ಲಂಡನ್: ವೆಸ್ಟ್ಮಿನ್ಸ್ಟರ್ ಚರ್ಚ್ನಲ್ಲಿ ನಡೆದ ರಹಸ್ಯ ಸಮಾರಂಭದಲ್ಲಿ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ (56) ತಮ್ಮ ಪ್ರೇಯಸಿ ಕ್ಯಾರಿ ಸೈಮಂಡ್ಸ್ (33) ಅವರನ್ನು ವಿವಾಹವಾಗಿದ್ದಾರೆ ಎಂದು ಅಲ್ಲಿನ ಸನ್ ಹಾಗೂ ಮೇಲ್ ಪತ್ರಿಕೆಗಳು ವರದಿ ಮಾಡಿವೆ.
ಲಂಡನ್ನಲ್ಲಿ ನಡೆದ ವಿವಾಹ ಸಮಾರಂಭಕ್ಕೆ ಕೊನೆಯ ಕ್ಷಣದಲ್ಲಿ ಅತಿಥಿಗಳನ್ನು ಆಹ್ವಾನಿಸಲಾಗಿತ್ತು. ಪ್ರಧಾನಿ ಕಚೇರಿಯ ಹಿರಿಯ ಸದಸ್ಯರಿಗೆ ಕೂಡ ಮದುವೆ ಬಗ್ಗೆ ತಿಳಿದಿರಲಿಲ್ಲ ಎಂದು ಎರಡೂ ಪತ್ರಿಕೆಗಳು ಹೇಳಿವೆ. ಆದರೆ ಜಾನ್ಸನ್ ಅವರ ಡೌನಿಂಗ್ ಸ್ಟ್ರೀಟ್(ಪ್ರಧಾನಿ ಕಚೇರಿ) ವಕ್ತಾರರು ಈ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ.
ಕೋವಿಡ್ ನಿರ್ಬಂಧಗಳಿಂದಾಗಿ ಇಂಗ್ಲೆಂಡ್‌ನಲ್ಲಿನ ವಿವಾಹಗಳು ಪ್ರಸ್ತುತ 30 ಜನರಿಗೆ ಸೀಮಿತವಾಗಿದೆ. ನಿನ್ನೆ ಮಧ್ಯಾಹ್ನ ವೆಸ್ಟ್ಮಿನ್ಸ್ಟರ್ ಕ್ಯಾಥೆಡ್ರಲ್ ಅನ್ನು ಇದ್ದಕ್ಕಿದ್ದಂತೆ ಮುಚ್ಚಲಾಗಿದೆ. 30 ನಿಮಿಷಗಳ ಬಳಿಕ ವಧು ಕ್ಯಾರಿ ಸೈಮಂಡ್ಸ್ ಅವರು ಮುಸುಕು ಇಲ್ಲದ ಬಿಳಿ ಬಣ್ಣದ ಲಾಂಗ್ ಗೌನ್ನಲ್ಲಿ ಚರ್ಚ್ಗೆ ಎಂಟ್ರಿ ಕೊಟ್ಟಿದ್ದಾರೆ ಎಂದು ವರದಿಗಳು ತಿಳಿಸಿವೆ.
ಇದನ್ನೂ ಓದಿ: ಕಟ್ಕೊಂಡ ಹೆಂಡ್ತಿಯನ್ನೇ ಇನ್ನೊಬ್ಬನಿಗೆ ಧಾರೆ ಎರೆದ ಪತಿರಾಯ.. ಇದೊಂಥರಾ ವಿಲಕ್ಷಣ!
ಯುಕೆ ಪ್ರಧಾನಿ ಜಾನ್ಸನ್ಗೆ ಇದು ಮೂರನೇ ಮದುವೆ. 1987ರಲ್ಲಿ ಮೊದಲು ಅಲ್ಲೆಗ್ರಾ ಮೊಸ್ಟಿನ್-ಓವನ್ ಅವರ ಕೈ ಹಿಡಿದಿದ್ದ ಬೋರಿಸ್, 1993ರಲ್ಲಿ ಅವರಿಂದ ಬೇರ್ಪಟ್ಟಿದ್ದರು. 1993ರಲ್ಲಿ ವೃತ್ತಿಯಲ್ಲಿ ವಕೀಲರಾಗಿದ್ದ ಮರೀನಾ ವೀಲರ್ ಜೊತೆ ವಿವಾಹವಾಗಿದ್ದು, ಇವರಿಗೆ ನಾಲ್ವರು ಮಕ್ಕಳಿದ್ದಾರೆ. ಆದರೆ 2018ರಲ್ಲಿ ಇಬ್ಬರೂ ದೂರವಾಗಿದ್ದರು.
2019ರಿಂದ ಕ್ಯಾರಿ ಸೈಮಂಡ್ಸ್ ಜೊತೆ ಲಿವಿಂಗ್ ಟುಗೆದರ್ನಲ್ಲಿದ್ದು ಕಳೆದ ವರ್ಷ ಈ ವಿಚಾರವನ್ನು ಬಹಿರಂಗಪಡಿಸಿ, ಮಗುವಿನ ನಿರೀಕ್ಷೆಯಲ್ಲಿರುವುದಾಗಿ ತಿಳಿಸಿದ್ದರು. 2020ರ ಏಪ್ರಿಲ್ನಲ್ಲಿ ಗಂಡು ಮಗು ಜನಿಸಿದ್ದು, ಆತನ ಹೆಸರು ವಿಲ್ಫ್ರೆಡ್ ಲಾರಿ ನಿಕೋಲಸ್ ಜಾನ್ಸನ್ ಆಗಿದೆ. ಇದೀಗ ಜಾನ್ಸನ್ ಹಾಗೂ ಸೈಮಂಡ್ಸ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.