ಜಿನೀವಾ: ಹೊಸ ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟಿಸುತ್ತಿರುವ ರೈತರು ಹಾಗೂ ಭಾರತೀಯ ಅಧಿಕಾರಿಗಳು ಗರಿಷ್ಠ ಸಂಯಮದಿಂದ ವರ್ತಿಸಬೇಕು ಎಂದು ಯುಎನ್ ಮಾನವ ಹಕ್ಕುಗಳ ಕಚೇರಿ ಕರೆ ನೀಡಿದ್ದು, ಎಲ್ಲರಿಗೂ ಮಾನವ ಹಕ್ಕುಗಳಿಗೆ ಸಂಬಂಧಿಸಿದಂತೆ ಸಮಾನ ಪರಿಹಾರಗಳನ್ನು ಕಂಡುಹಿಡಿಯುವುದು ನಿರ್ಣಾಯಕವಾಗಿದೆ ಎಂದು ಒತ್ತಿ ಹೇಳಿದೆ.
ಶಾಂತಿಯುತ ಸಭೆ ಮತ್ತು ಅಭಿವ್ಯಕ್ತಿಯ ಹಕ್ಕುಗಳನ್ನು ರಕ್ಷಿಸಬೇಕು ಎಂದು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಹೈ ಕಮಿಷನರ್ (ಒಎಚ್‌ಸಿಎಚ್‌ಆರ್) ಕಚೇರಿ ತನ್ನ ಟ್ವೀಟ್‌ನಲ್ಲಿ ತಿಳಿಸಿದೆ.
"ಭಾರತದಲ್ಲಿ ನಡೆಯುತ್ತಿರುವ ರೈತ ಪ್ರತಿಭಟನೆಯಲ್ಲಿ ಗರಿಷ್ಠ ಸಂಯಮವನ್ನು ಕಾಪಾಡುವಂತೆ ನಾವು ಅಧಿಕಾರಿಗಳು ಮತ್ತು ಪ್ರತಿಭಟನಾಕಾರರಿಗೆ ಕರೆ ನೀಡುತ್ತೇವೆ. ಶಾಂತಿಯುತ ಸಭೆ ಮತ್ತು ಅಭಿವ್ಯಕ್ತಿಯ ಹಕ್ಕುಗಳನ್ನು ರಕ್ಷಿಸಬೇಕು. ಎಲ್ಲರಿಗೂ ಮಾನವ ಹಕ್ಕುಗಳಿಗೆ ಸಂಬಂಧಿಸಿದಂತೆ ಸಮಾನ ಪರಿಹಾರಗಳನ್ನು ಕಂಡು ಹಿಡಿಯುವುದು ಬಹಳ ಮುಖ್ಯ" ಎಂದು ಕಚೇರಿ ಟ್ವೀಟ್ ಮಾಡಿದೆ.
ಕೇಂದ್ರದ ಮುರು ಕೃಷಿ ಕಾನೂನುಗಳನ್ನು ಸಂಪೂರ್ಣವಾಗಿ ರದ್ದುಗೊಳಿಸುವಂತೆ ಒತ್ತಾಯಿಸಿ ಸಾವಿರಾರು ರೈತರು, ಹೆಚ್ಚಾಗಿ ಪಂಜಾಬ್, ಹರಿಯಾಣ ಮತ್ತು ಪಶ್ಚಿಮ ಉತ್ತರ ಪ್ರದೇಶ ಮೂಲದವರು ದೆಹಲಿ ಗಡಿ ಬಿಂದುಗಳಾದ ಸಿಂಗು, ಟಿಕ್ರಿ ಮತ್ತು ಗಾಜಿಪುರಗಳಲ್ಲಿ ಕಳೆದ 73 ದಿನಗಳಿಂದ ಪ್ರತಿಭಟನೆ ಮಾಡುತ್ತಿದ್ದಾರೆ. ಇಂದು ಶಾಂತಿಯುತ ರೀತಿಯಲ್ಲಿ 'ಚಕ್ಕಾ ಜಾಮ್' ನಡೆಯಲಿದೆ.