಿ ಸಹ ಡಜನ್ಗಟ್ಟಲೆ ಜನರು ಸಾವನ್ನಪ್ಪಿದ್ದಾರೆ. ಈ ಪ್ರದೇಶದಲ್ಲಿ ದಾಳಿಕೋರರು ಭಾರೀ ಶಸ್ತ್ರಸಜ್ಜಿತರಾಗಿ ಮಿಲಿಟರಿ ನೆಲೆಗಳ ಮೇಲೆ ಮುಗಿಬೀಳುತ್ತಿದ್ದಾರೆ
ಕಳೆದ ವರ್ಷ ಡಿಸೆಂಬರ್ನಲ್ಲಿ ಮಾಲಿ ದೇಶದೊಂದಿಗಿನ ಗಡಿ ಸಮೀಪದಲ್ಲಿರುವ ನೈಜರ್ ಸೇನಾ ಶಿಬಿರವೊಂದರ ಮೇಲೆ ದಾಳಿಸಿ ನಡೆಸಿದ ಭಯೋತ್ಪಾದಕರು 71 ನೈಜರ್ ಸೈನಿಕರನ್ನು ಬಲಿಪಡೆದಿದ್ದರು. ಈ ಬಳಿಕ ಮತ್ತೊಂದು ದೊಡ್ಡ ಪ್ರಮಾಣದ ಉಗ್ರಕೃತ್ಯ ಎಸಗಿದ್ದಾರೆ.