ಕೀವ್ (ಉಕ್ರೇನ್): ರಷ್ಯಾ ಮತ್ತು ಉಕ್ರೇನ್ ಎರಡೂ ಗಡಿಗಳಿಗೆ ಸಮೀಪವಿರುವ ಗೊಮೆಲ್ ಪ್ರದೇಶದಲ್ಲಿ ಯೋಜಿತ ಮಾತುಕತೆಗಳನ್ನು ನಡೆಸಲು ಎರಡೂ ರಾಷ್ಟ್ರಗಳು ಮುಂದಾಗಿವೆ ಎಂದು ರಷ್ಯಾದ ಮುಖ್ಯ ಸಮಾಲೋಚಕ ವ್ಲಾಡಿಮಿರ್ ಮೆಡಿನ್ಸ್ಕಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಈ ಪ್ರಯಾಣ ಮಾರ್ಗವು 100 ಪ್ರತಿಶತದಷ್ಟು ಸುರಕ್ಷಿತವಾಗಿದೆ ಎಂದು ನಾವು ಖಾತರಿಪಡಿಸುತ್ತೇವೆ. ನಾವು ಉಕ್ರೇನಿಯನ್ ನಿಯೋಗಕ್ಕಾಗಿ ಕಾಯುತ್ತಿದ್ದೇವೆ ಎಂದು ರಷ್ಯಾದ ಮುಖ್ಯ ಸಮಾಲೋಚಕರು ಹೇಳಿದ್ದಾರೆ. ರಷ್ಯಾದ ತಂಡವು ಗೊಮೆಲ್‌ಗೆ ಆಗಮಿಸಿದ್ದು, ಉಕ್ರೇನಿಯನ್ನರೊಂದಿಗೆ ಮಾತುಕತೆ ನಡೆಸಲು ಯೋಜಿಸಲಾಗಿದೆ ಎಂದು ಹೇಳಿದರು.
ಉಕ್ರೇನ್ ಮೇಲೆ ದಾಳಿ ನಡೆಸಲು ರಷ್ಯಾದ ಪಡೆಗಳು ಬೆಲಾರಸ್ ಪ್ರದೇಶವನ್ನು ಬಳಸುತ್ತಿವೆ. ಆ ಕಾರಣಕ್ಕೆ ಅಲ್ಲಿ ಮಾತನಾಡಲು ನಾವು ತಯಾರಿಲ್ಲ ಎಂದು ಉಕ್ರೇನ್ ಅಧ್ಯಕ್ಷರು ಹೇಳಿದ್ದರು. ಆದಾಗ್ಯೂ, ಈಗ ಬೆಲಾರಸ್ನ ಗೊಮೆಲ್ನಲ್ಲಿ ಮಾತುಕತೆಗೆ ವೇದಿಕೆ ಸಿದ್ಧವಾಗಿದೆ.
ರಷ್ಯನ್ನರು ಆರಂಭದಲ್ಲಿ ತಮ್ಮ ತಂಡವು 3 ಗಂಟೆಯವರೆಗೆ ಬೆಲಾರಸ್‌ನಲ್ಲಿ ಇರಲಿದೆ ಎಂದು ಹೇಳಿದ್ದರು. ಆದರೆ, ಉಕ್ರೇನಿಯನ್ ಅಧ್ಯಕ್ಷ ಝೆಲೆನ್ಸ್ಕಿ ಅವರು ದೂರವಾಣಿಯಲ್ಲಿ ಮಾತನಾಡಿ, ಗಡುವನ್ನು ವಿಸ್ತರಿಸಲು ಕೇಳಿಕೊಂಡಿದ್ದರು ಎಂದು ರಷ್ಯಾ ಅಧಿಕಾರಿಗಳು ತಿಳಿಸಿದ್ದಾರೆ.
ಹೆಚ್ಚಿನ ವಿವರ: ಮಾಸ್ಕೋ ಪಡೆಗಳು ಕೀವ್‌ಗೆ ಹತ್ತಿರವಾಗುತ್ತಿದ್ದಂತೆ ನಿಯೋಗವು ರಷ್ಯಾದ ಅಧಿಕಾರಿಗಳನ್ನು ಭೇಟಿ ಮಾಡಲಿದೆ ಎಂದು ಉಕ್ರೇನ್ ಅಧ್ಯಕ್ಷರ ಕಚೇರಿ ದೃಢಪಡಿಸಿದೆ. ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಕಚೇರಿಯು ಟೆಲಿಗ್ರಾಮ್ ಮೆಸೇಜಿಂಗ್ ಅಪ್ಲಿಕೇಶನ್‌ನಲ್ಲಿ ಎರಡು ಕಡೆಯವರು ಬೆಲಾರಸ್ ಗಡಿಯಲ್ಲಿ ಅನಿರ್ದಿಷ್ಟ ಸ್ಥಳದಲ್ಲಿ ಭೇಟಿಯಾಗುತ್ತಾರೆ ಎಂದು ತಿಳಿಸಿದ್ದು, ಸಭೆಗೆ ನಿಖರವಾದ ಸಮಯದ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ.
ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ರಷ್ಯಾದ ಪರಮಾಣು ಪಡೆಗಳಿಗೆ ಸೂಚನೆ ನೀಡಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. ಪುಟಿನ್ ಮಿತ್ರ ರಾಷ್ಟ್ರದ ಬೆಲಾರಸ್ ಅಧ್ಯಕ್ಷ ಅಲೆಕ್ಸಾಂಡರ್ ಲುಕಾಶೆಂಕೊ ಅವರು ಈ ಬಗ್ಗೆ ಮಾತನಾಡಿದ್ದು, ಉಕ್ರೇನಿಯನ್ ನಿಯೋಗದ ಪ್ರಯಾಣದ ಸಮಯ, ಮಾತುಕತೆ ಮತ್ತು ಹಿಂದಿರುಗುವ ಸಮಯದಲ್ಲಿ ಬೆಲಾರಸ್ ಭೂಪ್ರದೇಶದಲ್ಲಿ ನೆಲೆಗೊಂಡಿರುವ ಎಲ್ಲಾ ವಿಮಾನಗಳು, ಹೆಲಿಕಾಪ್ಟರ್‌ಗಳು ಮತ್ತು ಕ್ಷಿಪಣಿಗಳು ನೆಲದ ಮೇಲೆಯೇ ಇರುವುದನ್ನು ಖಚಿತಪಡಿಸಿಕೊಳ್ಳುವ ಜವಾಬ್ದಾರಿಯನ್ನು ವಹಿಸಿಕೊಂಡಿದೆ ಎಂದು ಝೆಲೆನ್ಸ್ಕಿಯ ಕಚೇರಿ ಮಾಹಿತಿ ನೀಡಿದೆ.
ಈ ಹಿಂದೆ ತನ್ನ ಉನ್ನತ ಅಧಿಕಾರಿಗಳೊಂದಿಗಿನ ಸಭೆಯಲ್ಲಿ ಮಾತನಾಡಿದ್ದ ಪುಟಿನ್, ಪರಮಾಣು ನಿರೋಧಕ ಪಡೆಗಳನ್ನು ಯುದ್ಧ ಕರ್ತವ್ಯದ ವಿಶೇಷ ಸ್ಥಳದಲ್ಲಿ ಅಲರ್ಟ್ ಆಗಿರುವಂತೆ ರಷ್ಯಾದ ರಕ್ಷಣಾ ಸಚಿವ ಮತ್ತು ಮಿಲಿಟರಿಯ ಜನರಲ್ ಸ್ಟಾಫ್ ಮುಖ್ಯಸ್ಥರಿಗೆ ನಿರ್ದೇಶನ ನೀಡಿದ್ದರು.
ಪಾಶ್ಚಿಮಾತ್ಯ ದೇಶಗಳು ಆರ್ಥಿಕ ಕ್ಷೇತ್ರದಲ್ಲಿ ನಮ್ಮ ದೇಶದ ವಿರುದ್ಧ ಸ್ನೇಹಿಯಲ್ಲದ ಕ್ರಮಗಳನ್ನು ತೆಗೆದುಕೊಳ್ಳುತ್ತಿಲ್ಲ. ಆದರೆ, ಪ್ರಮುಖ ನ್ಯಾಟೋ ಸದಸ್ಯರ ಉನ್ನತ ಅಧಿಕಾರಿಗಳು ನಮ್ಮ ದೇಶದ ಬಗ್ಗೆ ಆಕ್ರಮಣಕಾರಿ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಪುಟಿನ್ ಹರಿಹಾಯ್ದಿದ್ದರು.
ಉಕ್ರೇನ್‌ನಲ್ಲಿನ ಸಂಘರ್ಷದಲ್ಲಿ ನೇರವಾಗಿ ಮಧ್ಯಪ್ರವೇಶಿಸುವ ಯಾವುದೇ ರಾಷ್ಟ್ರಗಳ ವಿರುದ್ಧ ಕಠಿಣವಾಗಿ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಯುದ್ಧ ಘೋಷಣೆ ಮಾಡಿದಾಗ ಬೆದರಿಕೆ ಹಾಕಿದ್ದರು. ಜೊತೆಗೆ ನಿರ್ದಿಷ್ಟವಾಗಿ ತಮ್ಮ ದೇಶದ ಪರಮಾಣು ಶಕ್ತಿಯ ಸ್ಥಿತಿಯ ಬಗ್ಗೆ ಪರೋಕ್ಷವಾಗಿ ಹೇಳಿದ್ದರು. ಈಗ ಯುದ್ಧ ನಿಲ್ಲುವ ಮುನ್ಸೂಚನೆ ಸಿಕ್ಕಿದೆಯಾದರೂ ಅದು ಪರಮಾಣು ಬೆದರಿಕೆಯಿಂದ ಎನ್ನುವುದನ್ನು ಅಲ್ಲಗೆಳೆಯುವಂತಿಲ್ಲ.