ಲಂಡನ್: ಬ್ರಿಟನ್ ಹಾಲಿ ಪ್ರಧಾನಿ ಬೋರಿಸ್ ಜಾನ್ಸನ್ ಭಾರಿ ಬಹುಮತದೊಂದಿಗೆ ಮತ್ತೆ ಪ್ರಧಾನಿ ಪಟ್ಟಕ್ಕೇರಿದ್ದಾರೆ.
ಬೋರಿಸ್ ಜಾನ್ಸನ್ ನೇತೃತ್ವದ ಕನ್ಸರ್ವೇಟಿವ್ ಪಾರ್ಟಿ 2019ರ ಈ ಸಾರ್ವತ್ರಿಕ ಚುನಾವಣೆಯಲ್ಲಿ 364 ಸೀಟುಗಳಲ್ಲಿ ದಿಗ್ವಿಜಯ ಸಾಧಿಸಿದೆ. ತಮ್ಮ ಸ್ಥಾನ ಉಳಿಸಿಕೊಳ್ಳಲು 322 ಸೀಟುಗಳ ಅವಶ್ಯಕತೆ ಹೊಂದಿದ್ದ ಹಾಲಿ ಪ್ರಧಾನಿ ಜಾನ್ಸನ್ ಅದಕ್ಕೂ ಮೀರಿದ ಬೃಹತ್ ವಿಜಯ ಸಾಧಿಸಿದ್ದಾರೆ.
ಕನ್ಸರ್ವೇಟಿವ್ ಪಾರ್ಟಿಯ ಪ್ರಬಲ ಎದುರಾಳಿ ಲೇಬರ್ ಪಾರ್ಟಿ 203 ಸೀಟುಗಳಲ್ಲಿ ಜಯಿಸಿದೆ.1935ರ ಬಳಿಕ ಲೇಬರ್ ಪಾರ್ಟಿಯ ಕಳಪೆ ಚುನಾವಣೆ ಇದಾಗಿದೆ. ಇನ್ನುಳಿದಂತೆ ಸ್ಕಾಟಿಶ್ ನ್ಯಾಷನಲ್ ಪಾರ್ಟಿ 48 ಹಾಗೂ ಲಿಬರಲ್ ಡೆಮಾಕ್ರಟ್ಸ್ 11 ಸೀಟು ಸಂಪಾದಿಸಿದೆ.
![UK exit poll shows Boris Johnson's Conservative Party heading for clear majority](https://etvbharatimages.akamaized.net/etvbharat/prod-images/5357706_uk.jpg)
650 ಸೀಟುಗಳಿರುವ ಬ್ರಿಟನ್ ಪಾರ್ಲಿಮೆಂಟಿಗೆ ಗುರುವಾರ ಮತದಾನ ನಡೆದಿತ್ತು. ಕನ್ಸರ್ವೇಟಿವ್ ಪಾರ್ಟಿ 350ಕ್ಕೂ ಅಧಿಕ ಸೀಟುಗಳಲ್ಲಿ ಗೆಲ್ಲುವ ಮೂಲಕ 1987ರ ಬಳಿಕ ಪಕ್ಷವೊಂದಕ್ಕೆ ದೊರೆತ ಅತಿದೊಡ್ಡ ಗೆಲುವು ಇದಾಗಿದೆ. 1987ರಲ್ಲಿ ಮಾರ್ಗರೆಟ್ ಥ್ಯಾಚರ್ ನೇತೃತ್ವದಲ್ಲಿ ಕನ್ಸರ್ವೇಟಿವ್ ಪಾರ್ಟಿ 376 ಸೀಟು ಗೆದ್ದು ಬೀಗಿತ್ತು.
ಭಾರತೀಯ ಅಳಿಯ ಬೋರಿಸ್:
ಪ್ರಧಾನಿ ಪಟ್ಟಕ್ಕೇರಿರುವ ಬೋರಿಸ್ ಜಾನ್ಸನ್ ಹಾಗೂ ಭಾರತಕ್ಕೆ ಒಂದು ವಿಶೇಷ ಸಂಬಂಧವಿದೆ. ಅಸಲಿಗೆ ಬೋರಿಸ್ ಜಾನ್ಸನ್ ಭಾರತದ ಅಳಿಯ. ಹಲವರಿಗೆ ತಿಳಿಯದ ನೂತನ ಬ್ರಿಟನ್ ಪ್ರಧಾನಿಯ ಭಾರತದ ಕನೆಕ್ಷನ್ ಕುರಿತ ಮಾಹಿತಿ ಇಲ್ಲಿದೆ.
ಬೋರಿಸ್ ಜಾನ್ಸನ್ 1993ರಲ್ಲಿ ಭಾರತೀಯ ಸಂಜಾತೆ ಮರಿನಾ ವ್ಹೀಲರ್ರನ್ನು ವರಿಸಿದ್ದರು. ಸುಮಾರು 25 ವರ್ಷದ ಸುಖ ದಾಂಪತ್ಯದಲ್ಲಿ ನಾಲ್ವರು ಮಕ್ಕಳನ್ನು ಪಡೆದಿದ್ದ ಈ ದಂಪತಿ 2018ರಲ್ಲಿ ಬೇರ್ಪಟ್ಟಿದ್ದರು.
![UK exit poll shows Boris Johnson's Conservative Party heading for clear majority](https://etvbharatimages.akamaized.net/etvbharat/prod-images/5357706_borris.jpg)
ಭಾರತೀಯ ಮೂಲದ ಮರಿನಾರನ್ನು ಮದುವೆಯಾದ ಬಳಿಕ ಬೋರಿಸ್ ಹಲವಾರು ಬಾರಿ ಭಾರತಕ್ಕೆ ಬಂದಿದ್ದರು. ಹೀಗಾಗಿ ಬೋರಿಸ್ ಹಾಗೂ ಭಾರತದ ಸಂಬಂಧ ದಶಕಗಳಷ್ಟು ಹಳೆಯದು.
ಮರಿನಾ ತಾಯಿ ದೀಪ್ ಸಿಂಗ್ ಖ್ಯಾತ ಪತ್ರಕರ್ತ ಖುಷ್ವಂತ್ ಸಿಂಗ್ ಅವರ ಕಿರಿಯ ಸಹೋದರ ದಲ್ಜೀಜ್ ಸಿಂಗ್ರನ್ನು ವಿವಾಹವಾಗಿದ್ದರು.